ಅಗ್ನಿವೀರ್ ರ‍್ಯಾಲಿ 2026: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಏನೆಲ್ಲಾ ದಾಖಲೆಗಳು ಬೇಕು?

ದೇಶ ಸೇವೆ ಮಾಡಲು ತುಡಿಯುತ್ತಿರುವ ಯುವಜನತೆಗೆ ಭಾರತೀಯ ಸೇನೆಯು ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುನಿರೀಕ್ಷಿತ 2026ನೇ ಸಾಲಿನ ‘ಅಗ್ನಿವೀರ್’ ನೇಮಕಾತಿಗೆ (Indian Army Agniveer Recruitment 2026) ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಇದೀಗ ಪ್ರಕಟಿಸಲಾಗಿದೆ. ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: 13 ಫೆಬ್ರವರಿ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01 ಏಪ್ರಿಲ್ 2026
  • ಸಾಮಾನ್ಯ ಪ್ರವೇಶ ಪರೀಕ್ಷೆ (CEE): 01 ಜೂನ್ 2026 ರಿಂದ 15 ಜೂನ್ 2026ರವರೆಗೆ ನಡೆಯಲಿದೆ.

ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ:

ಅಗ್ನಿವೀರ್ ನೇಮಕಾತಿಯಡಿ ವಿವಿಧ ಹುದ್ದೆಗಳಿಗೆ ಬೇರೆ ಬೇರೆ ಶೈಕ್ಷಣಿಕ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ:

  • ಅಗ್ನಿವೀರ್ ಜನರಲ್ ಡ್ಯೂಟಿ (GD): 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಒಟ್ಟಾರೆ ಶೇ.45 ಅಂಕಗಳೊಂದಿಗೆ, ಪ್ರತಿಯೊಂದು ವಿಷಯದಲ್ಲೂ ಕನಿಷ್ಠ ಶೇ.33 ಅಂಕ ಪಡೆದಿರಬೇಕು.
  • ಅಗ್ನಿವೀರ್ ತಾಂತ್ರಿಕ (Technical): ಪಿಯುಸಿ (12ನೇ ತರಗತಿ) ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಕನಿಷ್ಠ ಶೇ.50 ಅಂಕ ಗಳಿಸಿರಬೇಕು.
  • ಕ್ಲರ್ಕ್ / ಸ್ಟೋರ್ ಕೀಪರ್: 12ನೇ ತರಗತಿಯಲ್ಲಿ ಒಟ್ಟಾರೆ ಶೇ.60 ಅಂಕ ಪಡೆದಿರಬೇಕು. ಜೊತೆಗೆ ಇಂಗ್ಲಿಷ್ ಹಾಗೂ ಗಣಿತ/ಅಕೌಂಟ್ಸ್‌ನಲ್ಲಿ ಶೇ.50 ಅಂಕ ಕಡ್ಡಾಯ.
  • ಟ್ರೇಡ್ಸ್‌ಮನ್ (Tradesman): 8ನೇ ಅಥವಾ 10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ಪ್ರತಿ ವಿಷಯದಲ್ಲಿ ಶೇ.33 ಅಂಕ ಪಡೆದಿರಬೇಕು.
  • ಮಹಿಳಾ ಮಿಲಿಟರಿ ಪೊಲೀಸ್ (GD): 10ನೇ ತರಗತಿಯಲ್ಲಿ ಕನಿಷ್ಠ ಶೇ.45 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
  • ಸೋಲ್ಜರ್ ಟೆಕ್ನಿಕಲ್ (ನರ್ಸಿಂಗ್ ಸಹಾಯಕ): 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲಿಷ್ ಒಳಗೊಂಡಂತೆ ಶೇ.50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
  • ಸಿಪಾಯಿ ಫಾರ್ಮಾ (Sepoy Pharma): ಡಿ-ಫಾರ್ಮಾ (ಶೇ.55) ಅಥವಾ ಬಿ-ಫಾರ್ಮಾ (ಶೇ.50) ಪೂರ್ಣಗೊಳಿಸಿದ್ದು, ಫಾರ್ಮಸಿ ಕೌನ್ಸಿಲ್‌ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು.
  • ಜೆಸಿಒ (ಧಾರ್ಮಿಕ ಶಿಕ್ಷಕರು): ಸಂಬಂಧಪಟ್ಟ ಧರ್ಮ ಹಾಗೂ ವಿಷಯದಲ್ಲಿ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ವಯೋಮಿತಿ ನಿಬಂಧನೆಗಳು:

(ಸೂಚನೆ: ಅಭ್ಯರ್ಥಿಗಳ ವಯಸ್ಸನ್ನು ಜುಲೈ 1, 2027ಕ್ಕೆ ಅನ್ವಯವಾಗುವಂತೆ ಲೆಕ್ಕಹಾಕಲಾಗುತ್ತದೆ)

  • ಅಗ್ನಿವೀರ್ ಜಿಡಿ, ಟೆಕ್ನಿಕಲ್, ಟ್ರೇಡ್ಸ್‌ಮನ್: 17.5 ರಿಂದ 22 ವರ್ಷ.
  • ಸೋಲ್ಜರ್ ಟೆಕ್ನಿಕಲ್: ಗರಿಷ್ಠ 23 ವರ್ಷಗಳು.
  • ಸಿಪಾಯಿ ಫಾರ್ಮಾ: 19 ರಿಂದ 25 ವರ್ಷ.
  • ಜೆಸಿಒ ಧಾರ್ಮಿಕ ಶಿಕ್ಷಕರು: 25 ರಿಂದ 34 ವರ್ಷ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಲಿದೆ?

ಅಭ್ಯರ್ಥಿಗಳನ್ನು ಅತ್ಯಂತ ಪಾರದರ್ಶಕವಾದ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:

  1. ಆನ್‌ಲೈನ್ ಲಿಖಿತ ಪರೀಕ್ಷೆ (CEE): ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ.
  2. ದೈಹಿಕ ಸದೃಢತಾ ಪರೀಕ್ಷೆ (PFT): ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಇರುತ್ತದೆ.
  3. ದೈಹಿಕ ಅಳತೆ ಪರೀಕ್ಷೆ (PMT): ಸಾಮಾನ್ಯ ಹುದ್ದೆಗಳಿಗೆ ಅಭ್ಯರ್ಥಿಯ ಕನಿಷ್ಠ ಎತ್ತರ 170 ಸೆಂ.ಮೀ. ಹಾಗೂ ಕ್ಲರ್ಕ್ ಹುದ್ದೆಗೆ 162 ಸೆಂ.ಮೀ. ಇರಬೇಕು. ಎದೆಯ ಸುತ್ತಳತೆ 77 ಸೆಂ.ಮೀ. ಇದ್ದು, ಕನಿಷ್ಠ 5 ಸೆಂ.ಮೀ. ವಿಸ್ತರಣೆ ಸಾಮರ್ಥ್ಯ ಹೊಂದಿರಬೇಕು.
  4. ವೈದ್ಯಕೀಯ ಪರೀಕ್ಷೆ (Medical Test): ಅಂತಿಮವಾಗಿ ವೈದ್ಯಕೀಯ ತಪಾಸಣೆ ನಡೆಸಿ, ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ joinindianarmy.nic.in ಗೆ ಭೇಟಿ ನೀಡಬಹುದು.

Leave a Reply

Your email address will not be published. Required fields are marked *