ವೀಕೆಂಡ್ ಸ್ಪೆಷಲ್: ಈ ವಾರದ ಸಂಡೇ ಸ್ಪೆಷಲ್ ನಲ್ಲಿ ಸತ್ಯಂ ಶಂಕರಮಂಚಿ ಅವರ ತೆಲುಗು ಕಥಾಸಂಕಲನ “ಅಮರಾವತಿ ಕಥೆಗಳು” ಕನ್ನಡಕ್ಕೆ ಡಾ|| ವಿರೂಪಾಕ್ಷಿ ಎನ್ ಬೋಸಯ್ಯ ಅನುವಾದಿಸಿದ್ದಾರೆ. ಅಮರಾವತಿ ಕಥೆಗಳು ಶಂಕರಮಂಚಿ ಅವರ ಕಥಾಸಂಕಲನ. ಇದರಲ್ಲಿರುವ 100 ಕಥೆಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕಥಾವಸ್ತು ವೈವಧ್ಯವಾಗಿದೆ. ಅಮರಾವತಿ ಪರಿಸರದ ಜನರ ಜೀವನ-ವಿಧಾನ ನೋವು-ನಲಿವುಗಳನ್ನು ಲೇಖಕರು ಸರಳವಾದ ಗ್ರಾಮೀಣ ಭಾಷಾ ಶೈಲಿಯಲ್ಲಿ ಅಭಿವ್ಯಕ್ತಿಸಿದ್ದಾರೆ. ಈ ಕಥಾಸಂಕಲನಕ್ಕೆ ಆಂಧ್ರಪ್ರದೇಶ ಸರ್ಕಾರವು 1979ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
(ಕಥೆ-4 )
‘ಮತ್ತೆ ಮತ್ತೆ ಹೇಳಬೇಕೆನಿಸುವ ಕಥೆ. ‘
![](https://samagrasuddi.co.in/wp-content/uploads/2024/03/image-6.jpeg)
ಎದುರಿಗೆ ಅಮೃತಶಿಲೆ ಕಲ್ಲಿನಿಂದ ಕೆತ್ತಿದ ಗೌತಮಬುದ್ಧನ ಸುಂದರ ಮೂರ್ತಿಶಿಲ್ಪ. ಅಹಿಂಸೆಯೆ ಪರಮಧರ್ಮವೆಂದು ಜಗತ್ತಿಗೆ ಸಾರಿದ ಗೌತಮನ ಚಿತಾಭಸ್ಮಕ್ಕಾಗಿ ಎರಡು ಸಾಮ್ರಾಜ್ಯಗಳು ಭೀಕರ ಯುದ್ಧಕ್ಕೆ ಅಣಿಯಾಗುತ್ತಿವೆ. ತಲೆಗೆ ಶಿರಸ್ತ್ರಾಣಗಳ ಧರಸಿ,ಉದ್ದವಾದ ಭರ್ಜಿಗಳೊಂದಿಗೆ ರಾಜರ ಸೈನ್ಯವೊಂದು ಒಂದೆಡೆ ಯುದ್ದಕ್ಕೆ ಸಿದ್ಧವಾಗುತ್ತಿದ್ದರೆ, ಮತ್ತೊಂದೆಡೆ ಕೆಂಪು ಕಿರೀಟಗಳನ್ನು ಧರಿಸಿದ ಮಹಾರಾಜರೂ ತಮ್ಮ ಸೈನ್ಯ ಸಮೇತ ಯುದ್ಧಕ್ಕೆ ಸಿದ್ಧವಾಗುತ್ತಿದ್ದಾರೆ.
![](https://samagrasuddi.co.in/wp-content/uploads/2024/03/image-5.jpeg)
ಬುದ್ಧನ ಕೊನೆಯ ದಿನಗಳು. ಬುದ್ಧ ತನ್ನ ಶಿಷ್ಯರೊಂದಿಗೆ ಪಾವಾನಗರಕ್ಕೆ ಬಂದಿದ್ದಾರೆ. ಆ ಊರಲ್ಲಿದ್ದ ಚಂದ್ರನೆಂಬ ಭಕ್ತನೊಬ್ಬ ತನ್ನ ಕಣ್ಣೀರಿನಿಂದ ಭಗವಾನ್ ಬುದ್ಧನ ಪಾದಗಳನ್ನು ತೊಳೆದು ‘ಸ್ವಾಮಿ ತಾವಿಂದು ನಮ್ಮ ಮನೆಗೆ ಬಂದು ಭಿಕ್ಷೆ ಸ್ವೀಕರಿಸಬೇಕೆಂದು’ ವಿನಮ್ರವಾಗಿ ಬೇಡಿಕೊಳ್ಳುತ್ತಾನೆ. ಅವನ ಪ್ರೀತಿಯ ಆಹ್ವಾನವನ್ನು ಮನ್ನಿಸಿದ ಬುದ್ಧ ‘ಈ ರಾತ್ರಿ ನಿನ್ನ ಮನೆಯಲ್ಲಿ ಭಿಕ್ಷೆ ಸ್ವೀಕರಿಸುತ್ತೇನೆಂದು’ ಹೇಳಿ ಕಳುಹಿಸುತ್ತಾರೆ.
