ಅನಂತ್ ಅಂಬಾನಿ-ರಾಧಿಕಾ ಮದುವೆಗೆ ಮುಹೂರ್ತ್ ಫಿಕ್ಸ್, ಕಣ್ಣು ಕೋರೈಸುವಂತಿದೆ ಆಮಂತ್ರಣ ಪತ್ರಿಕೆ.

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹಕ್ಕೆ (Anant Ambani-Radhik Merchant Wedding Wedding Date) ಮುಹೂರ್ತ ಫಿಕ್ಸ್ ಆಗಿದೆ.

ಇದೇ  ಜುಲೈ ತಿಂಗಳ 12 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇಡೀ ಜಗತ್ತೇ ತಿರುಗಿ ನೋಡುವಂತೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ನೆರವೇರಲಿದೆ. ಮದುವೆಗೆ ಆಗಮಿಸುವ ಅತಿಥಿಗಳು ಮೂರು ದಿನಗಳ ಕಾಲ ನಡೆಯುವ ಅದ್ಧೂರಿ ವಿವಾಹ ಸಮಾರಂಭದ ಕೆಲವು ವಿವರಗಳನ್ನು ಬಹಿರಂಗಪಡಿಸುವ ಸಾಂಪ್ರದಾಯಿಕ ಕೆಂಪು ಮತ್ತು ಚಿನ್ನದ ಕಾರ್ಡ್ ಆಗಿರುವ ‘ಸೇವ್‌ ದಿ ಡೇಟ್‌’ ಆಹ್ವಾನವನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

ಮುಖ್ಯ ವಿವಾಹ ಸಮಾರಂಭವು ಜುಲೈ 12 ರಂದು ಶುಭ ವಿವಾಹ ಅಥವಾ ವಿವಾಹ ಕಾರ್ಯದೊಂದಿಗೆ ಪ್ರಾರಂಭವಾಗುತ್ತವೆ. ಡ್ರೆಸ್ ಕೋಡ್ ಭಾರತೀಯ ಸಾಂಪ್ರದಾಯಿಕವಾಗಿರಬೇಕು ಎಂದು ಅತಿಥಿಗಳಿಗೆ ಸಲಹೆ ನೀಡಲಾಗಿದೆ. ಜುಲೈ 13 ಶುಭ ಆಶೀರ್ವಾದದ ದಿನವಾಗಿರುತ್ತದೆ. ಅಂದು ಕೂಡ ಡ್ರೆಸ್ ಕೋಡ್ ಅನ್ನು ಭಾರತೀಯ ಶೈಲಿಯಲ್ಲಿಯೇ ಔಪಚಾರಿಕವಾಗಿ ಸೂಚಿಸಲಾಗಿದೆ. ಜುಲೈ 14 ರಂದು ಮಂಗಲ್ ಉತ್ಸವ ಅಥವಾ ಮದುವೆಯ ಆರತಕ್ಷತೆ ಇರುತ್ತದೆ. ಅಂದು ಡ್ರೆಸ್ ಕೋಡ್ ಅನ್ನು ‘ಭಾರತೀಯ ಚಿಕ್’ ರೀತಿಯಲ್ಲಿ ಇರುವಂತೆ ಸಲಹೆ ನೀಡಲಾಗಿದೆ.

ಈ ಎಲ್ಲಾ ಸಮಾರಂಭಗಳು ಬಿಕೆಸಿಯಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ. ಸಾಂಪ್ರದಾಯಿಕ ವೈದಿಕ ಹಿಂದೂ ಪದ್ಧತಿಯ ಪ್ರಕಾರ ಮುಖ್ಯ ವಿವಾಹ ಕಾರ್ಯಗಳು ಮತ್ತು ಸಮಾರಂಭಗಳನ್ನು ನಡೆಸಲಾಗುತ್ತದೆ.

ಜಾಮ್‌ನಗರ ರೀಕ್ಯಾಪ್

ಈ ವರ್ಷದ ಆರಂಭದಲ್ಲಿ, ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಅನಂತ್ ಮತ್ತು ರಾಧಿಕಾ ಅವರ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪ್ರಪಂಚದಾದ್ಯಂತದ ಉದ್ಯಮಿಗಳು, ರಾಷ್ಟ್ರಗಳ ಮುಖ್ಯಸ್ಥರು, ಹಾಗೆಯೇ ಹಾಲಿವುಡ್ ಮತ್ತು ಬಾಲಿವುಡ್ ತಾರೆಯರು ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಪ್ರಿಸ್ಸಿಲ್ಲಾ ಚಾನ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ, ಕಾರ್ಪೊರೇಟ್ ನಾಯಕರಾದ ಗೌತಮ್ ಅದಾನಿ, ನಂದನ್ ನಿಲೇಕಣಿ ಮತ್ತು ಅಡಾರ್ ಪೂನಾವಾಲಾ, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ಆಧ್ಯಾತ್ಮಿಕ ನಾಯಕ ರೋಹಿತ್ ಸದ್ಗುರು ಜಗ್ಗಿ ವಾಸುದೇವ್ ಅವರು ವಿವಾಹ ಪೂರ್ವ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಅಲ್ಲದೇ, ಈ ಕಾರ್ಯಕ್ರಮಕ್ಕೆ ಅಮಿತಾಭ್ ಬಚ್ಚನ್, ರಜನಿಕಾಂತ್, ಶಾರುಖ್ ಖಾನ್, ಅಮೀರ್ ಖಾನ್, ಕರಣ್ ಜೋಹರ್, ರಣಬೀರ್ ಕಪೂರ್-ಆಲಿಯಾ ಭಟ್, ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಅವರನ್ನು ಸಹ ಆಹ್ವಾನಿಸಲಾಗಿತ್ತು. ಭಾರತದಲ್ಲಿ ತನ್ನ ಮೊದಲ ಪ್ರದರ್ಶನ ನೀಡಿದ್ದ ಪಾಪ್ ತಾರೆ ರಿಹಾನ್ನಾ ವೇದಿಕೆಗೆ ಬೆಂಕಿ ಹಚ್ಚುವಂತೆ ಮೆಗಾ ಕಾರ್ಯಕ್ರಮ ನೀಡಿದ್ದರು.

Source : https://kannada.news18.com/news/national-international/anant-ambani-and-radhika-merchant-save-the-date-card-is-out-wedding-in-mumbai-on-july-12-here-the-details-akd-1719726.html#google_vignette

Leave a Reply

Your email address will not be published. Required fields are marked *