ಟಿವಿ ಧಾರಾವಾಹಿಯ ದೃಶ್ಯದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಸಂಚಾರ: ನಟಿಗೆ ದಂಡ!

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸೀತಾರಾಮ’ ಹೆಸರಿನ ಧಾರಾವಾಹಿಯ 14ನೇ ಸಂಚಿಕೆಯಲ್ಲಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಸಂಚರಿಸುವ ದೃಶ್ಯವೊಂದಿತ್ತು. ಅದರಲ್ಲಿ ಸಹ ಸವಾರಳಾಗಿದ್ದ ಯುವತಿ ಹೆಲ್ಮೆಟ್ ಧರಿಸಿರಲಿಲ್ಲ. ಟಿವಿಯಲ್ಲಿ ಪ್ರಸಾರವಾದ ಧಾರಾವಾಹಿಯ ಈ ದೃಶ್ಯವನ್ನು ಮಂಗಳೂರಿನಲ್ಲಿ ವೀಕ್ಷಿಸಿದ ಜಯಪ್ರಕಾಶ್ ಎಕ್ಕೂರು ಎಂಬವರು ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಧಾರಾವಾಹಿಯಲ್ಲಿ ಸಂಚಾರ ನಿಯಮದ ಉಲ್ಲಂಘನೆಯಾಗಿದೆ. ನಟ-ನಟಿಯರು ಸಂಚಾರ ನಿಯಮ ಉಲ್ಲಂಘಿಸುವುದು ಪ್ರೇಕ್ಷಕರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಹಾಗಾಗಿ ಸಂಬಂಧಪಟ್ಟ ನಟಿ, ಧಾರಾವಾಹಿಯ ನಿರ್ದೇಶಕ ಮತ್ತು ಪ್ರಸಾರ ಮಾಡಿದ ವಾಹಿನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ದೂರಿನಲ್ಲಿ ಆಗ್ರಹಿಸಿದ್ದರು.

ಈ ಪ್ರಕರಣವನ್ನು ಪೊಲೀಸ್ ಆಯುಕ್ತರು ಮಂಗಳೂರು ಸಂಚಾರ ಪೂರ್ವ ಠಾಣೆಗೆ ವಹಿಸಿದ್ದರು. ಅದರಂತೆ ಜಯಪ್ರಕಾಶ್ ಅವರಿಗೆ ಠಾಣೆಯಿಂದ ಹಿಂಬರಹ ನೀಡಿ, ದ್ವಿಚಕ್ರ ವಾಹನದ ಮಾಲಕರಿಗೆ ಮತ್ತು ಧಾರಾವಾಹಿಯ ನಿರ್ದೇಶಕರಿಗೆ ಮಾಹಿತಿ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು. ಧಾರಾವಾಹಿಯ ದೃಶ್ಯವನ್ನು ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಚಿತ್ರೀಕರಿಸಿದ್ದು, ಮುಂದಿನ ವಿಚಾರಣೆಗೆ ಅಲ್ಲಿನ ಪೊಲೀಸ್ ಠಾಣೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಲಾಗಿತ್ತು. ದೂರನ್ನು ಪರಿಶೀಲಿಸಿದ ರಾಜಾಜಿನಗರ ಠಾಣೆಯ ಪೊಲೀಸರು ಸಂಬಂಧಪಟ್ಟ ನಟಿ ಮತ್ತು ವಾಹನದ ಮಾಲಕಿಗೆ ಮೇ 10ರಂದು 500 ರೂ. ದಂಡ ವಿಧಿಸಿದ್ದಾರೆ. ಅಲ್ಲದೆ, ಇನ್ನು ಮುಂದೆ ತಮ್ಮ ಧಾರಾವಾಹಿಯಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸುವುದಿಲ್ಲ ಎಂದು ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ರಿಂದ ಹಿಂಬರಹ ಪಡೆದಿದ್ದಾರೆ.

ಹೆಲ್ಮೆಟ್ ಕಡ್ಡಾಯದ ಬಗ್ಗೆ ಇನ್ನಷ್ಟು ಜಾಗೃತಿ ಅಗತ್ಯವಿದೆ

ಧಾರಾವಾಹಿಯ ಈ ದೃಶ್ಯದ ಬಗ್ಗೆ ಕಳೆದ ಆಗಸ್ಟ್ ನಲ್ಲಿ ಪೊಲೀಸ್ ದೂರು ನೀಡಿದ್ದೆ. ಪ್ರಕರಣ ಬೆಂಗಳೂರು ಪೊಲೀಸ್ ಠಾಣೆಗೆ ರವಾನೆ ಆಗಿತ್ತು. ಈ ಬಗ್ಗೆ ಬೆನ್ನು ಹಿಡಿದ ಕಾರಣ ಎರಡು ದಿನಗಳ ಹಿಂದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿರುವ ಬಗ್ಗೆ ಮಾಹಿತಿ ದೊರಕಿದೆ.

”ಹೆಲ್ಮೆಟ್ ಕಡ್ಡಾಯವನ್ನು ನಗರದಲ್ಲಿ ಪಾಲನೆ ಮಾಡುವಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ವಹಿಸಿದರೆ ಅಪಘಾತದ ವೇಳೆ ಸಂಭವಿಸುವ ಬಹುತೇಕ ಸಾವುಗಳನ್ನು ತಪ್ಪಿಸಲು ಸಾಧ್ಯವಾಗಲಿದೆ. ಈ ಬಗ್ಗೆ ಸಾರ್ವ ಜನಿಕವಾಗಿ ಮಾತ್ರವಲ್ಲದೆ ಕಾಲೇಜುಗಳಲ್ಲೂ ಜಾಗೃತಿ ಕಾರ್ಯಕ್ರಮ ಅಗತ್ಯವಿದೆ” ಎಂದು ಜಯಪ್ರಕಾಶ್ ಎಕ್ಕೂರು  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Source : https://m.dailyhunt.in/news/india/kannada/varthabharathi-epaper-varthabh/tivi+dhaaraavaahiya+drushyadalli+helmet+dharisade+vaahana+sanchaara+natige+danda+-newsid-n607935884?listname=topicsList&topic=for%20you&index=6&topicIndex=0&mode=pwa&action=click

Leave a Reply

Your email address will not be published. Required fields are marked *