![](https://s01.sgp1.cdn.digitaloceanspaces.com/article/140725-dynidavzvz-1588328240.jpg)
ಇದರಿಂದ ಸಂತಸಗೊಂಡ ಚಂದ್ರನು ಸ್ವತಹ ಕೈಯಾರೆ ಹಂದಿ ಮಾಂಸಾಹಾರವನ್ನು ಸಿದ್ಧಪಡಿಸಿ, ಬುದ್ಧ ಮತ್ತವರ ಶಿಷ್ಯರಿಗೆ ಪ್ರೀತಿಯಿಂದ ಬಡಿಸುತ್ತಾನೆ. ಮಾಂಸಾಹಾರ ನೋಡಿ ಗಾಬರಿಗೊಂಡ ಶಿಷ್ಯರು ‘ಗುರುಗಳೇ ಇದೆನೆಂದು’ ಕೇಳುತ್ತಾರೆ. ಬುದ್ಧ ನಸುನಗುತ್ತಾ ಭಕ್ತಿಯಿಂದ ಬಡಿಸಿದ ನೈವೇದ್ಯವೇ ಪರಮಾನ್ನ! ಅಡುಗೆ ಯಾವುದಾದರೇನು? ಎಂದು ಆ ಮಾಂಸಾಹಾರವನ್ನೇ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಚಂದ್ರನು ತನ್ನ ಜನ್ಮ ಪಾವನವಾಯಿತು ಎಂಬಂತೆ ಭಗವಾನ್ ಬುದ್ಧನ ಕಾಲಿಗೆರಗಿ ಆಶೀರ್ವಾದ ಪಡೆದು, ಗುರುಗಳನ್ನು ಮನೆಯಿಂದ ಬೀಳ್ಕೊಡುತ್ತಾನೆ.
ಮನೆಯಿಂದ ನಡೆದುಹೋದ ಗುರುಗಳ ಪಾದಗಳ ಹೆಜ್ಜೆಗುರುತುಗಳು ಮನೆಮುಂದಿನ ಮಣ್ಣಿನಲ್ಲಿ ಮೂಡಿವೆ. ಆ ಹೆಜ್ಜೆಗುರುತುಗಳಲ್ಲಿಯೂ ಗುರುವನ್ನು ಕಾಣುವ ಚಂದ್ರ ಆ ಹೆಜ್ಜೆಗುರುತುಗಳಿಗೆ ಕೈಮುಗಿಯುತ್ತಾ, ಆ ಮಣ್ಣಲ್ಲಿಯೆ ಗುರುಗಳ ಕಾಣುತ್ತಾ ಪುಳಕಿತನಾಗುತಿದ್ದಾನೆ. ಭಕ್ತನ ಆನಂದದಲ್ಲಿಯೇ ಗುರುಗಳ ಆನಂದವೂ ಅಡಗಿದೆ ಎಂಬುದರ ದ್ಯೋತಕವಿದು.
