ಶ್ವಾಸಕೋಶ ಕ್ಯಾನ್ಸರ್​ಗೆ ನಟಿ ಅಪರ್ಣಾ ಬಲಿ: ಈ ಕಾಯಿಲೆ ಬರಲು ಕಾರಣವೇನು? ಲಕ್ಷಣಗಳು ಯಾವುವು?

ಅಪರ್ಣಾ ಅವರಿಗೆ ಶ್ವಾಸಕೋಶ ಕ್ಯಾನ್ಸರ್​ ಇತ್ತು ಎಂಬುದು ಬಹುತೇಕರಿಗೆ ತಿಳಿದಿರಲಿಲ್ಲ. ಕಳೆದ ಕೆಲ ತಿಂಗಳುಗಳಿಂದ ಮನರಂಜನಾ ಲೋಕದಿಂದ ದೂರಾಗಿದ್ದರು. ಅಪರ್ಣಾ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ದಿಢೀರನೇ ಅವರ ಸಾವಿನ ಸುದ್ದಿ ಕೇಳಿ ಕನ್ನಡಿಗರು ಆಘಾತಗೊಂಡಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿದ್ರಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಅಪರ್ಣಾ ಅವರು ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್​ ಖಾಯಿಲೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು ಎಂದು ಪತಿ ನಾಗರಾಜ್ ವಸ್ತಾರೆ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಎರಡು ವರ್ಷದ ಹಿಂದೆ ಇದೇ ಜುಲೈನಲ್ಲಿ ಆಕೆಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ತಪಾಸಣೆಯಲ್ಲಿ ಪತ್ತೆಯಾಯ್ತು. ಅಪರ್ಣಾ ಇನ್ನು ಆರು ತಿಂಗಳು ಉಳಿದಿದ್ರೆ ಹೆಚ್ಚು ಅಂತ ವೈದ್ಯರು ಹೇಳಿದ್ದರು. ಆದರೆ, ಆಕೆ ಛಲಗಾತಿ ಒಂದೂವರೆ ವರ್ಷ ಹೋರಾಟ ನಡೆಸಿದಳು ಎಂದು ಅಪರ್ಣಾ ಪತಿ ನಾಗರಾಜ್​ ವಸ್ತಾರೆ ಭಾವುಕರಾಗಿ ಹೇಳಿದ್ದಾರೆ.

ಅಂದಹಾಗೆ ಕ್ಯಾನ್ಸರ್​ ನಾಲ್ಕನೇ ಹಂತ ಮುಟ್ಟಿದ್ದರಿಂದ ಅದನ್ನು ಗೆಲ್ಲಲು ಅಪರ್ಣಾರಿಂದ ಸಾಧ್ಯವಾಗಲಿಲ್ಲ. ಕ್ಯಾನ್ಸರ್​ ಒಂದು ಮಹಾಮಾರಿ, ಇದಕ್ಕೆ ಚಿಕಿತ್ಸೆ ಇಲ್ಲ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ದೇಶದಲ್ಲಿ ಕಾನ್ಸರ್​ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಆಘಾತಕಾರಿ ಸಂಗತಿಯಾಗಿದೆ. ಒಂದು ಅಥವಾ 2ನೇ ಹಂತದಲ್ಲಿ ಕ್ಯಾನ್ಸರ್​ ಇದ್ರೆ ಗುಣಪಡಿಸುವ ಸಾಧ್ಯತೆ ಇದೆ. ಆದರೆ, ಮೂರು ಅಥವಾ ನಾಲ್ಕನೇ ಹಂತ ತಲುಪಿದರೆ ಗುಣಪಡಿಸಲಾಗದು ಎಂದು ಆರೋಗ್ಯ ತಜ್ಞರೇ ಎಚ್ಚರಿಸುತ್ತಾರೆ. ಹಾಗಾದರೆ, ಈ ಶ್ವಾಸಕೋಶ ಕ್ಯಾನ್ಸರ್​ ಹೇಗೆ ಬರುತ್ತೆ? ಇದರ ಲಕ್ಷಣಗಳು ಏನು? ಮತ್ತು ಚಿಕಿತ್ಸೆ ಏನು ಎಂಬುದನ್ನು ನಾವೀಗ ತಿಳಿಯೋಣ.

