ಬರೋಬ್ಬರಿ 1,03,315 ರೂ ಬಿಲ್ ನೀಡಿದ ಜೆಸ್ಕಾಂ.. ಕೊಪ್ಪಳದಲ್ಲಿ ವಿದ್ಯುತ್ ಬಿಲ್ ನೋಡಿ ಶಾಕ್ ಆದ ವೃದ್ದೆ!

ಕೊಪ್ಪಳ್ಳ ಜಿಲ್ಲೆಯಲ್ಲಿ ತಗಡಿನ ಶೆಡ್​ನಲ್ಲಿ ವಾಸಿಸುವ ವೃದ್ಧೆಗೆ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯುತ್​ ಬಿಲ್​ ಬಂದಿದ್ದು, ವೃದ್ಧೆಗೆ ಸಿಡಿಲು ಬಡಿದಂತಾಗಿದೆ.

ಕೊಪ್ಪಳ: ರಾಜ್ಯ ಸರ್ಕಾರದಿಂದ 200 ಯುನಿಟ್ ಉಚಿತ ವಿದ್ಯುತ್​ ಫ್ರೀ ಘೋಷಣೆಯಾಗಿದೆ. ಆದರೆ, ಇಲ್ಲೊಬ್ಬ ವೃದ್ಧೆಗೆ ಲಕ್ಷ ಲಕ್ಷ ವಿದ್ಯುತ್ ಬಿಲ್ ನೀಡಿ ಜೆಸ್ಕಾಂ ಶಾಕ್ ಕೊಟ್ಟಿದೆ. ಹೌದು, ಕೊಪ್ಪಳದ ಭಾಗ್ಯನಗರ ನಿವಾಸಿ ಗಿರಿಜಮ್ಮ ಎಂಬುವವರಿಗೆ ಲಕ್ಷ ಲಕ್ಷ ಬಿಲ್ ಬಂದಿದೆ. ಗಿರಿಜಮ್ಮರ ಮನೆಯಲ್ಲಿ ಪ್ರತಿದಿನ ಉರಿಯುವುದು ಎರಡೇ ಎರಡು ಲೈಟ್, ಆದರೂ, ಬರೋಬ್ಬರಿ 1,03,315 ರೂ ಬಿಲ್ ನೋಡಿ ವೃದ್ದೆ ಕಣ್ಣೀರು ಹಾಕಿದ್ದಾರೆ.

ಈ ಹಿಂದೆ ಗಿರಿಜಮ್ಮನ ಮನೆಗೆ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಮೊದಲೆಲ್ಲ ರೂ. 70 ರಿಂದ 80 ರೂ ಬಿಲ್ ಬರುತ್ತಿತ್ತು. ಕಳೆದ ಆರು ತಿಂಗಳ ಹಿಂದೆ ವೃದ್ಧೆಯ ಮನೆಗೆ ಜೆಸ್ಕಾಂ ಸಿಬ್ಬಂದಿ ಹೊಸ ಮೀಟರ್ ಅಳವಡಿಸಿದ ಬಳಿಕ ಲಕ್ಷ ಲೆಕ್ಕದಲ್ಲಿ ಕರೆಂಟ್ ಬಿಲ್ ಬಂದಿದೆ. ಕೇವಲ 6 ತಿಂಗಳಲ್ಲಿ 1 ಲಕ್ಷ ದಾಟಿದ ವಿದ್ಯುತ್ ಬಿಲ್ ಬಂದಿದೆ.

”ವಿದ್ಯುತ್​ ಬಿಲ್​ ನೋಡಿ ಶಾಕ್​ನಲ್ಲಿರುವ ಗಿರಿಜಮ್ಮ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. “ನೀವೇ ನೋಡಿ ಬಡವರಿಗೆ ಹೀಗೆ ಕರೆಂಟ್​ ಬಿಲ್​ ಬಂದರೆ ಹೇಗೆ. ತಾವು ವಾಸವಿರುವ ಚಿಕ್ಕ ಗುಡಿಸಿಲಿನಲ್ಲಿ ಇರುವುದೇ 2 ಬಲ್ಬ್​. ಜೊತೆಗೆ ಮಿಕ್ಸಿ ಕೂಡ ನಾನು ಬಳಸುವುದಿಲ್ಲ. ಹಳೆಯ ಕ್ರಮದಂತೆ ಈಗಲೂ ಕುಟ್ಟಿ ಪುಡಿ ಮಾಡಿ ಅಡುಗೆ ಮಾಡುತ್ತಿದ್ದೇನೆ. ಹೊಸ ಮೀಟರ್​

