ರಾಯಚೂರಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ! ಓರ್ವ ಮಹಿಳೆ ಬಲಿ, 18 ಜನರಿಗೆ ಗಾಯ.

ರಾಯಚೂರು: ಟೈರ್ ಸ್ಫೋಟಗೊಂಡು (Tire blast) ವಾಹನ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು (Students) ಸೇರಿದಂತೆ ನಾಲ್ವರು ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆ ಬುಧವಾರ ರಾಯಚೂರು (Raichuru) ಜಿಲ್ಲೆಯ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ಬಳಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಅಪಘಾತ (Terrible Accident) ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, 18 ಜನರಿಗೆ ಗಾಯಗಳಾಗಿವೆ.

ಮದುವೆಯಾಗಿ ವರ್ಷ ಕೂಡ ಕಳೆಯುವ ಮೊದಲೇ ಮಸ ಸೇರಿದ ಮಹಿಳೆ

ಲಿಂಗಸಗೂರು ತಾಲೂಕಿನ ಬನ್ನಿಗೋಳ ಗ್ರಾಮದ ನಿವಾಸಿ ಶ್ರೀದೇವಿ (19) ಎನ್ನುವ ಮಹಿಳೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರ ಮದುವೆಯಾಗಿ ಒಂದು ವರ್ಷ ಕೂಡ ಕಳೆದಿಲ್ಲ, ಆದರೆ ಇದೀಗ ಅಪಘಾತದಲ್ಲಿ ಮಸ ಸೇರಿದ್ದಾರೆ. ಮದ್ಗಲ್ ಸಮೀಪದ ಬನ್ನಿಗೋಳ ಹೊರವಲಯದಲ್ಲಿ ಈ ಅಪಘಾತ ನಡೆದಿದ್ದು, KSRTC ಬಸ್ ಮತ್ತು ಟ್ರ್ಯಾಕ್ಟರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಲ್ಲದೇ 18 ಜನರು ಗಾಯಗೊಂಡಿದ್ದಾರೆ.

ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಗೆ ಡಿಕ್ಕಿ

KSRTC ಬಸ್ ಅಂಕಲಿಮಠದಿಂದ ಮುದ್ಗಲ್ ಕಡೆ ಹೊರಟಿತ್ತು. ಮತ್ತೊಂದೆಡೆ ಟ್ರ್ಯಾಕ್ಟರ್ ಬನ್ನಿಗೋಳದಿಂದ ಕೂಲಿ ಕಾರ್ಮಿಕರನ್ನ ಕರೆದೊಯ್ಯುತ್ತಿತ್ತು. ಈ ವೇಳೆ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಗೆ ಡಿಕ್ಕಿ ಹೊಡೆದಿದೆ.  ಸಧ್ಯ ಗಾಯಾಳುಗಳನ್ನು ಲಿಂಗಸಗೂರು & ಮುದ್ಗಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮುದ್ಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Source : https://kannada.news18.com/news/state/another-horrific-road-accident-in-raichur-pgy-1975464.html

Leave a Reply

Your email address will not be published. Required fields are marked *