ಪ್ರಯಾಗ್​ರಾಜ್​ನ ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ: ಸಿಲಿಂಡರ್​​ಗಳು ಸ್ಫೋಟ, ಹೊತ್ತಿ ಉರಿದ ಟೆಂಟ್​​ಗಳು.

ಬರೋಬ್ಬರಿ 144 ವರ್ಷಗಳ ಬಳಿಕ ಉತ್ತರ ಪ್ರದೇಶದ ಮಹಾಕುಂಭ ಮೇಳ ನಡೆಯುತ್ತಿದೆ. ದೇಶದ ಮೂಲೆ ಮೂಲೆಯಿಂದಲೂ ಭಕ್ತಸಾಗರವೇ ಹರಿದು ಬರುತ್ತಿದೆ. ಈ ಹೊತ್ತಲ್ಲೇ ಪ್ರಯಾಗ್​ರಾಜ್​ನಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಮಹಾ ಕುಂಭಮೇಳದ ಸೆಕ್ಟರ್ 19ರಲ್ಲಿ ಸಿಲಿಂಡರ್​ ಸ್ಫೋಟಗೊಂಡಿದೆ. ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಪ್ರಯಾಗ್​ರಾಜ್​​ ಎಡಿಜಿಪಿ ತಿಳಿಸಿದ್ದಾರೆ.

ಉತ್ತರ ಪ್ರದೇಶ, ಜನವರಿ 19: ಪ್ರಯಾಗ್​ರಾಜ್​ನ ಮಹಾ ಕುಂಭಮೇಳದಲ್ಲಿ (Maha Kumbh Mela) ಅಗ್ನಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. ಕುಂಭಮೇಳ ಪ್ರದೇಶದ ಸೆಕ್ಟರ್ 19ರಲ್ಲಿ ಎರಡು-ಮೂರು ಸಿಲಿಂಡರ್​​ಗಳು ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಟೆಂಟ್​​ಗಳು ಹೊತ್ತಿ ಉರಿದಿದ್ದು, ಕುಂಭಮೇಳ ಪ್ರದೇಶದ ಸೆಕ್ಟರ್ 20ಕ್ಕೂ ಬೆಂಕಿ ವ್ಯಾಪಿಸಿದೆ. ಸದ್ಯ ಯಾವುದೇ ಸಾವು ನೋವು ಸಂಭವಿಸಿಲ್ಲ.

ವಿವೇಕಾನಂದ ಸೇವಾ ಸಮಿತಿಗೆ ಸೇರಿದ 25ಕ್ಕೂ ಹೆಚ್ಚು ಟೆಂಟ್​ಗಳಿಗೆ ಬೆಂಕಿ ಹತ್ತಿಕೊಂಡಿದೆ. ಟೆಂಟ್​ಗಳಲ್ಲಿ ಇಟ್ಟಿದ್ದ ಸಿಲಿಂಡರ್​ಗಳು ಒಂದೊಂದಾಗಿ ಸ್ಫೋಟಗೊಳ್ಳುತ್ತಿರುವುದರಿಂದ ಬೆಂಕಿ ತೀವ್ರತೆ ಹೆಚ್ಚಾಗುತ್ತಿದೆ. ಬೆಂಕಿ ಅವಘಡದಿಂದಾಗಿ ಮಹಾ ಕುಂಭಮೇಳ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.  ಟೆಂಟ್​​ನಲ್ಲಿ ಇರುವವರನ್ನು ಅಧಿಕಾರಿಗಳು ದೂರ ಕಳುಹಿಸಿದ್ದಾರೆ.

ಸದ್ಯ ಸ್ಥಳಕ್ಕಾಗಮಿಸಿದ 50ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದು,​ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಪ್ರಯಾಗ್​ರಾಜ್​​ ಎಡಿಜಿ ಭಾನು ಭಾಸ್ಕರ್ ಹೇಳಿದ್ದಿಷ್ಟು

ಅಗ್ನಿ ಅವಘಡದ ಕುರಿತು ಪ್ರಯಾಗ್​ರಾಜ್​​ ಎಡಿಜಿ ಭಾನು ಭಾಸ್ಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮಹಾ ಕುಂಭಮೇಳದ ಸೆಕ್ಟರ್ 19ರಲ್ಲಿ ಎರಡು-ಮೂರು ಸಿಲಿಂಡರ್‌ಗಳು ಸ್ಫೋಟಗೊಂಡಿದೆ. ಹಾಗಾಗಿ ಶಿಬಿರಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬೆಂಕಿಯನ್ನು ನಿಯಂತ್ರಿಸಲಾಗಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ. ಯಾರಿಗೂ ತೊಂದರೆಯಾಗಿಲ್ಲ. ಅಗ್ನಿ ಅವಘಡದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಇನ್ನು ಮಹಾಕುಂಭಮೇಳಕ್ಕೆ ಆಗಮಿಸುವ ಭಕ್ತರು ಉಳಿದುಕೊಳ್ಳಲು ಟೆಂಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಭಕ್ತರು ಹಣ ಪಾವತಿಸಬೇಕು. ಟೆಂಟ್‌ನಲ್ಲಿ ಇರುವುದರೊಂದಿಗೆ ಆಹಾರ ಮಾಡಿಕೊಳ್ಳುವುದಕ್ಕೂ ಸಂಪೂರ್ಣ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಿರುವಾಗ ಟೆಂಟ್​ನಲ್ಲಿಟ್ಟಿದ್ದ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರುವುದಾಗಿ ಶಂಕಿಸಲಾಗಿದೆ.

Source : https://tv9kannada.com/national/fire-mishap-at-prayagrajs-mahakumbh-mela-more-than-12-cylinders-explode-national-news-in-kannada-ggs-966344.html

Leave a Reply

Your email address will not be published. Required fields are marked *