ಹೊಲದಲ್ಲಿ ಚಿನ್ನದ ಬಿಸ್ಕತ್ ಸಿಕ್ಕಿದೆ ಎಂದು ನಂಬಿಸಿ ಕೂಲಿ ಕಾರ್ಮಿಕನಿಗೆ ₹4 ಲಕ್ಷ ವಂಚನೆ.

ನಕಲಿ ಚಿನ್ನ ಕೊಟ್ಟು, 4 ಲಕ್ಷ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಹೊಲದಲ್ಲಿ ಚಿನ್ನದ ಬಿಸ್ಕತ್ ಸಿಕ್ಕಿದೆ ಎಂದು ವ್ಯಕ್ತಿಯೊಬ್ಬರಿಗೆ ನಂಬಿಸಿ 4 ಲಕ್ಷ ರೂ. ವಂಚಿಸಿರುವ ಕುರಿತಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಹಳ್ಳೂರಿನವರಾದ ರಂಗಪ್ಪ ಬೋವಿ ನೆಕ್ಕಿಲ್ ವಂಚನೆಗೊಳಗಾದವರು. ಕೂಲಿ ಕೆಲಸ ಮಾಡುವ ಇವರ ಮೊಬೈಲ್​ಗೆ ವ್ಯಕ್ತಿಯೊಬ್ಬರು ಫೋನ್ ಕರೆ ಮಾಡಿ, ”ನನ್ನಲ್ಲಿ ಚಿನ್ನದ ಬಿಸ್ಕತ್​ಗಳು ಇವೆ, ಅವುಗಳನ್ನು ಕಡಿಮೆ ಬೆಲೆ ನೀಡುವುದಾಗಿ ತಿಳಿಸಿದ್ದರು. ಬಳಿಕ, ಆ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ರಂಗಪ್ಪನ ಮನೆಗೆ ಬಂದು, ತಮ್ಮ ಹೊಲದಲ್ಲಿ ಚಿನ್ನದ ಬಿಸ್ಕತ್​​ ಸಿಕ್ಕಿವೆ. ಅವುಗಳನ್ನು ನಿಮಗೆ 10 ಲಕ್ಷ ರೂ.ಗಳಿಗೆ ನೀಡುತ್ತೇವೆ” ಎಂದು ತಿಳಿಸಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.

”ಬಳಿಕ, ರಂಗಪ್ಪ ಅವರು 8 ಲಕ್ಷ ರೂ. ಕೊಡುವುದಾಗಿ ಹೇಳಿದ್ದು, ಅದಕ್ಕೆ ಆರೋಪಿತ ವ್ಯಕ್ತಿಯು ಒಪ್ಪಿಕೊಂಡಿದ್ದ. ತದನಂತರ, ವ್ಯಕ್ತಿಯು ತನಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿ ನಾಲ್ಕು ಲಕ್ಷ ರೂ. ಕೊಡಿ ಎಂದು ಕೇಳಿದ್ದಾನೆ. ನಂತರ ಚಿನ್ನ ಅಸಲಿ ಎಂದು ನಂಬಿಸಲು 05 ಮಿಲಿ ಗ್ರಾಂನಷ್ಟು ಚಿನ್ನವನ್ನು ರಂಗಪ್ಪಗೆ ಕೊಟ್ಟಿದ್ದಾನೆ. ಆ ಬಳಿಕ 29-06-2024ರಿಂದ 09-07-2024ರ ವರೆಗೆ ಒಟ್ಟು 03 ಬಾರಿ ಇವರ ಮನೆಗೆ ಆರೋಪಿ ಬಂದು ಹೋಗಿದ್ದಾನೆ. ಈ ಸಂದರ್ಭದಲ್ಲಿ ರಂಗಪ್ಪ ಮನೆಯಲ್ಲಿರುವಾಗ ನಕಲಿ ಚಿನ್ನವನ್ನು ನೀಡಿ 4 ಲಕ್ಷ ರೂ. ಹಣವನ್ನು ಪಡೆದುಕೊಂಡು ಮೋಸ ಮಾಡಲಾಗಿದೆ” ಎಂದು ದೂರು ನೀಡಲಾಗಿದೆ.

ಆರೋಪಿತ ವ್ಯಕ್ತಿಯು ನಾಲ್ಕು ಬೇರೆ ಬೇರೆ ಮೊಬೈಲ್​ ನಂಬರ್​ಗಳಿಂದ ಕರೆ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ರಂಗಪ್ಪ ಬೋವಿ ನೆಕ್ಕಿಲ್ ನೀಡಿರುವ ದೂರಿನ ಅನ್ವಯ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Source : https://www.etvbharat.com/kn/!state/case-of-cheating-laborer-with-4-lakh-in-mangaluru-karnataka-news-kas24111504550

Leave a Reply

Your email address will not be published. Required fields are marked *