ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ,ಆ.೨೧ : ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನೆಲ್ಲೆಡೆ ಕಳೆದ ರಾತ್ರಿ ಧಾರಕಾರ ಮಳೆ ಸುರಿದು, ಜಮೀನು ಹಾಗೂ ಮನೆಗಳಿಗೆ ನುಗ್ಗಿರುವ ನೀರಿನಿಂದಾಗಿ ಅಪಾರ ಪ್ರಮಾಣದ ಬೆಳೆ ಮತ್ತು ದಾಸ್ತಾನು ನಾಶವಾಗಿರುವ ಘಟನೆ ನಡೆದಿದೆ.
![](https://samagrasuddi.co.in/wp-content/uploads/2024/08/image-78.png)
ಮನಮೈನಹಟ್ಟಿ ಗ್ರಾಮದ ಕೆರೆ ಕೋಡಿ ಬಿದ್ದು ಚಳ್ಳಕೆರೆ ನಾಯಕನಹಟ್ಟಿಗೆ ತೆರಳುವ ಪ್ರಮುಖ ರಸ್ತೆ ಪೂರ್ಣ ಜಲಾವೃತಗೊಂಡಿದೆ. ಪ್ರಮುಖ ರಸ್ತೆಯು ಸೇರಿದಂತೆ ಗ್ರಾಮದ ಬಹುತೇಕ ರಸ್ತೆಗಳಲ್ಲಿ ಮೂರ್ನಾಲ್ಕು ಅಡಿಯಷ್ಟು ನೀರು ಅರಿಯುತ್ತಿದೆ. ರಸ್ತೆ ಮೇಲೆ ನೀರು ರಭಸವಾಗಿ ಹರಿಯುತ್ತಿರುವುದರಿಂದ ರಸ್ತೆ ದಾಟುವುದಕ್ಕೆ ವಾಹನಗಳು ಹರಸಾಹಸ ಪಡುತ್ತಿವೆ. ಇದಲ್ಲದೆ, ಕೆರೆ ಕೋಡಿ ಬಿದ್ದಿದ್ದರಿಂದ ಸೇತುವೆಯು ತುಂಬಿ ಮೇಲ್ಬಾಗದಲ್ಲಿ ನೀರು ಹರಿಯುತ್ತಿರುವುದರಿಂದ ಶಾಲಾ ಮಕ್ಕಳಿಗೂ ಸೇತುವೆಯು ಕಂಟಕವಾಗಿತ್ತು. ಇದರಿಂದಾಗಿ ಆತಂಕದಲ್ಲೇ ಶಾಲಾ ಮಕ್ಕಳು ಹಾಗೂ ಜನರು ರಸ್ತೆ ದಾಟುವಂತಾಗಿತ್ತು.
ಕೆರೆ ಕೋಡಿ ಬೀಳಲಿದೆ ಎಂದು ಅಲ್ಲಿನ ಜನರು ಅಧಿಕಾರಿಗಳ ಗಮನಕ್ಕೆ ಮೊದಲೇ ತಿಳಿಸಿದ್ದರು ಸಹ ಯಾವುದೇ ಪ್ರಯೋಜನ ಆಗಿಲ್ಲ ಎಂದು ಜನರು ದೂರಿದ್ದು, ಬಹಳಷ್ಟು ಅನಾಹುತ ಆಗಿದ್ದರು ಕೂಡ ಅಧಿಕಾರಿಗಳು ಇನ್ನೂ ಸ್ಥಳಕ್ಕೆ ಆಗಮಿಸಿಲ್ಲ ಎಂದು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಗ್ರಾಮಸ್ಥರು ಕಿಡಿಕಾರಿದ್ದಾರೆ.
![](https://samagrasuddi.co.in/wp-content/uploads/2024/08/image-80-300x167.png)
ಮತ್ತೊಂದೆಡೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಪೊಲೀಸ್ ಠಾಣೆ ಆವರಣ ಸಂಪೂರ್ಣ ಜಲಾವೃತವಾಗಿದೆ. ಪೊಲೀಸ್ ಠಾಣೆ ಆವರಣದಲ್ಲಿ ಅತೀ ಹೆಚ್ಚು ನೀರು ನಿಂತಿದ್ದರಿಂದ ಪೊಲೀಸ್ ಸಿಬ್ಬಂದಿಗಳೇ ಠಾಣೆ ಒಳಗೆ ಹೋಗಲು ಅಗದೆ ಹೊರಗಡೆ ನಿಲ್ಲುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ಸಂಕಷ್ಟಗಳನ್ನು ಹೇಳಿಕೊಳ್ಳಲು ಬಂದ ಜನರು ಠಾಣೆಯ ಮುಂಭಾಗದಲ್ಲೇ ನಿಂತು, ದೂರು ಹೇಳುವ ಪರಿಸ್ಥಿತಿ ಕಂಡುಬಂದಿತು. ನಂತರ ನಾಯಕನಹಟ್ಟಿ ಪಟ್ಟಣ ಪಂಚಾಯಿತು ಸಿಬ್ಬಂದಿಯಿಂದ ನೀರು ಹೊರಹಾಕುವ ಕೆಲಸ ಮಾಡಲಾಯಿತು.
ಚಳ್ಳಕೆರೆ ಪಟ್ಟಣದ ರಹೀಂ ನಗರದ ಬಡಾವಣೆ ಹಾಗೂ ಏಕಾನಾಥೇಶ್ವರಿ ಬಡಾವಣೆಯ ೧೫೦ ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು,ಮನೆಗಳಲ್ಲಿದ್ದ ದವಸ ಧಾನ್ಯ, ಗೃಹ. ಬಳಕೆ ವಸ್ತುಗಳಿಗೆ ಹಾನಿಯಾಗಿದೆ. ರಹೀಂನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತ ಆಗಿದೆ.
ಮನಮೈನಹಟ್ಟಿ ಹಾಗೂ ಎನ್.ದೇವರಹಳ್ಳಿ ಗ್ರಾಮದ ಪ್ರಕಾಶ್ ತೇಜಸ್ವೀ ಕಿರಣ್ ಕುಮಾರ್ ಅವರ ಜಮೀನುಗಳಿಗರ ನೀರು ನುಗ್ಗಿದ್ದು, ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ, ಟಮೋಟ ಹಾಗೂ ಹೂವಿನ ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟ ಆಗಿದೆ.
ತಳಕು – ೪೯.೦೩, ಚಳ್ಳಕೆರೆ – ೪೪.೧೫ ಮೀ.ಮೀ ಮಳೆ ಆಗಿದ್ದು, ತಾಲ್ಲೂಕಿನೆಲ್ಲೆಡೆ ೩೪.೦೫ ಮೀ.ಮೀ. ನಷ್ಟು ಮಳೆ ಆಗಿ, ಅಪಾರ ಪ್ರಮಾಣದ ಬೆಳೆ ಹಾಗೂ ದಾಸ್ತಾನುಗಳು ನಾಶ ಅಗಿವೆ.