2025ರ ಮಹಿಳಾ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಮಹಿಳಾ ಕಬಡ್ಡಿ ತಂಡವು ಅದ್ಭುತ ಪ್ರದರ್ಶನ ನೀಡುತ್ತಾ ಸತತ ಎರಡನೇ ವರ್ಷದ ವಿಶ್ವ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಬಾಂಗ್ಲಾದೇಶದ ಢಾಕಾದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 35–28 ಅಂಕಗಳ ಅಂತರದಲ್ಲಿ ಮಣಿಸಿ ಭಾರತವು ವಿಶ್ವದ ಮುಂದೆ ತನ್ನ ನಾರಿ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
2012ರ ನಂತರ 13 ವರ್ಷಗಳ ಬಳಿಕ ಆಯೋಜಿಸಲಾದ ಎರಡನೇ ಆವೃತ್ತಿಯ ಮಹಿಳಾ ಕಬಡ್ಡಿ ವಿಶ್ವಕಪ್‌ನಲ್ಲಿ ಭಾರತವು ಮತ್ತೆ ಚಾಂಪಿಯನ್ ಆಗಿದ್ದು, ಮೊದಲ ಆವೃತ್ತಿಯಲ್ಲಿಯೂ ಭಾರತವೇ ಪ್ರಶಸ್ತಿ ಗೆದ್ದಿತ್ತು.
ಸೆಮಿಫೈನಲ್‌ನಲ್ಲಿ ಇರಾನ್ ತಂಡದ ಮೇಲೆ 33–21 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದ್ದ ಭಾರತ ತಂಡ, ಅದೇ ಉತ್ಸಾಹವನ್ನು ಮುಂದುವರಿಸಿಕೊಂಡು ರೋಚಕ ಅಂತಿಮ ಪಂದ್ಯದಲ್ಲಿ ಅಜೇಯ ದಾಖಲೆಯೊಂದಿಗೆ ಬಂದಿದ್ದ ಚೈನೀಸ್ ತೈಪೆ ತಂಡವನ್ನು ಸೋಲಿಸಿದೆ.
ಪ್ರಧಾನಿ ಮೋದಿ ಅಭಿನಂದನೆ
ಈ ಐತಿಹಾಸಿಕ ಗೆಲುವಿನ ಸಂಭ್ರಮಕ್ಕೆ ರಾಷ್ಟ್ರಪತಿ ಮಟ್ಟದಿಂದಲೇ ಪ್ರಶಂಸೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, “2025ರ ಕಬಡ್ಡಿ ವಿಶ್ವಕಪ್ ಗೆಲುವು ದೇಶದ ಹೆಮ್ಮೆ ಹೆಚ್ಚಿಸಿದೆ. ಇವರ ಸಮರ್ಪಣೆ, ಪರಿಶ್ರಮ ಮತ್ತು ಕ್ರೀಡಾ ಮನೋಭಾವ ಅನೇಕ ಯುವಕರಿಗೆ ಸ್ಫೂರ್ತಿ” ಎಂದು ತಿಳಿಸಿದ್ದಾರೆ.
ಭಾರತೀಯ ಹೆಣ್ಣುಮಕ್ಕಳ ಧೈರ್ಯ, ಶಕ್ತಿ ಮತ್ತು ತಂಡಶಕ್ತಿಯ ಮತ್ತೊಂದು ಅದ್ಭುತ ಉದಾಹರಣೆಯಾಗಿ ಈ ವಿಶ್ವಕಪ್ ಗೆಲುವು ಇತಿಹಾಸದಲ್ಲೇ ಚಿನ್ನದ ಅಕ್ಷರದಲ್ಲಿ ಅಚ್ಚಳಿಯಲಿದೆ.
Views: 14