ಚಿತ್ರದುರ್ಗ, ಡಿ.16:
ನಾಡಿನ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುವ ಮಹೇಶ್ವರ ಜಾತ್ರೆ, ಈಚಘಟ್ಟ ಗ್ರಾಮದಲ್ಲಿ ಶ್ರದ್ಧಾ ಹಾಗೂ ಭಕ್ತಿಭಾವದಿಂದ ಸಂಭ್ರಮದಿಂದ ನೆರವೇರಿತು. ಕಡೇ ಕಾರ್ತಿಕದ ನಂತರ ಬರುವ ಈ ಜಾತ್ರೆ ಗ್ರಾಮಕ್ಕೆ ವಿಶೇಷ ಧಾರ್ಮಿಕ ಮಹತ್ವ ಹೊಂದಿದ್ದು, ಬಹು ಪುರಾತನ ಕಾಲದಿಂದಲೂ ಆಚರಣೆಯಲ್ಲಿತ್ತು.
ಕೆಲವು ಕಾರಣಾಂತರಗಳಿಂದ ಕಳೆದ ಮೂರು ದಶಕಗಳ ಕಾಲ ಸ್ಥಗಿತಗೊಂಡಿದ್ದ ಈ ಮಹೇಶ್ವರ ಜಾತ್ರೆ, ಕಳೆದ ವರ್ಷದಿಂದ ಗ್ರಾಮಸ್ಥರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮತ್ತೆ ಪುನರುಜ್ಜೀವನಗೊಂಡಿದೆ. ಗ್ರಾಮಸ್ಥರ ಈ ಪ್ರಯತ್ನ ಧಾರ್ಮಿಕ–ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಉತ್ತಮ ಉದಾಹರಣೆಯಾಗಿದೆ.
ಸಂಪ್ರದಾಯಬದ್ಧ ಆಚರಣೆ
ಜಾತ್ರೆಯ ಅಂಗವಾಗಿ ಗ್ರಾಮಸ್ಥರು ಹಾಗೂ ಸ್ಥಳೀಯ ಮಠದ ವಂಶಸ್ಥರು ಸೇರಿಕೊಂಡು, ಗ್ರಾಮದ ಹೊರವಲಯದಲ್ಲಿರುವ ನಾಲ್ಕು–ಐದು ತಲೆಮಾರುಗಳ ಹಿಂದಿನ ಪೂರ್ವಜರು ನಿರ್ಮಿಸಿದ ತೋಟದಲ್ಲಿನ ಪುರಾತನ ಲಿಂಗೈಕ್ಯ ಸಮಾಧಿ ಸ್ಥಳಗಳಿಗೆ ಸೋಮವಾರ ರಾತ್ರಿ ಗ್ರಾಮದ ಪ್ರಮುಖ ದೈವಗಳನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದರು. ಅಲ್ಲಿ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ರಾತ್ರಿ ಇಡೀ ನೆರವೇರಿಸಲಾಯಿತು.
ಮಂಗಳವಾರ ಬೆಳಗಿನ ಜಾವ ಪ್ರಧಾನ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು. ಬಳಿಕ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ವಿಶೇಷ ಪ್ರಸಾದದ ಮಹತ್ವ
ಈ ಜಾತ್ರೆಯ ವಿಶೇಷತೆಯಾಗಿ, ಉಪ್ಪು ಹಾಕದ ಅನ್ನ, ಅದಕ್ಕೆ ಬೆಲ್ಲ, ಬಾಳೆಹಣ್ಣು ಹಾಗೂ ಹಾಲಿನ ಮಿಶ್ರಣದ ಪ್ರಸಾದ ವಿತರಿಸಲಾಯಿತು. ಭಕ್ತರು ಇದನ್ನು ಅತ್ಯಂತ ಪೂಜ್ಯಭಾವದಿಂದ ಸ್ವೀಕರಿಸಿದರು.
ಪರಂಪರೆ ಉಳಿಸಬೇಕಾದ ಹೊಣೆ
ಇಂತಹ ಧಾರ್ಮಿಕ ಆಚರಣೆಗಳು ಮುಂದಿನ ಪೀಳಿಗೆಗೂ ತಲುಪಬೇಕು, ಯಾವ ಕಾರಣಕ್ಕೂ ನಿಲ್ಲಬಾರದು ಎಂಬ ಕಳಕಳಿ ಗ್ರಾಮದ ಹಿರಿಯರಲ್ಲಿ ವ್ಯಕ್ತವಾಯಿತು. ಇಂದಿನ ನವ ನಾಗರಿಕತೆಯಲ್ಲಿ ಉದ್ಯೋಗ, ಹಣ ಸಂಪಾದನೆ ಮತ್ತು ಅಧಿಕಾರದ ಒತ್ತಡದ ನಡುವೆ ಸಂಪ್ರದಾಯಗಳು ಮರೆತು ಹೋಗಬಾರದು ಎಂಬ ಅಭಿಪ್ರಾಯವೂ ಕೇಳಿಬಂತು. ವಿಶೇಷವೆಂದರೆ, ಈ ಜಾತ್ರೆಯ ಯಶಸ್ಸಿಗಾಗಿ ಹಲವು ಯುವಕರು ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಹಿರಿಯರಿಗೆ ಸಂತಸದ ವಿಷಯವಾಯಿತು.
ತೀವ್ರ ಚಳಿಯ ನಡುವೆಯೂ ಭಕ್ತಿಭಾವದಿಂದ ಈ ಆಚರಣೆ ಮುಂದುವರಿದಿರುವುದು ಈಚಘಟ್ಟ ಗ್ರಾಮದ ಧಾರ್ಮಿಕ ಶ್ರದ್ಧೆಗೆ ಸಾಕ್ಷಿಯಾಗಿದೆ.
ಭಾಗವಹಿಸಿದ ಗಣ್ಯರು
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಠದ ವಂಶಸ್ಥರಾದ ಹಿರಿಯರಾದ ಚೆನ್ನಬಸವಯ್ಯ, ಮಹಾರುದ್ರಯ್ಯ, ನಂಜಪ್ಪಯ್ಯ, ಮಲ್ಲಿಕಾರ್ಜುನಯ್ಯ, ಗ್ರಾಮದ ದೈವದ ಪ್ರಧಾನ ಅರ್ಚಕರಾದ ವೀರಭದ್ರಪ್ಪ ಹಾಗೂ ಅವರ ಪುತ್ರ ವಿನಾಯಕ, ಧರ್ಮದರ್ಶಿಗಳಾದ ಪ್ರಸನ್ನ ಕುಮಾರ್, ಉಜ್ಜನಪ್ಪ, ತಿಪ್ಪೇಸ್ವಾಮಿ, ಮೂಲೆಮನೆ ವೀರೇಶ್, ಹೆಗ್ಗೆರೆ ಬಸಪ್ಪ, ಲೋಕೇಶ್, ಪರಮೇಶ್ವರಪ್ಪ, ತಿಮ್ಮಜ್ಜರ ಕಲ್ಲಪ್ಪ, ಯುವಕರಾದ ಮಿಥುನ್, ಮಧು, ಕಾರ್ತಿಕ್, ಅಂಕಳಪ್ಪ ಸೇರಿದಂತೆ ಅನೇಕ ಗ್ರಾಮಸ್ಥರು ಸೇವಾಕಾರ್ಯದಲ್ಲಿ ಪಾಲ್ಗೊಂಡಿದ್ದರು.