ಬೆಂಗಳೂರು: ಚಪ್ಪಲಿ ಕಳೆದು ಹೋಗಿದೆ ಎಂದು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿ

ವ್ಯಕ್ತಿಯೋರ್ವ ಚಪ್ಪಲಿ ಕಳೆದುಹೋಗಿದೆ ಎಂದು ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿರುವ ಘಟನೆ ಬೆಂಗಳೂರಿನ ಹೈಗ್ರೌಂಡ್ಸ್​​ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು : ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಅನ್ನಬೇಕೋ, ಅಥವಾ ಪೊಲೀಸ್ ಸಿಬ್ಬಂದಿಯ ಅಸಹಾಯಕತೆ ಅನ್ನಬೇಕೋ ಗೊತ್ತಿಲ್ಲ.

ಸಂಕಷ್ಟದಲ್ಲಿರುವವರಿಗೆ ತಕ್ಷಣ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಲು ಅನುಕೂಲವಾಗಲಿ‌ ಎಂದು ಚಾಲ್ತಿಯಲ್ಲಿರುವ 112 ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಚಪ್ಪಲಿ ಕಳೆದು ಹೋಗಿದೆ. ಹುಡುಕಿಕೊಡಿ ಎಂದು ದೂರು ನೀಡಿರುವ ವಿಚಿತ್ರ ಘಟನೆ ತಡರಾತ್ರಿ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭಾನುವಾರ ತಡರಾತ್ರಿ ಪೊಲೀಸ್ ನಿಯಂತ್ರಣ ಕೋಣೆಯ ಸಹಾಯವಾಣಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತಾನು ‘ಕಾರ್ ಸ್ಟ್ರೀಟ್ ನಲ್ಲಿರುವ ಬಾಲಂಭಟ್ಟ ಹಾಲ್​ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಹಿಂತಿರುಗಿ ಬಂದು ನೋಡಿದಾಗ ತನ್ನ ಚಪ್ಪಲಿ ಕಳೆದುಹೋಗಿದೆ. ಹುಡುಕಿಕೊಡಿ ಎಂದು ದೂರು ನೀಡಿದ್ದಾನೆ. ವಿಧಿಯಿರದೇ ಪೊಲೀಸ್ ನಿಯಂತ್ರಣ ಕೋಣೆಯ ಸಿಬ್ಬಂದಿ ಸಮೀಪದಲ್ಲಿ ಬೀಟ್ ನಲ್ಲಿದ್ದ ಹೊಯ್ಸಳ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ್ದ ಹೊಯ್ಸಳ ಸಿಬ್ಬಂದಿ ದೂರುದಾರನ ಜೊತೆ ಸೇರಿ ಚಪ್ಪಲಿ ಹುಡುಕಾಡಿ ಕೊನೆಗೆ ಚಪ್ಪಲಿ ಸಿಗದ ಕಾರಣ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ‌.

