Virat Kohli: ಶತಕದ ಬಗ್ಗೆ ಯೋಚಿಸದಿದ್ದರೂ ಜನರು ಬಿಡಲಿಲ್ಲ: ದ್ರಾವಿಡ್ ಜೊತೆ ಕೊಹ್ಲಿಯ ಮನದಾಳದ ಮಾತು

Virat Kohli's Honest Answer To Rahul Dravid

India vs Australia: ಅಹಮದಾಬಾದ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಇದು 2019 ರ ಬಳಿಕ ಕಿಂಗ್ ಕೊಹ್ಲಿ ಬ್ಯಾಟ್​ನಿಂದ  ಟೆಸ್ಟ್​ ಕ್ರಿಕೆಟ್​ನಲ್ಲಿ ಮೂಡಿಬಂದ ಮೊದಲ ಶತಕವಾಗಿದೆ. ಅಂದರೆ ಬರೋಬ್ಬರಿ 1205 ದಿನಗಳ ಬಳಿಕ ವಿರಾಟ್ ಬ್ಯಾಟ್​ನಿಂದ ಸೆಂಚುರಿ ಬಾರಿಸಿದ್ದಾರೆ. ಇದರ ನಡುವೆ ತಾನು ಎದುರಿಸಿದ ಪ್ರಶ್ನೆಗಳ ಬಗ್ಗೆ ಖುದ್ದು ವಿರಾಟ್ ಕೊಹ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಈ ವಿಶೇಷ ಸಂವಾದದ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಹಂಚಿಕೊಂಡಿದೆ.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಭಾರತ ತಂಡ ಕೋಚ್ ರಾಹುಲ್ ದ್ರಾವಿಡ್ ಚಿಟ್ ಚಾಟ್ ನಡೆಸಿದ್ದರು. ಈ ವೇಳೆ ದೀರ್ಘಾವಧಿಯವರೆಗೆ ಶತಕ ಬಾರಿಸದಿರುವುದು ಕಷ್ಟಕರವಾಗಿತ್ತಾ? ಎಂಬ ಪ್ರಶ್ನೆಯನ್ನು ಟೀಮ್ ಇಂಡಿಯಾ ಕೋಚ್ ಕೊಹ್ಲಿಯ ಮುಂದಿಟ್ಟಿದ್ದರು.

ಈ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ, ನಿಜ ಹೇಳಬೇಕೆಂದರೆ, ನನ್ನದೇ ಕೆಲ ನ್ಯೂನತೆಗಳಿಂದಾಗಿ ನಾನು ಸ್ವಲ್ಪ ಮಟ್ಟಿಗೆ ಹಿನ್ನಡೆ ಅನುಭವಿಸಿದ್ದೇನೆ. ನಾವೆಲ್ಲರೂ ಕೆಲವು ಹಂತದಲ್ಲಿ ಅಥವಾ ಇನ್ನೊಂದು ಹಂತಗಳಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸಿದ್ದೇವೆ. ನಾನು ಅದನ್ನು ಸ್ವಲ್ಪ ಮಟ್ಟಿಗೆ ದೀರ್ಘಾವಧಿಗೆ ಕೊಂಡೊಯ್ದಿದ್ದೇನೆ ಎಂದು ಭಾವಿಸುತ್ತೇನೆ ಎಂದರು.

ಇದೇ ವೇಳೆ ನಾನು ಎಂದಿಗೂ ಮೈಲಿಗಲ್ಲುಗಳಿಗಾಗಿ ಆಡಲಿಲ್ಲ ಎಂದು ತಿಳಿಸಿರುವ ಕೊಹ್ಲಿ, ಶತಕ ಹಾಗೂ ದಾಖಲೆಗಳು ಎಂದಿಗೂ ನನ್ನ ಮನಸ್ಸಿರಲಿಲ್ಲ. ಶತಕ ಗಳಿಸುವ ಮುನ್ನ ನಾನು ತಂಡದ ಬಗ್ಗೆ ಯೋಚಿಸುತ್ತಿದ್ದೆ. ತಂಡಕ್ಕೆ ಏನು ಅಗತ್ಯವೋ ಅದಕ್ಕೆ ತಕ್ಕಂತೆ ಆಡುತ್ತಿದ್ದೆ.

ಹೀಗಾಗಿ ನಾನು ಯಾವತ್ತೂ ಶತಕದ ಬಗ್ಗೆ ಯೋಚಿಸುತ್ತಿರಲಿಲ್ಲ. ಆದರೆ ನಾನು ಯೋಚಿಸದಿದ್ದರೂ ಜನರು ಮಾತ್ರ ಅದನ್ನು ಮರೆಯಲು ಬಿಡುತ್ತಿರಲಿಲ್ಲ. ಟೆಸ್ಟ್‌ನಲ್ಲಿ ಶತಕ ಸಿಡಿಸದಿದ್ದಾಗ, ಈ ಪ್ರಶ್ನೆ ಎಲ್ಲೆಡೆ ಕೇಳಲಾಗುತ್ತಿತ್ತು. ಬಸ್ ಚಾಲಕ, ಹೋಟೆಲ್ ಸಿಬ್ಬಂದಿ ಅಥವಾ ಲಿಫ್ಟ್‌ಮ್ಯಾನ್…ಹೀಗೆ ಪ್ರತಿಯೊಬ್ಬರು ನೀವು ಟೆಸ್ಟ್‌ನಲ್ಲಿ ಯಾವಾಗ ಶತಕ ಬಾರಿಸುತ್ತೀರಿ ಎಂದು ನನ್ನನ್ನು ಪ್ರಶ್ನಿಸುತ್ತಿದ್ದರು ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಕಿಂಗ್ ಕೊಹ್ಲಿ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಮೂರುವರೆ ವರ್ಷಗಳ ಬಳಿಕ ಬ್ಯಾಟ್ ಮೇಲೆತ್ತಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್ ಕೆರಿಯರ್​ನಲ್ಲಿ 28 ಶತಕಗಳ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: Virat Kohli: 40 ವರ್ಷಗಳ ಹಳೆಯ ಸಾಧನೆಯನ್ನು ಪುನರಾವರ್ತಿಸಿದ ವಿರಾಟ್ ಕೊಹ್ಲಿ

ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 75 ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾತ್ರ ಈ ಸಾಧನೆ ಮಾಡಿದ್ದರು. ಇದೀಗ ಕಿಂಗ್ ಕೊಹ್ಲಿ ಕೂಡ ಈ ವಿಶೇಷ ಸಾಧಕರಲ್ಲಿ ಗುರುತಿಸಿಕೊಂಡಿದ್ದಾರೆ.

 

 

source https://tv9kannada.com/sports/cricket-news/virat-kohlis-honest-answer-to-rahul-dravid-zp-au50-536270.html

Leave a Reply

Your email address will not be published. Required fields are marked *