ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ, ಡಿ.20:
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರು, ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಟೆಂಡರ್ ಪಡೆದ ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಗಿ ಕಂಪನಿಗಳ ವಿರುದ್ಧ ಸಮಗ್ರ ತನಿಖೆ ನಡೆಸುವಂತೆ ಕಾರ್ಮಿಕ ನಿರೀಕ್ಷಕರ ಮೂಲಕ ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ಶನಿವಾರ ಮನವಿ ಸಲ್ಲಿಸಿದರು.
ಕಾರ್ಮಿಕರ ಕಲ್ಯಾಣ ಮಂಡಳಿಯ ಸೆಸ್ ನಿಧಿಯನ್ನು ನಿಜವಾದ ನೊಂದಾಯಿತ ಕಟ್ಟಡ ಕಾರ್ಮಿಕರ ಹಿತಕ್ಕಾಗಿ ಬಳಸಲಾಗುತ್ತಿಲ್ಲ ಎಂಬ ಆರೋಪವನ್ನು ಧರಣಿನಿರತರು ಮಾಡಿದರು. ‘ಹೆಲ್ತ್ ಕೇರ್ ಚೆಕ್’ ಹೆಸರಿನಲ್ಲಿ ಸುಮಾರು ₹25.77 ಕೋಟಿ ವೆಚ್ಚ ಮಾಡಿರುವುದರ ಹಿಂದೆ ಅಕ್ರಮಗಳಿವೆ ಎಂದು ಅವರು ದೂರಿದರು. ವಾಲ್ಮೀಕಿ ಅಭಿವೃದ್ಧಿ ಮಂಡಳಿಯ ಅಕ್ರಮಗಳ ತನಿಖೆ ನಡೆದ ರೀತಿಯಲ್ಲಿಯೇ, ಕಾರ್ಮಿಕರ ಕಲ್ಯಾಣ ಮಂಡಳಿಯ ಟೆಂಡರ್ ಪ್ರಕ್ರಿಯೆಗಳನ್ನೂ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಆಯೋಗ ಹಾಗೂ ಸೆಸ್ ಪ್ರಾಧಿಕಾರ ರಚನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ, ಕಾರ್ಮಿಕ ಇಲಾಖೆ ಎದುರು ಕಳೆದ 12 ದಿನಗಳಿಂದ ಧರಣಿ ನಡೆಸುತ್ತಿರುವ ಕಟ್ಟಡ ಕಾರ್ಮಿಕರು, ಟೆಂಡರ್ ಪಡೆದ ಖಾಸಗಿ ಸಂಸ್ಥೆಗಳ ವಿರುದ್ಧ ತನಿಖೆ ಅಗತ್ಯವಿದೆ ಎಂದು ಒತ್ತಾಯಿಸಿದರು. ಅಲ್ಲದೆ, ಅಂಬೇಡ್ಕರ್ ಸೇವಾ ಕೇಂದ್ರದ ಮೂಲಕ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ನೀಡುವ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಿರುವ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಜೆ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ವೈ. ಕುಮಾರ್ ಸೇರಿದಂತೆ ಪ್ರಸನ್ನ, ಕೆ. ಗೌಸ್ಪೀರ್, ರಾಜಣ್ಣ, ಎಂ.ಆರ್. ನರಸಿಂಹ ಮೂರ್ತಿ, ಎಂ. ತಿಮ್ಮಯ್ಯ ಹಾಗೂ ಇತರರು ಹಾಜರಿದ್ದರು.
Views: 7