ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ವಿವಾಹ; 1 ದಿನಕ್ಕೆ ಶೇ.500ರಷ್ಟು ದರ ಹೆಚ್ಚಿಸಿದ ಮುಂಬೈ ಹೋಟೆಲ್‌ಗಳು!

ಬಿಲಿಯನೇರ್ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಜು.12ರಂದು ನಡೆಯಲಿದ್ದು ನಂತರದ ಮೂರ್ನಾಲ್ಕು ದಿನಗಳು ವಿವಾಹ ಸಂಬಂಧ ಆಚರಣೆಗಳು ಸಾಲಿನಲ್ಲಿವೆ. 

ಈ ಕಾರ್ಯಕ್ರಮಕ್ಕಾಗಿ ಸೆಲೆಬ್ರಿಟಿಗಳ ದಂಡೇ ಹರಿದು ಬರಲಿದೆ. ಬಂದ ಮೇಲೆ ಅವರಿಗೆಲ್ಲ ಸ್ಟಾರ್ ಹೋಟೆಲ್‌ಗಳಂತೂ ಬೇಕೇ ಬೇಕು. ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಮುಂಬೈನ ಹೋಟೆಲ್‌ಗಳು, ಅದರಲ್ಲೂ ಮದುವೆ ಸಭಾಂಗಣಕ್ಕೆ ಸಮೀಪವಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿರುವ ಎರಡು ಪ್ರಮುಖ ಹೋಟೆಲ್‌ಗಳು ಯರ್ರಾಬಿರ್ರಿ ದರ ಹೆಚ್ಚಿಸಿಕೊಂಡಿವೆ. ಹಾಗಿದ್ದೂ, ಅವು ಈಗಾಗಲೇ ಸಂಪೂರ್ಣವಾಗಿ ಬುಕ್ ಆಗಿವೆ.

ಜುಲೈ 10ರಿಂದ 15ರವರೆಗೆ ಇಲ್ಲಿನ ದರಗಳು ಆಕಾಶದಿಂದ ಕೆಳಗಿಳಿಯುವುದಿಲ್ಲ. ಹೌದು, ಸಾಮಾನ್ಯವಾಗಿ ಪ್ರತಿ ರಾತ್ರಿಗೆ  13,000 ರೂ. ವಿಧಿಸುವ ಈ ಹೋಟೆಲ್‌ಗಳು ನಿಗದಿತ ದಿನಾಂಕಗಳಂದು ಪ್ರತಿರಾತ್ರಿಗೆ  91,350 ರೂ. ದರ ನಿಗದಿಪಡಿಸಿವೆ. 

ಟ್ರಾವೆಲ್ ಮತ್ತು ಹೋಟೆಲ್ ವೆಬ್‌ಸೈಟ್‌ಗಳ ಪ್ರಕಾರ, ಟ್ರೈಡೆಂಟ್ BKC ಯಲ್ಲಿ ರೂಮ್ ದರಗಳು ತೀವ್ರವಾಗಿ ಬದಲಾಗಿವೆ. 10,000 ದಿಂದ ಅವು ಜು.15ಕ್ಕೆ 17000ಕ್ಕೆ ಏರಿವೆ. ಇನ್ನು Sofitel BKC ಯ ದರಗಳು ಜುಲೈ 9ರಂದು ರೂ 13,000 ಇರುವುದು ಜುಲೈ 14ರಂದು ರೂ 91,350ಕ್ಕೆ ಏರಿದೆ. ಇತರ ಪಂಚತಾರಾ ಹೋಟೆಲ್‌ಗಳಾದ ಗ್ರ್ಯಾಂಡ್ ಹಯಾಟ್, ತಾಜ್ ಸಾಂತಾಕ್ರೂಜ್, ತಾಜ್ ಬಾಂದ್ರಾ ಮತ್ತು ಸೇಂಟ್ ರೆಗಿಸ್ ಕೂಡಾ ದರ ಏರಿಸಿವೆ. 

ಹಾಸ್ಪಿಟಾಲಿಟಿ ತಜ್ಞರ ಪ್ರಕಾರ ಹೋಟೆಲ್‌ಗಳು ಹೆಚ್ಚಾಗಿ ಉನ್ನತ-ಪ್ರೊಫೈಲ್ ಮದುವೆಗಳು ಮತ್ತು ಕಾರ್ಯಕ್ರಮಗಳ ಸಮಯದಲ್ಲಿ ದರ ಏರಿಸುವುದು ಸಹಜವಾಗಿದೆ. ಈ ಟ್ರೆಂಡ್ ದೆಹಲಿಯಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಮದುವೆ ಸೀಸನ್‌ಗೆ ಮತ್ತು ಬೆಂಗಳೂರಿನಲ್ಲಿ ಏರೋ ಶೋದಂತಹ ಕಾರ್ಯಕ್ರಮಗಳಿಗೆ ವಿಸ್ತರಿಸುತ್ತದೆ. ಈ ಘಟನೆಗಳು ಹೋಟೆಲ್ ಆಕ್ಯುಪೆನ್ಸಿಯ ಮೇಲೆ ಪರಿಣಾಮ ಬೀರುವುದಲ್ಲದೆ ವಿಮಾನ ದರಗಳು ಮತ್ತು ಸಾರಿಗೆ ವೆಚ್ಚಗಳನ್ನು ಹೆಚ್ಚಿಸುತ್ತವೆ, ಹೋಟೆಲ್‌ಗಳು ಸಾಮಾನ್ಯವಾಗಿ 30% ರಿಂದ 50% ಪ್ರೀಮಿಯಂ ಅನ್ನು ವಿಧಿಸುತ್ತವೆ.

ಸಂಚಾರ ನಿರ್ಬಂಧಗಳು
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಕಾರಣ ಮುಂಬೈ ಟ್ರಾಫಿಕ್ ಪೊಲೀಸರು ಜುಲೈ 12 ರಿಂದ 15 ರವರೆಗೆ ಬಿಕೆಸಿಗೆ ಸಂಚಾರ ಸಲಹೆಯನ್ನು ನೀಡಿದ್ದಾರೆ. ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ಗೆ ಹೋಗುವ ಹಲವಾರು ರಸ್ತೆಗಳು ಮಧ್ಯಾಹ್ನ 1 ರಿಂದ ಮಧ್ಯರಾತ್ರಿಯವರೆಗೆ ಪ್ರವೇಶವನ್ನು ನಿರ್ಬಂಧಿಸುತ್ತವೆ. ಹಲವು ಕಂಪನಿಗಳು ಆ ದಿನಗಳಂದು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಡಲು ಅವಕಾಶ ನೀಡಿವೆ. 

Source : https://kannada.asianetnews.com/business/anant-ambani-radhika-merchant-wedding-per-night-hotel-prices-in-mumbai-jump-to-500-percet-skr-sgccow

Leave a Reply

Your email address will not be published. Required fields are marked *