ಆಗಸ್ಟ್​ 1 ಶ್ವಾಸಕೋಶ ಕ್ಯಾನ್ಸರ್​ ದಿನ
ಮಾರಣಾಂತಿಕ ಕ್ಯಾನ್ಸರ್‌ಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಕೂಡ ಒಂದು. ಇದು ಉಸಿರಾಟದ ಅಂಗದಲ್ಲಿ ಜೀವಕೋಶಗಳು ಅಸಹಜವಾಗಿ ಬೆಳೆದಾಗ ಕಾಣಿಸಿಕೊಳ್ಳುತ್ತದೆ. ರಾಷ್ಟ್ರೀಯ ಕ್ಯಾನ್ಸರ್‌ ಸಂಸ್ಥೆಯ ಪ್ರಕಾರ, ಶ್ವಾಸಕೋಶ ಮತ್ತು ಶ್ವಾಸನಾಳದ ಕ್ಯಾನ್ಸರ್‌ನಿಂದ ಇತ್ತೀಚೆಗೆ ಹಲವರು ಸಾವಿಗೀಡಾಗುತ್ತಿದ್ದಾರೆ. ಈ ಆರೋಗ್ಯ ಸಮಸ್ಯೆ ಪುರುಷ ಮತ್ತು ಮಹಿಳೆ ಇಬ್ಬರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಧೂಮಪಾನಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕ್ಯಾನರ್‌ಗೆ ಒಳಗಾಗುವ ಶೇ 80ರಷ್ಟು ಮಂದಿ ಧೂಮಪಾನ ಮಾಡುತ್ತಾರೆ ಎಂಬುದನ್ನು ಅಧ್ಯಯನಗಳು ತಿಳಿಸಿವೆ. 2012ರಿಂದ ಪ್ರತಿವರ್ಷ ಆಗಸ್ಟ್‌ 1ರಂದು ಶ್ವಾಸಕೋಶದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.

ರೋಗ ಲಕ್ಷಣಗಳೇನು?
ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣಗಳು ಸಾಮಾನ್ಯವಾಗಿ ಆರಂಭಿಕ ಹಂತಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ದೀರ್ಘಕಾಲ ಕೆಮ್ಮುವುದು ಮತ್ತು ಕೆಮ್ಮಿದಾಗ ರಕ್ತ ಬಂದರೆ, ಉಸಿರಾಟದ ತೊಂದರೆ, ಎದೆ ನೋವು, ಇದ್ದಕ್ಕಿದ್ದಂತೆ ತೂಕ ಕಡಿಮೆ ಆಗುವುದು, ಪದೇ ಪದೇ ಸುಸ್ತು ಮತ್ತು ಆಯಾಸವಾಗುವುದು, ತ್ವಚೆಯಲ್ಲಿ ಬದಲಾವಣೆಯಾಗುವುದು, ಮಹಿಳೆಯರಲ್ಲಿ ಅಸಹಜ ರಕ್ತಸ್ರಾವ, ನೋವು ಮತ್ತು ಅಸ್ವಸ್ಥತೆ, ಎದೆನೋವು ಮುಂತಾದ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಇನ್ನು ಮೂಳೆ ಹಾಗೂ ಕೀಲುಗಳ ನೋವು, ಮುಖ ಮತ್ತು ತೋಳುಗಳ ಉರಿಯೂತ ಹಾಗೂ ಮುಖದ ಪಾರ್ಶ್ವವಾಯು ಕೂಡ ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಹೀಗಾಗಿ ಈ ರೀತಿಯ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ.

ಶ್ವಾಸಕೋಶ ಕ್ಯಾನ್ಸರ್​ಗೆ ಕಾರಣವೇನು?
ಸಿಗರೇಟ್, ಸಿಗಾರ್ ಅಥವಾ ಪೈಪ್‌ಗಳನ್ನು ಒಳಗೊಂಡಂತೆ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಬಳಕೆ ದೊಡ್ಡ ಅಪಾಯಕಾರಿ ಅಂಶವಾಗಿದೆ. ಶ್ವಾಸಕೋಶದ ಕ್ಯಾನ್ಸರ್ ಸಾವುಗಳಲ್ಲಿ 80% ಧೂಮಪಾನಕ್ಕೆ ಸಂಬಂಧಿಸಿದೆ. ವಾಯು ಮಾಲಿನ್ಯ, ರೇಡಾನ್, ಯುರೇನಿಯಂ, ಡೀಸೆಲ್ ಎಕ್ಸಾಸ್ಟ್, ಸಿಲಿಕಾ, ಕಲ್ಲಿದ್ದಲು ಉತ್ಪನ್ನಗಳು ಮತ್ತು ಇತರ ಹಾನಿಕಾರಕ ಪದಾರ್ಥಗಳಿಗೆ ಒಡ್ಡಿಕೊಳ್ಳುವುದು ಕೂಡ ಶ್ವಾಸಕೋಶ ಕ್ಯಾನ್ಸರ್​ಗೆ ಕಾರಣವಾಗಬಹುದು. ಕ್ಯಾನ್ಸರ್​ ಬಂದಾಗ ತಲೆಯಲ್ಲಿನ ಕೂದಲು ವೇಗವಾಗಿ ಉದುರಿ ಹೋಗುತ್ತವೆ.