![](https://i.ytimg.com/vi/RNrIW9JZn2U/hqdefault.jpg)
ದಿನಗಳು ಉರುಳಿದಂತೆ ಬುದ್ಧನ ದೇಹಾರೋಗ್ಯ ಕ್ಷೀಣಿಸುತ್ತಿದೆ. ನಡೆಯಲಾರದೆ ನಿತ್ರಾಣನಾದ ಬುದ್ಧನು ಕುಶೀನಗರದ ತೋಟವೊಂದರ ಜೋಡಿ ಮರಗಳ ಕೆಳಗೆ ತನ್ನ ಕಷಾಯ ವಸ್ತ್ರವನ್ನು ಹಾಸಿಗೆಯಂತೆ ಹಾಸಿ ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿದರು. ಗುರುಗಳು ದೇಹಾರೋಗ್ಯದಿಂದ ಬಳಲುವುದನ್ನು ನೋಡಿದ ಶಿಷ್ಯರಿಗೆ ದಿಕ್ಕೇ ತೋಚದಂತಾಯಿತು. ಗುರುಗಳ ಪ್ರೀತಿಯ ಮಾತುಗಳಿಲ್ಲ; ಉಪದೇಶ, ಪ್ರವಚನವಿಲ್ಲ. ಗುರುಗಳ ಈ ಅವಸ್ಥೆಗೆ ಶಿಷ್ಯರೆಲ್ಲ ಮಮ್ಮಲ ಮರುಗುತ್ತಿದ್ದಾರೆ. ಗುರುಗಳ ಜೀವಾತ್ಮ ಕ್ಷೀಣಿಸುತ್ತಿದೆಯಾದರೂ, ಅವರ ಜ್ಞಾನನೇತ್ರಗಳಲ್ಲಿನ ಹೊಳಪು, ಮುಖದಲ್ಲಿನ ಮಂದಹಾಸ ಮಾತ್ರ ಕಳೆಗುಂದಿಲ್ಲ.
ಬುದ್ಧನ ಈಗಿನ ಸ್ಥಿತಿಯನ್ನು ಎಲ್ಲರಿಗೂ ತಿಳಿಸಲೋಸುಗ ಶಿಷ್ಯರೆಲ್ಲರೂ ದೇಶದ ನಾಲ್ಕು ದಿಕ್ಕುಗಳತ್ತಲ್ಲೂ ಪಯಣಿಸಿದ್ದಾರೆ. ಆರೋಗ್ಯ ನೋಡಿಕೊಳ್ಳಲು ಗುರುಗಳ ಹತ್ತಿರ ಇರುವ ಶಿಷ್ಯರು ಗುರುಗಳ ಈ ಅವಸ್ಥೆಯನ್ನು ಬನದಲ್ಲಿರುವ ಮರ-ಗಿಡಗಳಿಗೆ, ಎಲೆ-ಬಳ್ಳಿಗಳಿಗೆ, ಹೂವು-ಮೊಗ್ಗುಗಳಿಗೆ ನಕ್ಷತ್ರ-ಬೆಳದಿಂಗಳಿಗೆ ಹೇಳುತ್ತಾ ದುಃಖಿಸುತ್ತಿದ್ದಾರೆ. ಆದಾಗ್ಯೂ ಬುದ್ಧನ ಸ್ಥಿತಿಯಲ್ಲಿ ಬದಲಾವಣೆಯಿಲ್ಲ.
![](https://samagrasuddi.co.in/wp-content/uploads/2024/03/image.gif)
ಕೊನೆಯದಾಗಿ ಗುರುಗಳ ದರ್ಶನ ಪಡೆಯಲು ದೇಶದ ವಿವಿಧೆಡೆಗಳಲ್ಲಿ ಅಬಾಲವೃದ್ಧರಾದಿಯಾಗಿ ಭಕ್ತಸಾಗರವೇ ಬನದತ್ತ ಹರಿದು ಬಂದಿದೆ. ಕಾಲಿಡಲೂ ಜಾಗವಿಲ್ಲದಂತೆ ಬನವೆಲ್ಲ ಜನಜಂಗುಳಿಯಿಂದ ತುಂಬಿಹೋಗಿದೆ. ಗುರುಗಳನ್ನು ನೋಡಿದ ಎಲ್ಲರ ಮುಖದಲ್ಲಿಯೂ ದೈನ್ಯತೆಯ ಭಾವನೆ; ಕಣ್ಣುಗಳಲ್ಲಿ ವರ್ಷದಾರೆ ಸುರಿಯುತ್ತಲೇ ಇದೆ. ಮಾತಾಡು ಸ್ವಾಮಿ! ಮಾತಾಡು! ನಿಮ್ಮ ಪ್ರವಚನಗಳಿಂದ ನಮ್ಮ ಹೃದಯದಲ್ಲಿ ಪ್ರೇಮ ತುಂಬಿದ್ದಿರಾ! ನಿಮ್ಮ ಪ್ರೀತಿಯ ಮಾತುಗಳಿಂದ ನಮ್ಮನ್ನು ಸಮಾಧಾನಿಸಿ, ನಿಮ್ಮಲ್ಲಿಯೇ ನಮ್ಮನ್ನು ಒಂದಾಗಿಸಿದ್ದೀರಾ! ನಿಮ್ಮ ಕಣ್ಣ ದಿವ್ಯಶಕ್ತಿಯಿಂದ ನಮ್ಮ ಹೃದಯದ ಕತ್ತಲೆಯ ದೂರ ಸರಿಸಿದ್ದೀರಾ! ಒಂದು ಸಲ; ಒಂದೇ ಒಂದು ಸಲ ನಿಮ್ಮ ಅಮೃತವಾಣಿಯ ಕೇಳಬೇಕು ತಂದೆ! ಒಂದು ಸಲ ಪ್ರೀತಿಯ ವಾಕ್ಕುಗಳಿಂದ ನಮ್ಮನ್ನು ಪುನೀತರನ್ನಾಗಿಸು ತಂದೆ! ಎಂದು ಲಕ್ಷೋಪಲಕ್ಷ ಜನರ ಹೃದಯಗಳು ಮೂಕವಾಗಿ ಪ್ರಾರ್ಥಿಸುತ್ತಿವೆ.
