ನಿವೇಶನ ಮಾರಾಟ ಹೆಸರಿನಲ್ಲಿ ನಟ ಮಾಸ್ಟರ್ ಆನಂದ್​ಗೆ ವಂಚನೆ – ದೂರು ದಾಖಲು

ನಿವೇಶನ ನೀಡೋದಾಗಿ ಮಲ್ಟಿ ಲೀಪ್ ವೆಂಚರ್ಸ್ ಹೆಸರಿನ ಕಂಪನಿಯು 18.50 ಲಕ್ಷ ರೂಪಾಯಿ ವಂಚನೆ ಮಾಡಿದೆ ಎಂದು ಕಂಪನಿ ವಿರುದ್ಧ ಚಂದ್ರಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದಾರೆ.

ಬೆಂಗಳೂರು : ಅಭಿಮಾನಿ ಎಂದು ಪರಿಚಯವಾದ ಉದ್ಯಮಿಯೊಬ್ಬರಿಂದ ನಟ ಮಾಸ್ಟರ್ ಆನಂದ್​ಗೆ 18.5 ಲಕ್ಷ ರೂ.

ವಂಚಿಸಿದ ಪ್ರಕರಣ ಚಂದ್ರಾಲೇಔಟ್ ಠಾಣೆಯಲ್ಲಿ ದಾಖಲಾಗಿದೆ. ನಿವೇಶನ ನೀಡುವುದಾಗಿ ನಂಬಿಸಿ 2020ರ ಸೆಪ್ಟಂಬರ್ ನಿಂದ 2021ರ ಅಕ್ಟೋಬರ್ ಅವಧಿಯಲ್ಲಿ 18.5 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆಂದು ಮಲ್ಟಿ ಲೀಪ್ ವೆಂಚರ್ಸ್ ಕಂಪನಿಯ ಸುಧೀರ್ ಹಾಗೂ ಅವರ ಆಪ್ತ ಸಹಾಯಕಿ ಮನಿಕಾ ಎಂಬುವರ ವಿರುದ್ಧ ನಟ ದೂರು ನೀಡಿದ್ದಾರೆ.

2020 ರಲ್ಲಿ ಕೊಮ್ಮಘಟ್ಟದ ರಾಮಸಂದ್ರ ಗ್ರಾಮಕ್ಕೆ ಶೂಟಿಂಗ್​ಗೆ ತೆರಳಿದ್ದ ವೇಳೆ ನಿವೇಶನಗಳ ವೀಕ್ಷಣೆ ಮಾಡಿದ್ದ ನಟ ಮಾಸ್ಟರ್ ಆನಂದ್, ಖರೀದಿಗೆ ಉತ್ಸಾಹ ತೋರಿದ್ದರು. ಈ ವೇಳೆ, ಪರಿಚಯವಾದ ಆರೋಪಿ ಮನಿಕಾ, ನಿವೇಶನ ಖರೀದಿಸಲು ಕೆಲ ಆಕರ್ಷಕ ಸಾಲ ಸೌಲಭ್ಯದ ಬಗ್ಗೆ ವಿವರಿಸಿದ್ದರು. ನಂತರ ರಾಮಸಂದ್ರದ ಎರಡು ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನ ತೋರಿಸಿದ್ದ ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ಜೊತೆ 70 ಲಕ್ಷಕ್ಕೆ ಆನಂದ್ ಮನೆ ಖರೀದಿ ಒಪ್ಪಂದ ಮಾಡಿಕೊಂಡಿದ್ದರು.

ಬಳಿಕ, ಹಂತ ಹಂತವಾಗಿ 18.5 ಲಕ್ಷವನ್ನು ನೀಡಿದ್ದರು. ಆನಂದ್ ಹಾಗೂ ಅವರ ಪತ್ನಿ ಯಶಸ್ವಿನಿ ಹೆಸರಿನಲ್ಲಿ ಮಲ್ಟಿ ಲೀಪ್ ಕಂಪನಿ ಖರೀದಿ ಕರಾರು ಪತ್ರ ಮಾಡಿಕೊಟ್ಟಿತ್ತು. ಆದರೆ, ಈ ನಡುವೆ ಕಂಪನಿ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿ‌ ಕಳ್ಳಾಟ ಆಡಿದೆ. ಈ ಬಗ್ಗೆ ವಿಚಾರಿಸಿದಾಗ ಯಾವುದೇ ಸ್ಪಂದನೆ ಸಹ ನೀಡದೆ ಮುಂಗಡ ಹಣ ಸಹ ವಾಪಸ್ ಮಾಡಿಲ್ಲ ಎಂದು ದೂರಿರುವ ಆನಂದ್, ಚಂದ್ರಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಾಸ್ಟರ್​ ಆನಂದ್ ನೀಡಿದ ದೂರಿನನ್ವಯ BUDS (ಅನಿಯಂತ್ರಿತ ಉಳಿತಾಯ ಯೋಜನೆಗಳ ನಿಷೇಧ) ಕಾಯ್ದೆ 2019 ರಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Source : https://m.dailyhunt.in/news/india/kannada/etvbhar9348944527258-epaper-etvbhkn/niveshana+maaraata+hesarinalli+nata+maastar+aanandh+ge+vanchane+duru+daakhalu-newsid-n512813612?listname=newspaperLanding&index=23&topicIndex=0&mode=pwa&action=click

Leave a Reply

Your email address will not be published. Required fields are marked *