Kuwait Mangaf Building Fire 2024: ಬೇಸರದ ಸಂಗತಿಯೆಂದರೆ ಕುವೈತ್‌ನಲ್ಲಿ ಸಂಭವಿಸಿದ ಈ ದಾರುಣ ಬೆಂಕಿ ದುರಂತದಲ್ಲಿ ಒಬ್ಬ ಕನ್ನಡಿಗನೂ ಮೃತಪಟ್ಟಿದ್ದಾರೆ. ಚಿಕ್ಕಂದಿನಲ್ಲೇ ಬಡತನದ ಬೇಗೆಯಿಂದ ಪಾರಾಗುವ ಛಲ ಮತ್ತು ತನ್ನ ಕುಟುಂಬವನ್ನು ಸಾಕುವ ಕನಸು ಹೊತ್ತು ಕುವೈತ್‌ಗೆ ತೆರಳಿದ್ದ ಕನ್ನಡಿಗ ವಿಜಯ್ ಕುಮಾರ್ ಇದೀಗ ಶವವಾಗಿ ವಾಪಸ್ ಬಂದಿದ್ದಾರೆ.

ಬೆಂಗಳೂರು: ಕುವೈತ್ ಅಗ್ನಿ ದುರಂತದಲ್ಲಿ (Kuwait Fire Accident) ಮೃತಪಟ್ಟ 45 ಭಾರತೀಯರ ಮೃತದೇಹಗಳನ್ನು ಹೊತ್ತ ಭಾರತೀಯ ವಾಯುಪಡೆಯ (IAF) ವಿಮಾನ ಕೇರಳದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಕುವೈತ್‌ನ ಮಂಗಾಫ್ ನಗರದ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಒಟ್ಟು 45 ಭಾರತೀಯ ನಾಗರಿಕರು ಸಾವನ್ನಪ್ಪಿದ್ದರು. ಕೊಚ್ಚಿಯಲ್ಲಿ ಬಂದಿಳಿದ ಭಾರತೀಯರ ಮೃತದೇಹಗಳನ್ನು ಮರಳಿ ತರಲು ಭಾರತೀಯ ವಾಯುಪಡೆಯ ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನವನ್ನು ರವಾನಿಸಲಾಗಿತ್ತು. ಇದೀಗ ಈ ವಿಮಾನ ಕೇರಳಕ್ಕೆ ಬಂದಿಳಿದಿದೆ. ಈ ವೇಳೆ ಏರ್‌ಪೋರ್ಟ್‌ನಲ್ಲಿ ಹಾಜರಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಮೃತಪಟ್ಟ ಎಲ್ಲರಿಗೂ ವಿಮಾನ ನಿಲ್ದಾಣದಲ್ಲಿಯೇ ಶ್ರದ್ದಾಂಜಲಿ ಸಲ್ಲಿಸಿದರು.
ಕನ್ನಡಿಗನ ದಾರುಣ ಸಾವು!
ಕನ್ನಡಿಗರಿಗೆ ಇನ್ನೂ ಹೆಚ್ಚಿನ ಬೇಸರದ ಸಂಗತಿಯೆಂದರೆ ಕುವೈತ್‌ನಲ್ಲಿ ಸಂಭವಿಸಿದ ಈ ದಾರುಣ ಬೆಂಕಿ ದುರಂತದಲ್ಲಿ ಒಬ್ಬ ಕನ್ನಡಿಗನೂ ಮೃತಪಟ್ಟಿದ್ದಾರೆ. ಚಿಕ್ಕಂದಿನಲ್ಲೇ ಬಡತನದ ಬೇಗೆಯಿಂದ ಪಾರಾಗುವ ಛಲ ಮತ್ತು ತನ್ನ ಕುಟುಂಬವನ್ನು ಸಾಕುವ ಕನಸು ಹೊತ್ತು ಕುವೈತ್‌ಗೆ ತೆರಳಿದ್ದ ಕನ್ನಡಿಗ ವಿಜಯ್ ಕುಮಾರ್ ಇದೀಗ ಶವವಾಗಿ ವಾಪಸ್ ಬಂದಿದ್ದಾರೆ.