![](https://samagrasuddi.co.in/wp-content/uploads/2024/03/image-85.png)
ಬುದ್ಧನ ಶರೀರ ಸ್ವಾಧೀನಕ್ಕೆ ಬರದೆ ಬಾಯಿಂದ ಮಾತುಗಳೇ ಹೊರಡುತ್ತಿಲ್ಲ. ಆದಾಗ್ಯೂ ಸ್ವಾಮಿಯ ದಿವ್ಯದೃಷ್ಟಿ, ಕಣ್ಣೀರು ತುಂಬಿದ ಲಕ್ಷಾಂತರ ಭಕ್ತರ ಮುಖಗಳಿಗೆ ತಾಕುತ್ತಿದೆ. ಸ್ವಾಮಿಯ ತಣ್ಣನೆಯ ಮುಗುಳ್ನಗೆಯು ಬೆಳದಿಂಗಳಂತೆ ನೊಂದ ಭಕ್ತರ ಹೃದಯಗಳನ್ನು ಸಮಾಧಾನಿಸುತಿದೆ. ವೈಶಾಖ ಪೌರ್ಣಮಿಯ ದಿನ ಲೋಕಕ್ಕೆಲ್ಲವೂ ಬೆಳದಿಂಗಳು ಚೆಲ್ಲಿದೆ. ಆ ದಿನವೇ ಜನಿಸಿ ಜಗತ್ತಿಗೇ ಬೆಳಕು ನೀಡಿದ ಬುದ್ಧ ಅಂದಿನ ಆ ಬೆಳದಿಂಗಳಲ್ಲಿಯೇ ಲೀನವಾದನು.
ಬುದ್ಧನಿಲ್ಲದೆ ಲೋಕಕ್ಕೆಲ್ಲಾ ಹರಡಿದ ಬೆಳದಿಂಗಳೂ ಮಂಕಾಯಿತು. ಗಿಡಮರಗಳು ತೊಯ್ದಾಡುತ್ತಿವೆ; ಮೊಗ್ಗುಗಳು ಹೂವುಗಳಾಗದೆ ಬಾಡಿ ಉದುರುತ್ತಿವೆ; ಜನರ ಕಣ್ಣೀರು ಇಂಗಿಹೋದವು. ಬುದ್ಧ ಪರಿನಿರ್ವಾಣವಾದ ಸುದ್ದಿ ಜಗತ್ತಿಗೆ ಗೊತ್ತಾಯಿತು. ಜಗತ್ತಿನ ವಿವಿಧ ಕಡೆಗಳಿಂದ ಸಂಗೀತಗಾರರು, ಕಲಾವಿದರು, ರಾಜ-ಮಹಾರಾಜರೆಲ್ಲರೂ ಬನಕ್ಕೆ ಬಂದರು. ಎಲ್ಲರೂ ಒಂದಾಗಿ ಕಲೆತು ‘ಜಗತ್ಪ್ರಭು’ವಿನ ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಆ ಕ್ರಿಯಾವಿಧಿಗಳನ್ನು ಮುಗಿದ ನಂತರ ಸ್ವಾಮಿಯ ‘ಪವಿತ್ರ ಚಿತಾಭಸ್ಮ’ಕ್ಕಾಗಿ ಪರಸ್ಪರರಲ್ಲಿ ತಿಕ್ಕಾಟ ಶುರುವಾಯಿತು.
