AIIMS ಬೃಹತ್ ನೇಮಕಾತಿ: 2551 ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ನರ್ಸಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಭರ್ಜರಿ ಸಿಹಿಸುದ್ದಿ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು (AIIMS) ನರ್ಸಿಂಗ್ ಆಫೀಸರ್ ನೇಮಕಾತಿ ಸಾಮಾನ್ಯ ಅರ್ಹತಾ ಪರೀಕ್ಷೆ (NORCET-10) ಅಡಿಯಲ್ಲಿ ಬರೋಬ್ಬರಿ 2551 ನರ್ಸಿಂಗ್ ಅಧಿಕಾರಿ (Nursing Officer) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಈಗಾಗಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮಾರ್ಚ್ 16ರೊಳಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ದೇಶದ ವಿವಿಧ ಏಮ್ಸ್ (AIIMS) ಸಂಸ್ಥೆಗಳು ಹಾಗೂ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆ (SJH), ಇಎಸ್‌ಐಸಿ (ESIC) ಸೇರಿದಂತೆ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಒದಗಿಬಂದಿರುವ ಸುವರ್ಣಾವಕಾಶ ಇದಾಗಿದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 16
  • ಪ್ರಾಥಮಿಕ ಪರೀಕ್ಷೆ (Prelims): ಏಪ್ರಿಲ್ 11
  • ಮುಖ್ಯ ಪರೀಕ್ಷೆ (Mains): ಏಪ್ರಿಲ್ 30

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಬಿ.ಎಸ್ಸಿ ನರ್ಸಿಂಗ್ (BSc Nursing) ಅಥವಾ ಪೋಸ್ಟ್ ಬೇಸಿಕ್ ಬಿ.ಎಸ್ಸಿ ನರ್ಸಿಂಗ್ ಪದವಿ ಪಡೆದಿರಬೇಕು. ಅಥವಾ ಜನರಲ್ ನರ್ಸಿಂಗ್ ಮಿಡ್‌ವೈಫರಿಯಲ್ಲಿ (GNM) ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷದೊಳಗಿರಬೇಕು.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?: ನೇಮಕಾತಿ ಪ್ರಕ್ರಿಯೆಯು ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆ ಎಂಬ ಎರಡು ಹಂತಗಳನ್ನು ಒಳಗೊಂಡಿರುತ್ತದೆ. ಮೊದಲ ಹಂತದ ಪ್ರಾಥಮಿಕ ಪರೀಕ್ಷೆಯು 100 ಅಂಕಗಳ ಬಹು ಆಯ್ಕೆಯ (MCQ) ಪ್ರಶ್ನೆಗಳನ್ನು ಒಳಗೊಂಡಿರಲಿದ್ದು, ಪರೀಕ್ಷಾ ಅವಧಿ 90 ನಿಮಿಷಗಳಾಗಿರುತ್ತದೆ. ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ (Negative Marking) ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಹೆಚ್ಚಿನ ಮಾಹಿತಿ ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು AIIMS ನ ಅಧಿಕೃತ ವೆಬ್‌ಸೈಟ್  aiimsexams.ac.in ​​ ಗೆ ಭೇಟಿ ನೀಡಬಹುದು.

Leave a Reply

Your email address will not be published. Required fields are marked *