ಪತ್ತೆ ಹೇಗೆ?
ರೋಗ ಲಕ್ಷಣಗಳು ಕಾಣಿಸಿಕೊಂಡಾಗ ರಕ್ತ ಪರೀಕ್ಷೆ ಮತ್ತು ಎಕ್ಸ್​ರೇ ಮೂಲಕ ಪರಿಶೀಲನೆ ಮಾಡುತ್ತಾರೆ. ಈ ಹಂತದಲ್ಲಿ ಕ್ಯಾನ್ಸರ್​ ಇರುವ ಲಕ್ಷಣಗಳು ಕಂಡುಬಂದರೆ, ಅದನ್ನು ದೃಢಪಡಿಸಿಕೊಳ್ಳಲು ಸಿಟಿ ಸ್ಕ್ಯಾನ್​ ಮತ್ತು ಬಯಾಪ್ಸಿಯಂತಹ ಹೆಚ್ಚಿನ ಇಮೇಜಿಂಗ್ ಪರೀಕ್ಷೆಗಳನ್ನು ನಡೆಸುತ್ತಾರೆ. ಈ ವಿಧಾನದಿಂದ ನಿಖರವಾಗಿ ಕ್ಯಾನ್ಸರ್​ ಇರುವುದನ್ನು ಪತ್ತೆಹಚ್ಚಬಹುದಾಗಿದೆ. ಶ್ವಾಸಕೋಶ ಕ್ಯಾನ್ಸರ್​ನಲ್ಲಿ ಒಟ್ಟು ನಾಲ್ಕು ಹಂತಗಳಿರುತ್ತವೆ. ಮೊದಲ ಹಂತದಲ್ಲಿದ್ದರೆ ಗುಣಪಡಿಸಬಹುದು. ಆದರೆ, ನಾಲ್ಕನೇ ಹಂತ ತಲುಪಿದರೆ ಗುಣಪಡಿಸುವುದು ತುಂಬಾನೇ ಕಷ್ಟ. ಅಸಾಧ್ಯ ಎನ್ನಬಹುದು.

ಚಿಕಿತ್ಸೆ ಏನು?
ಕ್ಯಾನ್ಸರ್‌ನ ವಿವಿಧ ರೂಪಾಂತರಗಳು ಮತ್ತು ಅವುಗಳ ಮಾರ್ಗಗಳನ್ನು ಗುರುತಿಸುವ ಮೂಲಕ ಶ್ವಾಸಕೋಶದ ಕ್ಯಾನ್ಸರ್‌ಗೆ ಸೂಕ್ತವಾದ ಚಿಕಿತ್ಸೆ ನೀಡಲಾಗುತ್ತದೆ. ಯಾವ ಮಾರ್ಗದಲ್ಲಿ ಹರಡುತ್ತಿದೆ ಮತ್ತು ಯಾವ ಹಂತದಲ್ಲಿದೆ ಎಂಬುದನ್ನು ಪತ್ತೆಹಚ್ಚುವ ಮೂಲಕ ಅದನ್ನು ನಿರ್ಬಂಧಿಸಲು ಸಾಧ್ಯವಾಗುತ್ತದೆ. ಇಜಿಎಫ್‌ಆರ್‌, ಕೆಆರ್‌ಎಸ್‌ ಮತ್ತು ಎಎಲ್‌ಕೆ ಇವು ಸಾಮಾನ್ಯವಾದ ಅನುವಂಶಿಕ ರೂಪಾಂತರಿಗಳಾಗಿವೆ. ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿರುವ ಜನರಿಗೆ ಇಜಿಎಫ್​ಆರ್​ ಪ್ರೊಟೀನ್‌ನ ರೂಪಾಂತರಿತ ರೂಪಗಳನ್ನು ಸೇರಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.

ಶ್ವಾಸಕೋಶ ಕ್ಯಾನ್ಸರ್​ ತುಂಬಾ ಅಪಾಯಕಾರಿಯಾಗಿದ್ದು, ಯಾವುದೇ ರೋಗ ಲಕ್ಷಣಗಳು ಕಂಡುಬಂದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಪರೀಕ್ಷೆ ಮಾಡಿಸಿಕೊಳ್ಳಿ. ವರ್ಷಕ್ಕೆ ಕನಿಷ್ಟ ಪಕ್ಷ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡುವುದು ಸೂಕ್ತ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.

Source : https://m.dailyhunt.in/news/india/kannada/vijayvani-epaper-vijaykan/shvaasakosha+kyaansar+ge+nati+aparna+bali+ee+kaayile+baralu+kaaranavenu+lakshanagalu+yaavuvu+-newsid-n621741799?listname=topicsList&topic=for%20you&index=13&topicIndex=0&mode=pwa&action=click

 

Leave a Reply

Your email address will not be published. Required fields are marked *