ಅಳವಡಿಸಿದ ನಂತರ ಈ ರೀತಿಯಾಗಿ ಬಿಲ್​ ಬರುತ್ತಿದೆ. ಇಷ್ಟೊಂದು ಬಿಲ್​ ಬಂದರೆ ಕಟ್ಟುವುದಾದರೂ ಹೇಗೆ?” ಎಂದು ಗಿರಿಜಮ್ಮ ಪ್ರಶ್ನೆ ಮಾಡುತ್ತಿದ್ದಾರೆ

ಇನ್ನು ವಾಸ್ತವದ ವಿಚಾರ ಎಂದರೆ ಸಣ್ಣ ತಗಡಿನ ಶೆಡ್ ಹೊಂದಿರುವ ಗಿರಿಜಮ್ಮ ಮಾತ್ರ ಆ ಮನೆಯಲ್ಲಿರುವುದು. ಒಂದೊತ್ತಿನ ಊಟಕ್ಕೆ ಪರದಾಡೋ ಈ ಅಜ್ಜಿಗೆ ಲಕ್ಷ ಬಿಲ್ ಕಟ್ಟೊದು ಹೇಗೆ ಎಂದು ಯೋಚಿಸಿ ಕಣ್ಣಿರು ಹಾಕುತ್ತಿದ್ದಾರೆ ಗಿರಿಜಮ್ಮ. ಜೆಸ್ಕಾಂ ಅಧಿಕಾರಿಗಳ ಈ ಎಡವಟ್ಟಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇದು ಗಿರಿಜಮ್ಮ ಒಬ್ಬರ ಸಂಕಷ್ಟ ಅಲ್ಲ, ರಾಜ್ಯದ ಬಹುತೇಕ ಜನರ ಸಮಸ್ಯೆಯಾಗಿದೆ. ಯೂನಿಟ್​ ದರ ಹೆಚ್ಚಳ ಆಗಿರುವುದರಿಂದ ಹಾಗೂ ಹಿಂದಿನ ಬಾಕಿ ಸೇರಿದಂತೆ ಇತರ ಶುಲ್ಕಗಳಿಂದಾಗಿ ಬಹುತೇಕರ ಬಿಲ್​​ಗಳು ಈ ಬಾರಿ ಜಾಸ್ತಿ ಬಂದಿದೆ. ಈ ವಿಚಾರ ಸಿಎಂ ಗಮನಕ್ಕೂ ಬಂದಿದ್ದು, ಮುಂದಿನ ತಿಂಗಳಿಂದ ಎಲ್ಲವೂ ಸರಿ ಹೋಗಲಿದೆ ಎಂದು ಹೇಳಿದ್ದಾರೆ. ಆದ್ರೆ ನಿತ್ಯವೂ ಇಂತಹ ವಿಚಾರಗಳು ರಾಜ್ಯಾದ್ಯಂತ ಸದ್ದು ಮಾಡುತ್ತಿವೆ.

ಈ ನಡುವೆ, ಇಂದು ವಿದ್ಯುತ್​ ಬಿಲ್​ ಏರಿಕೆ ಖಂಡಿಸಿ, ಕೈಗಾರಿಕೋದ್ಯಮಿಗಳ ಸಂಘ ಸಾಂಕೇತಿಕ ಬಂದ್​ಗೆ ಕರೆ ನೀಡಿದ್ದು, ಸರ್ಕಾರದ ನಿಲುವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ. ತಕ್ಷಣ ವಿದ್ಯುತ್​ ದರ ಇಳಿಕೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.

Source : https://m.dailyhunt.in/news/india/kannada/etvbhar9348944527258-epaper-etvbhkn/barobbari+1+03+315+ru+bil+nididha+jeskaan+koppaladalli+vidyut+bil+nodi+shaak+aadha+vrudde+-newsid-n511659186?listname=newspaperLanding&topic=homenews&index=3&topicIndex=0&mode=pwa&action=click

Leave a Reply

Your email address will not be published. Required fields are marked *