ಕುವೈತ್‌ನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಕನ್ನಡಿಗ, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ವ್ಯಕ್ತಿ ವಿಜಯಕುಮಾರ್ (40) ಅವರು ದಾರುಣವಾಗಿ ಮೃತಪಟ್ಟಿದ್ದಾರೆ. ಕಳೆದ ಹತ್ತು ವರ್ಷದಿಂದ ಕುವೈತ್‌ನಲ್ಲಿ ಡ್ರೈವರ್ ಆಗಿ ಕೆಲಸ ಮಾಡ್ತಿರುವ ವಿಜಯಕುಮಾರ್ ಅವರು ಕಳೆದ ವರ್ಷವಷ್ಟೇ ಹುಟ್ಟೂರಿಗೆ ಬಂದು ವಾಪಸ್ ಕುವೈತ್‌ಗೆ ಹೋಗಿದ್ದರು. ಆದರೆ ಸದ್ಯದಲ್ಲೇ ಪುನಃ ಊರಿಗೆ ಬರುವ ಕನಸು ಕಂಡಿದ್ದ ಅವರು ಇದೀಗ ಹೆಣವಾಗಿ ವಾಪಸ್ ಬಂದಿದ್ದಾರೆ. ತನ್ನ ಮನೆಯ ಸದಸ್ಯ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಸದ್ಯ ಮೃತದೇಹದ ಆಗಮನಕ್ಕಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ.
ಕುವೈತ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ಗರಿಷ್ಠ ಸಂಖ್ಯೆಯ ಜನರು (23) ಕೇರಳದ ಪ್ರಜೆಗಳು. ಇದಾದ ಬಳಿಕ ತಮಿಳುನಾಡು (7) ಎರಡನೇ ಸ್ಥಾನದಲ್ಲಿದೆ. ಇದಲ್ಲದೆ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದ ತಲಾ 3 ನಾಗರಿಕರು ಸಹ ಸಾವನ್ನಪ್ಪಿದ್ದಾರೆ. ಇನ್ನು ಒಡಿಶಾ ರಾಜ್ಯದ ಇಬ್ಬರು ಸಾವನ್ನಪ್ಪಿದ್ದು, ಇದಲ್ಲದೆ, ಮಹಾರಾಷ್ಟ್ರ, ಕರ್ನಾಟಕ, ಬಿಹಾರ, ಜಾರ್ಖಂಡ್, ಬಂಗಾಳ, ಪಂಜಾಬ್ ಮತ್ತು ಹರಿಯಾಣದ ತಲಾ ಒಬ್ಬ ನಾಗರಿಕರು ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸಿದ್ದು ಹೇಗೆ?
ಕುವೈತ್ ಮಾಧ್ಯಮಗಳ ಪ್ರಕಾರ, ಬೃಹತ್ ಕಟ್ಟಡದ ಅಡುಗೆಮನೆಯೊಂದರಲ್ಲಿ ಆರಂಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಈ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿ ಅದರ ಹೊಗೆಯಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ. ಜೂನ್ 12 ರಂದು (ಬುಧವಾರ) ಮುಂಜಾನೆ 4.30ಕ್ಕೆ ಅಪಘಾತದ ಬಗ್ಗೆ ಅಲ್-ಅಹ್ಮದಿ ಗವರ್ನರೇಟ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಅಂದರೆ ಬೆಳಗಿನ ಜಾವ ಜನ ನಿದ್ದೆಯ ಮಂಪರಿನಲ್ಲಿರುವಾಗಲೇ ಬೆಂಕಿ ಹೊತ್ತಿಕೊಂಡಿದೆ.
ಕುವೈತ್ ಮಾಧ್ಯಮಗಳ ಪ್ರಕಾರ, ನಿರ್ಮಾಣ ಕಂಪನಿ ಎನ್‌ಬಿಟಿಸಿ ಗ್ರೂಪ್ 195 ಕ್ಕೂ ಹೆಚ್ಚು ಕಾರ್ಮಿಕರನ್ನು ಇರಿಸಲು ಈ ಕಟ್ಟಡವನ್ನು ಬಾಡಿಗೆಗೆ ನೀಡಿತ್ತು, ಅವರಲ್ಲಿ ಹೆಚ್ಚಿನವರು ಕೇರಳ, ತಮಿಳುನಾಡು ಮತ್ತು ಭಾರತದ ಉತ್ತರ ರಾಜ್ಯಗಳಿಂದ ಬಂದವರಾಗಿದ್ದಾರೆ. ಕಟ್ಟಡದಲ್ಲಿದ್ದ 176 ಭಾರತೀಯ ಕಾರ್ಮಿಕರಲ್ಲಿ 45 ಮಂದಿ ಸಾವನ್ನಪ್ಪಿದ್ದರೆ, 33 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಉಳಿದವರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ.