ಸಿಡ್ನಿಯಲ್ಲಿ ಕ್ಲೀನ್ ಸ್ವೀಪ್ ತಪ್ಪಿಸಲು ಟೀಂ ಇಂಡಿಯಾ ಸಜ್ಜು: ಕುಲ್ದೀಪ್, ಪ್ರಸಿದ್ಧ್‌ಗೆ ಅವಕಾಶ ?

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಸೋತಿರುವ ಟೀಂ ಇಂಡಿಯಾ (India vs Australia) ಈಗ ಸಿಡ್ನಿಯಲ್ಲಿ ಕ್ಲೀನ್ ಸ್ವೀಪ್ ತಪ್ಪಿಸಲು ಪ್ರಯತ್ನಿಸುತ್ತಿದೆ. ಆತಿಥೇಯರು ಪರ್ತ್ ಮತ್ತು ಅಡಿಲೇಡ್ ಏಕದಿನ ಪಂದ್ಯವನ್ನು ಗೆದ್ದು ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದಾರೆ.

ಈಗ, ಟೀಂ ಇಂಡಿಯಾ ತಮ್ಮ ಸೋಲಿನ ನೋವನ್ನು ನಿವಾರಿಸಲು ಯಾವುದೇ ಬೆಲೆ ತೆತ್ತಾದರೂ ಮೂರನೇ ಪಂದ್ಯವನ್ನು ಗೆಲ್ಲಲು ಸಜ್ಜಾಗಿದೆ. ಸಿಡ್ನಿಯಲ್ಲಿ ನಡೆಯಲಿರುವ ಫೈನಲ್ ಏಕದಿನ ಪಂದ್ಯಕ್ಕೆ ಭಾರತೀಯ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕೆಲವು ಬದಲಾವಣೆಗಳು ಸಂಭವಿಸಬಹುದು. ಕುಲ್ದೀಪ್ ಯಾದವ್ (Kuldeep Yadav) ಹಾಗೂ ಪ್ರಸಿದ್ಧ್ ಕೃಷ್ಣ (Prasidh Krishna) ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಗಂಭೀರ್ ದತ್ತು ಪುತ್ರನೆಂದು ಪ್ರಸಿದ್ಧನಾಗಿರುವ ಹರ್ಷಿತ್ ರಾಣಾ ಮತ್ತು ವಾಷಿಂಗ್ಟನ್ ಸುಂದರ್​ ಅವರನ್ನು ಹೊರಗಿಡಬಹುದು ಎನ್ನಲಾಗುತ್ತಿದೆ.

ಕುಲ್ದೀಪ್, ಪ್ರಸಿದ್ಧ್​ಗೆ ಅವಕಾಶ?
ಅಕ್ಟೋಬರ್ 25 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಹಾಗೂ ಪ್ರಸಿದ್ಧ್ ಕೃಷ್ಣಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು. 2025ರ ಏಷ್ಯಾಕಪ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಕುಲ್ದೀಪ್‌ರನ್ನು ಆಸ್ಟ್ರೇಲಿಯಾ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಡಿಸಲಿಲ್ಲ. ಪಿಚ್ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿದ್ದರೂ ಅವರು ಬೆಂಚ್‌ನಲ್ಲೇ ಉಳಿದರು. ಎರಡನೇ ಪಂದ್ಯದಲ್ಲಿ ಆಡಮ್ ಜಂಪಾ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದು, ಸ್ಪಿನ್ನರ್‌ಗಳ ಪಾತ್ರ ಎಷ್ಟು ಮುಖ್ಯವೆಂಬುದನ್ನು ತೋರಿಸಿತು. ಹೀಗಾಗಿ ಸಿಡ್ನಿಯ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಕುಲ್ದೀಪ್‌ಗೆ ಅವಕಾಶ ಸಿಗುವ ನಿರೀಕ್ಷೆಯಿದೆ.

ಹಾಗೆಯೇ ಮೊದಲ ಎರಡು ಪಂದ್ಯಗಳಲ್ಲಿ ಸರಾಗವಾಗಿ ರನ್ ಬಿಟ್ಟುಕೊಟ್ಟ ಹರ್ಷಿತ್ ರಾಣಾ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಅವಕಾಶ ಸಿಗಬಹುದು. ಹರ್ಷಿತ್ ಎರಡನೇ ಪಂದ್ಯದಲ್ಲಿ 2 ವಿಕೆಟ್ ಪಡೆದರೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಮೊದಲ ಪಂದ್ಯದಲ್ಲೂ ಅವರ ಪ್ರದರ್ಶನ ತೃಪ್ತಿಕರವಾಗಿರಲಿಲ್ಲ. ಹೀಗಾಗಿ ಪ್ರಸಿದ್ಧ್ ಅವರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ.

ಭಾರತದ ಸಂಭಾವ್ಯ ಆಡುವ XI:
ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಪ್ರಸಿದ್ಧ್ ಕೃಷ್ಣ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

Views: 1

Leave a Reply

Your email address will not be published. Required fields are marked *