ಆ ಚಿತಾಭಸ್ಮ ನಮಗೆ ಸೇರಬೇಕು? ನಮಗೆ ಸೇರಬೇಕು? ಎಂದು ವಾಗ್ವಾದಕ್ಕಿಳಿದರು. ಆ ಚಿತಾಭಸ್ಮಕ್ಕಾಗಿ ತಮ್ಮ ಪ್ರಾಣಗಳನ್ನು, ರಾಜ್ಯಗಳನ್ನೂ ಪಣವಾಗಿಡಲು ತಯಾರಾದರು. ಯುದ್ದ ಮಾಡಿ ತಮ್ಮ ಬಲಾಬಲಗಳನ್ನು ಪರೀಕ್ಷಿಸಿಕೊಳ್ಳೋಣವೆಂದು ತಿರ್ಮಾನಿಸಿದರು. ಯುದ್ಧ ಆರಂಭವಾಯಿತು; ಯುದ್ಧಭೂಮಿಯಲ್ಲೆಲ್ಲ ರಣಕೇಕೆಗಳು ಮಾರ್ದನಿಸಿದವು. ಇನ್ನೇನು ಯುದ್ಧ ಭೀಕರವಾಗಿ ರಕ್ತಪಾತ ಹೆಚ್ಚಾಗುವ ಸಮಯಕ್ಕೆ ಎರಡು ಕಡೆಯ ರಾಜಮಹಾರಾಜರಿಗೆ ಜ್ಞಾನೋದಯವಾಯಿತು.
![](https://samagrasuddi.co.in/wp-content/uploads/2024/03/image-8.jpeg)
ಅವರು ತಮ್ಮ ತಮ್ಮ ಸೈನಿಕರಿಗೆ ಯುದ್ಧ ನಿಲ್ಲಿಸಲು ಸೂಚಿಸಿದರು. ಯಾವ ರಕ್ತಪಾತ ಹಿಂಸೆಯಿಂದ ಪ್ರಪಂಚ ಸುಖವಾಗಿರಲು ಸಾಧ್ಯವಿಲ್ಲ ಎಂದು ಭಗವಾನ್ ಬುದ್ಧ ಸಾರಿದ್ದರೋ ಆ ಚಿತಾಭಸ್ಮಕ್ಕಾಗಿ ರಕ್ತಪಾತವೇ? ಬೇಡ? ಬೇಡವೇ ಬೇಡ? ಇದು ಬಹುದೊಡ್ಡ ತಪ್ಪು? ಎಂದುಕೊಂಡರು. ಪರಸ್ಪರ ಒಬ್ಬರನ್ನೊಬ್ಬರು ಮುಗುಳ್ನಗುತ್ತಾ ತಬ್ಬಿಕೊಂಡರು. ಆ ಚಿತಾಭಸ್ಮವನ್ನು ಸಮನಾಗಿ ಹಂಚಿಕೊಂಡು, ಭಕ್ತಿಯಿಂದ ತಮ್ಮ ತಮ್ಮ ದೇಶಗಳಿಗೆ ತೆಗೆದುಕೊಂಡು ಹೋದರು. ಆ ಚಿತಾಭಸ್ಮದ ಮೇಲೆ ಸ್ತೂಪಗಳನ್ನು ಕಟ್ಟಿದರು. ಆ ಸ್ತೂಪಗಳ ಮೇಲೆ ಶಿಲ್ಪಗಳನ್ನು ಕೆತ್ತಿದರು. ಆ ಶಿಲ್ಪಗಳ ಮೇಲೆ ಈ ಕತೆಯನ್ನು; ತಮ್ಮ ಈ ಕಥೆಯನ್ನೇ ಚಿತ್ರಿಸಿದರು.
![](https://blogger.googleusercontent.com/img/b/R29vZ2xl/AVvXsEinnr7ZGhtHfe04lLoxSseiJtgSA6RI97483017I4QgeI_62jfmKb-0Q9geDVRRuI4JCXmik76tr1GixP3Y3G9WHxV5lUfa9RtTFBl5mUFpCiN1sL69mS2k5ZePLty0mGDHGz-UOpaazFU/w121-h123/WhatsApp+Image+2021-06-05+at+11.03.50+AM.jpeg)
✍️: ಡಾ. ವಿರೂಪಾಕ್ಷಿ ಎನ್ ಬೋಸಯ್ಯ
ಬೊಸೇದೇವರಹಟ್ಟಿ, ಚಳ್ಳಕೆರೆ ತಾಲೂಕು.