ಹೊಸದಿಲ್ಲಿ: ಮುಂದಿನ ವರ್ಷದ ಮೊದಲ ದಿನದಿಂದ ಹಲವು ಹಣಕಾಸು ಹಾಗೂ ತೆರಿಗೆ ಸಂಬಂಧಿತ ನಿಯಮಗಳಲ್ಲಿ ಬದಲಾವಣೆಗಳು ಜಾರಿಗೆ ಬರಲಿದ್ದು, ಅದರಲ್ಲಿ ಪ್ರಮುಖವಾದದ್ದು ಆಧಾರ್ ಮತ್ತು ಪ್ಯಾನ್ ಲಿಂಕಿಂಗ್. ಈ ಪ್ರಕ್ರಿಯೆಗೆ ಡಿಸೆಂಬರ್ 31 ಕೊನೆಯ ದಿನವಾಗಿದ್ದು, ಈ ದಿನಾಂಕದೊಳಗೆ ಲಿಂಕ್ ಮಾಡದಿದ್ದರೆ ದಂಡ ವಿಧಿಸುವುದರ ಜೊತೆಗೆ ಪ್ಯಾನ್ ಕಾರ್ಡ್ ಅಮಾನ್ಯವಾಗುವ ಸಾಧ್ಯತೆಯಿದೆ.
ಆಧಾರ್–ಪ್ಯಾನ್ ಲಿಂಕ್ ಪ್ರಕ್ರಿಯೆಯನ್ನು ಡಿಸೆಂಬರ್ 31ರವರೆಗೆ ಉಚಿತವಾಗಿ ಮಾಡಿಕೊಳ್ಳಬಹುದು. ಆ ಬಳಿಕ ಲಿಂಕಿಂಗ್ ಮಾಡಲು ₹1000 ದಂಡ ಪಾವತಿಸಬೇಕಾಗುತ್ತದೆ. ಪ್ಯಾನ್ ಲಿಂಕ್ ಆಗದೇ ಇದ್ದರೆ, ಬ್ಯಾಂಕಿಂಗ್, ಹಣಕಾಸು ವಹಿವಾಟುಗಳು ಹಾಗೂ ಸರ್ಕಾರದ ಅನೇಕ ಸೇವೆಗಳಲ್ಲಿ ಅಡಚಣೆ ಎದುರಾಗುವ ಸಾಧ್ಯತೆ ಇದೆ. ಪ್ಯಾನ್ ಕಾರ್ಡ್ ಅಮಾನ್ಯಗೊಂಡರೆ ತೆರಿಗೆ ಸಂಬಂಧಿತ ಕಾರ್ಯಗಳು ಸ್ಥಗಿತಗೊಳ್ಳಬಹುದು.
ಆದಾಯ ತೆರಿಗೆ ಇಲಾಖೆ ನಕಲಿ ಪ್ಯಾನ್ ಕಾರ್ಡ್ ಬಳಕೆಯನ್ನು ತಡೆಯುವ ಉದ್ದೇಶದಿಂದ ಈ ಲಿಂಕಿಂಗ್ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಹಣಕಾಸು ಸಚಿವಾಲಯವೂ ಕೂಡ ಸಾರ್ವಜನಿಕರು ಗಡುವಿನೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದೆ.
ಅಕ್ಟೋಬರ್ 1, 2024ರ ನಂತರ ಆಧಾರ್ ನೋಂದಣಿ ಐಡಿ ಬಳಸಿ ಪ್ಯಾನ್ ಪಡೆದವರು 2025ರ ಡಿಸೆಂಬರ್ 31ರವರೆಗೆ ಉಚಿತವಾಗಿ ಲಿಂಕ್ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಇತರ ಪ್ಯಾನ್ ಕಾರ್ಡ್ ಹೊಂದಿರುವವರು ಈ ವರ್ಷದ ಡಿಸೆಂಬರ್ 31ರೊಳಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಪ್ಯಾನ್–ಆಧಾರ್ ಲಿಂಕ್ ಮಾಡುವುದು ಹೇಗೆ?
- ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ಗೆ ಭೇಟಿ ನೀಡಿ ಲಾಗಿನ್ ಆಗಬೇಕು
- ನೋಂದಣಿ ಆಗಿಲ್ಲದಿದ್ದರೆ ಮೊದಲು ರಿಜಿಸ್ಟರ್ ಮಾಡಿಕೊಳ್ಳಬೇಕು
- ‘My Profile’ → ‘Personal Details’ → ‘Link Aadhaar’ ಆಯ್ಕೆಯನ್ನು ಕ್ಲಿಕ್ ಮಾಡಬೇಕು
- ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
- ಅಗತ್ಯವಿದ್ದರೆ e-Pay Tax ಮೂಲಕ ದಂಡ ಪಾವತಿ ಮಾಡಿ ಲಿಂಕಿಂಗ್ ಪೂರ್ಣಗೊಳಿಸಬಹುದು
ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ಪ್ಯಾನ್ ಕಾರ್ಡ್ ಅನ್ನು ಆಧಾರ್ಗೆ ಲಿಂಕ್ ಮಾಡಬಹುದು.
ಭವಿಷ್ಯದಲ್ಲಿ ಬ್ಯಾಂಕಿಂಗ್ ಮತ್ತು ಸರ್ಕಾರಿ ಸೇವೆಗಳಲ್ಲಿ ಯಾವುದೇ ಅಡಚಣೆ ಎದುರಾಗದಂತೆ, ಸಾರ್ವಜನಿಕರು ಗಡುವಿನೊಳಗೆ ಆಧಾರ್–ಪ್ಯಾನ್ ಲಿಂಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಹಣಕಾಸು ಇಲಾಖೆ ಸೂಚಿಸಿದೆ.
Views: 34