ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣಕ್ಕೆ ಪುತ್ರನಿಂದ ‘ಸಂಗೀತ ಸಂಜೆ’ ಆಯೋಜನೆ.

ಡಿಸೆಂಬರ್ 8ರಂದು ಬೆಂಗಳೂರಿನ ಕನಕಪುರ ರಸ್ತೆ, ಕೋಣನಕುಂಟೆ ಕ್ರಾಸ್ ಬಳಿ ಇರುವ ‘ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್’ನಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

ಕನ್ನಡ ಸೇರಿದಂತೆ 16 ಭಾಷೆಗಳಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ದೇಶದ ಜನಮನದಲ್ಲಿ ಮನೆಮಾಡಿರುವ ಸ್ವರ ಮಾಂತ್ರಿಕ ಎಸ್.ಪಿ.ಬಾಲಸುಬ್ರಮಣ್ಯಂ ಸ್ಮರಣಾರ್ಥ ತಮಿಳುನಾಡಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ತಯಾರಿ ನಡೆಯುತ್ತಿದೆ. ಶ್ರೇಷ್ಠ ಗಾಯಕನ ಸ್ಮಾರಕ ನಿರ್ಮಾಣಕ್ಕೆ ನೆರವಾಗುವ ಸದುದ್ದೇಶದಿಂದ ಡಿಸೆಂಬರ್ 8ರಂದು ನಗರದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ಕನಕಪುರ ರಸ್ತೆ, ಕೋಣಕಕುಂಟೆ ಕ್ರಾಸ್ ಬಳಿ ಇರುವ ‘ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್’ನಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ಕನ್ನಡ ಸಿನಿಮಾಗಳ ಜನಪ್ರಿಯ ಹಾಡುಗಳನ್ನು ಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಜೊತೆ ಎಸ್.ಪಿ.ಚರಣ್ ಹಾಡಲಿದ್ದಾರೆ. ಹಾಗೆಯೇ ಇಡೀ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದ ಕುರಿತು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಪುತ್ರ ಎಸ್.ಪಿ ಚರಣ್ ಮಾಹಿತಿ ನೀಡಿದರು.

ಎಸ್‌.ಪಿ.ಬಿ ತಮ್ಮ 5 ದಶಕಗಳ ವೃತ್ತಿಜೀವನದಲ್ಲಿ ಹಾಡಿದ ಸಾವಿರಾರು ಹಾಡುಗಳು ದೇಶದ ಜನರ ನಾಲಿಗೆ ಮೇಲೆ ಹರಿದಾಡುತ್ತಿವೆ. ಸಂಗೀತ ಲೋಕಕ್ಕೆ ಅವರು ನೀಡಿದ ಅಪಾರ ಕೊಡುಗೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು, ಗೌರವಗಳು ಅರಸಿ ಬಂದಿವೆ. 6 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳು ಮುಡಿಗೇರಿವೆ.

2020ರ ಸೆಪ್ಟೆಂಬರ್ 25ರಂದು ಬಾಲಸುಬ್ರಹ್ಮಣ್ಯಂ ನಿಧನರಾದರು. ಆದರೆ, ಅವರ ಕಂಠಸಿರಿಯಲ್ಲಿ ಬಂದಿರುವ ಮಧುರ ಹಾಡುಗಳನ್ನು ಅಭಿಮಾನಿಗಳ ಹೃದಯದಲ್ಲಿಟ್ಟು ಹೋಗಿದ್ದಾರೆ. ನಾಡಿನ ಈ ಮಹಾನ್ ಗಾಯಕನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ತಮಿಳುನಾಡಿನ ತಿರುವಳ್ಳುವರ್​ನಲ್ಲಿ ಸ್ಮಾರಕ ಮತ್ತು ಮ್ಯೂಸಿಯಂ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸಂಗೀತ, ಗಾಯನ ಕ್ಷೇತ್ರದಲ್ಲಿ ನಡೆದು ಬಂದ ದಾರಿ, ನೀಡಿದ ಕೊಡುಗೆಗಳು, ಲಕ್ಷಾಂತರ ಗಾಯಕರಿಗೆ ನೀಡಿದ ಸ್ಪೂರ್ತಿಯ ವಿವರಗಳನ್ನು ಸ್ಮಾರಕದ ಮೂಲಕ ಮುಂದಿನ ತಲೆಮಾರಿಗೆ ಹಂಚಲಾಗುತ್ತದೆ.

ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆಗಳನ್ನು ಉಳಿಸಿ, ಬೆಳೆಸಲು, ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಅವರು ನೀಡಿರುವ ಕೊಡುಗೆಯನ್ನು ಈ ಸ್ಮಾರಕ ಪಸರಿಸಲಿದೆ. ಅಲ್ಲದೇ, ಯುವ ಸಮುದಾಯಕ್ಕೆ ಸ್ಪೂರ್ತಿಯ ಸೆಲೆಯಾಗುತ್ತದೆ. ಡಿಸೆಂಬರ್ 8ರಂದು ನಡೆಯುವ ಲೈವ್ ಕನ್ಸರ್ಟ್ ಕಾರ್ಯಕ್ರಮದಿಂದ ನಿಧಿ ಸಂಗ್ರಹಿಸಿ ಅದನ್ನು ಸ್ಮಾರಕ, ಮ್ಯೂಸಿಯಂ ನಿರ್ಮಾಣಕ್ಕೆ ಬಳಸಲಾಗುತ್ತದೆ ಎಂದು ಬಾಲಸುಬ್ರಹ್ಮಣ್ಯಂ ಪುತ್ರ ಎಸ್.ಪಿ.ಚರಣ್ ಹೇಳಿದ್ದಾರೆ. ಡಿಸೆಂಬರ್ 8ರಂದು ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

Source : https://www.etvbharat.com/kn/!entertainment/sp-charan-sangeetha-sanje-program-for-construction-of-sp-balasubrahmanyam-memorial-karnataka-news-kas24112901949

Leave a Reply

Your email address will not be published. Required fields are marked *