ಚಪ್ಪಲಿ ಕಳೆದು ಹೋದದ್ದಕ್ಕೆ ಆನ್​ಲೈನ್​ನಲ್ಲಿ ದೂರು ಸಲ್ಲಿಸಿದ್ದ ವ್ಯಕ್ತಿ : ದೇವಸ್ಥಾನದಲ್ಲಿ ಚಪ್ಪಲಿ ಬಿಟ್ಟು ಹೋದಾಗ ಚಪ್ಪಲಿ ಕಳ್ಳತನವಾಗುವುದು ಸಾಮಾನ್ಯ ಸಂಗತಿ. ಆದರೆ ಇತ್ತೀಚೆಗೆ ಉತ್ತರಪ್ರದೇಶದ ಕಾನ್ಪುರದ ವ್ಯಕ್ತಿಯೊಬ್ಬರು ತಮ್ಮ ಚಪ್ಪಲಿ ಕಳ್ಳತನವಾಗಿದ್ದಕ್ಕೆ ಆನ್​ಲೈನ್​ನಲ್ಲಿ ಎಫ್​ಐಆರ್​ ದಾಖಲಿಸಿದ್ದರು. ಕಾನ್ಪುರ್​ ಜಿಲ್ಲೆಯ ದಬೌಲಿ ಪೊಲೀಸ್​ ಠಾಣೆ ವ್ಯಾಪ್ತಿ ನಿವಾಸಿ ಕಾಂತಿ ಶರಣ್​ ನಿಗಮ್​ ಎಂಬವರು ತಮ್ಮ ಚಪ್ಪಲಿ ದೇವಸ್ಥಾನದ ಹೋದಾಗ ಕಳವು ಆದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಕಾಂತಿ ಶರಣ್​ ನಿಗಮ್ ಅವರು​ ಎಲೆಕ್ಟ್ರಾನಿಕ್​ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಇಲ್ಲಿನ ಭೈರವ ಬಾಬಾ ದೇವಸ್ಥಾನಕ್ಕೆ ಆಗಮಿಸಿದ್ದರು. ದೇವಸ್ಥಾನ ಪ್ರವೇಶಿಸುವ ಮುನ್ನ ಪೂಜಾ ಸಾಮಾಗ್ರಿಗಳ ಅಂಗಡಿಯ ಸಮೀಪ ತಮ್ಮ ಚಪ್ಪಲಿ ಬಿಟ್ಟಿದ್ದರು. ದೇವರ ದರ್ಶನ ಮುಗಿಸಿ ಬಂದಾಗ ಚಪ್ಪಲಿ ಕಳವಾಗಿದ್ದವು. ಬಳಿಕ ಅಂಗಡಿ ಸುತ್ತಮುತ್ತ ಚಪ್ಪಲಿ ಹುಡುಕಿದರೂ ಎಲ್ಲೂ ಚಪ್ಪಲಿ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಅಂಗಡಿಯವನ ಬಳಿ ಕೇಳಿದಾಗ ಇಲ್ಲಿ ಚಪ್ಪಲಿ ಕಳವಾಗುತ್ತಿರುತ್ತದೆ ಎಂದು ಹೇಳಿದ್ದಾರೆ. ಬಳಿಕ ಕಾಂತಿ ಶರಣ್​ ಸಿಂಗ್​ ಅವರು ಆನ್​ಲೈನ್​ ಮೂಲಕ ಎಫ್​ಐಆರ್​ ದಾಖಲಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂತಿ ಶರಣ್​ ಸಿಂಗ್​, ನಾನು ಹೊಸ ಚಪ್ಪಲಿ ಖರೀದಿಸಿದ್ದೆ. ಬಾಬಾನ ದರ್ಶನಕ್ಕೆ ಬಂದಾಗ ಕಳವಾಗಿದೆ. ಈ ವೇಳೆ ಸುತ್ತಲೂ ಹುಡುಕಿದೆ. ಆದರೆ ಚಪ್ಪಲಿ ಸಿಗಲಿಲ್ಲ. ಇಲ್ಲಿ ಹಲವು ಹಳೆಯ ಚಪ್ಪಲಿಗಳಿದ್ದವು. ನನ್ನ ಚಪ್ಪಲಿ ಮಾತ್ರ ಇರಲಿಲ್ಲ. ಹಾಗಾಗಿ ನಾನು ಎಫ್​ಐಆರ್​ ದಾಖಲಿಸಿದ್ದೇನೆ ಎಂದು ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಕಳ್ಳತನ ಸಣ್ಣದಾಗಿರಲಿ, ದೊಡ್ಡದಾಗಿರಲಿ ಪ್ರಕರಣ ದಾಖಲಿಸುವುದು ಎಲ್ಲರ ಹಕ್ಕು. ಕಳ್ಳರ ಪತ್ತೆಗೆ ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದರು.

Source : https://m.dailyhunt.in/news/india/kannada/etvbhar9348944527258-epaper-etvbhkn/bengaluru+chappali+kaledu+hogide+endu+polis+sahaayavaanige+kare+maadidha+vyakti-newsid-n519219102?listname=newspaperLanding&topic=homenews&index=10&topicIndex=0&mode=pwa&action=click

Views: 0

Leave a Reply

Your email address will not be published. Required fields are marked *