ಮನೆ ತುಂಬ ಕಾಲ್ಗೆಜ್ಜೆ ಸದ್ದು ಮೂಡಿಸುತ್ತ ಓಡಾಡುತ್ತಿದ್ದ ಮುದ್ದು ಕಂದನ ನಗು, ತುಂಟಾಟವನ್ನು ಕಿತ್ತುಕೊಂಡಿರೋದು ನಾವು ನೀವೆಲ್ಲ ಬರೆಯಲು ಬಳಸುವ ಪೆನ್.

ತೆಲಂಗಾಣ: ಸಾವು ಯಾವ ರೂಪದಲ್ಲಿ ಬರುತ್ತೆ ಅನ್ನೋದನ್ನು ಊಹಿಸೋಕೆ ಸಾಧ್ಯವಿಲ್ಲ. ಇಂತಹುದೇ ಹೃದಯ ವಿದ್ರಾವಕ (Sad News) ಘಟನೆಯೊಂದು ಪುಟ್ಟ ಮಗುವಿನ ಪ್ರಾಣ ತೆಗೆದಿದ್ದು, ಪೆನ್ ರೂಪದಲ್ಲಿ ಬಂದೆರಗಿದ ಮೃತ್ಯುದೇವತೆ ಬಾಳಿಬದುಕಬೇಕಿದ್ದ ಪುಟ್ಟ ಕಂದನ (UKG Girl Death) ಉಸಿರು ನಿಲ್ಲಿಸಿದೆ.
ಮನೆ ತುಂಬ ಕಾಲ್ಗೆಜ್ಜೆ ಸದ್ದು ಮೂಡಿಸುತ್ತ ಓಡಾಡುತ್ತಿದ್ದ ಮುದ್ದು ಕಂದನ ನಗು, ತುಂಟಾಟವನ್ನು ಕಿತ್ತುಕೊಂಡಿರೋದು ನಾವು ನೀವೆಲ್ಲ ಬರೆಯಲು ಬಳಸುವ ಪೆನ್. ಹೌದು.. ಇಂತಹದೊಂದು ದುರಂತ ಘಟನೆ ನಡೆದಿರೋದು ತೆಲಂಗಾಣದ ಭದ್ರಾಚಲಂ ನಗರದಲ್ಲಿ. ಭದ್ರಾಚಲಂನ ಯುಕೆಜಿ ವಿದ್ಯಾರ್ಥಿನಿ ರಿಯಂಶಿಕಾ ಪೆನ್‌ಗೆ ಬಲಿಯಾದ ದುರ್ದೈವಿ.
ಭದ್ರಾಚಲಂ ಖಾಸಗಿ ಸ್ಕೂಲ್‌ನಲ್ಲಿ ಯುಕೆಜಿ ಓದುತ್ತಿರುವ ರಿಯಂಶಿಕಾ ಸೋಮವಾರ ಶಾಲೆಯಿಂದ ಬಂದು ಮನೆಯಲ್ಲಿ ಹೋಂ ವರ್ಕ್ ಬರೆಯುತ್ತಿದ್ದಳು. ಮಂಚದ ಮೇಲೆ ಕೂತು ಹೋಂವರ್ಕ್ ಬರೆಯುತ್ತಿದ್ದ ರಿಯಂಶಿಕಾ ತುಂಟಾಟವಾಡುತ್ತ ಮಂಚದಿಂದ ಕೆಳಕ್ಕೆ ಬಿದ್ದಿದ್ದಾಳೆ. ಈ ವೇಳೆ ಕೈಯಲ್ಲಿದ್ದ ಪೆನ್ ಆಕೆಯ ತಲೆಗೆ ಚುಚ್ಚಿದೆ. ಇದರಿಂದಲೇ ರಿಯಂಶಿಕಾ ಸಾವನ್ನಪ್ಪಿದ್ದಾಳೆ.
ರಿಯಂಶಿಕಾ ಕೈಯಲ್ಲಿ ಹಿಡಿದ ಪೆನ್ ಸಮೇತ ಮಂಚದಿಂದ ರಭಸವಾಗಿ ಕೆಳಕ್ಕೆ ಬಿದ್ದಿದ್ದು, ಈ ವೇಳೆ ಆಕೆಯ ಕೈಯಲ್ಲಿದ್ದ ಪೆನ್ ಬಲವಾಗಿ ಆಕೆಯ ಕಪಾಲದ ಭಾಗದಿಂದ ತೂರಿಕೊಂಡು ತಲೆಯೊಳಕ್ಕೆ ಪ್ರವೇಶಿಸಿದೆ ಎನ್ನಲಾಗಿದೆ. ತಕ್ಷಣ ಆಕೆಯನ್ನು ಕುಟುಂಬಸ್ಥರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ರಿಯಂಶಿಕಾ ಉಳಿಸುವ ಪ್ರಯತ್ನ ಮಾಡಿದ್ದಾರೆ. ಮಂಗಳವಾರ ರಿಯಂಶಿಕಾಗೆ ಶಸ್ತ್ರಚಿಕಿತ್ಸೆ ಕೂಡ ಮಾಡಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೇ ರಿಯಂಶಿಕಾ ಸಾವನ್ನಪ್ಪಿದ್ದಾಳೆ.
ರಿಯಂಶಿಕಾ ತಲೆಯಲ್ಲಿ ಪೆನ್ ಅರ್ಧಕ್ಕಿಂತಲೂ ಹೆಚ್ಚು ತೂರಿಕೊಂಡಿತ್ತು. ಈ ವೇಳೆ ಆಕೆಯ ತಂದೆ ಮೆಕಾನಿಕ್ ಮಣಿಕಂಠ ಹಾಗೂ ತಾಯಿ ಸ್ವರೂಪಾ ಆಕೆಯನ್ನು ಆಸ್ಪತ್ರೆಗೆ ಕರೆತಂದಿದ್ದರು. ವೈದ್ಯರು ಆಕೆಯ ತಲೆ ಶಸ್ತ್ರ ಚಿಕಿತ್ಸೆ ನಡೆಸಿ ಪೆನ್ ಹೊರ ತೆಗೆದಿದ್ದಾರೆ. ಆದರೆ ಆಂತರಿಕ ಗಾಯ ಹಾಗೂ ಸ್ರಾವ, ಇನಪೆಕ್ಷನ್ ಕಾರಣದಿಂದ ರಿಯಂಶಿಕಾ ಸಾವನ್ನಪ್ಪಿದ್ದಾಳೆ ಎಂದು ಖಾನಮ್ ನಗರದ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದಂತೆ ಜನರು ಕಂಬನಿ ಮಿಡಿದಿದ್ದಾರೆ.