ಬೆಂಗಳೂರಿನಲ್ಲಿ ಭಾರಿ ಸ್ಫೋಟಕ್ಕೆ ಸಂಚು: ಐವರು ಶಂಕಿತ ಉಗ್ರರ ಬಂಧನ, ತನಿಖೆ ತೀವ್ರ

ಬೆಂಗಳೂರಿನಲ್ಲಿ ಭಾರಿ ಸ್ಫೋಟಕ್ಕೆ ಯೋಜನೆ ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಮಾಹಿತಿ ಮೇರೆಗೆ ನಗರದ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಜುನೈದ್, ಸಯ್ಯದ್ ಸೋಹೆಲ್, ಮುದಾಸಿರ್, ಉಮರ್ ಮತ್ತು ಜಾಹಿದ್‌ ಸೇರಿ ಐವರನ್ನು ಬಂಧಿಸಲಾಗಿದೆ. ಈ ಆರೋಪಿಗಳಲ್ಲಿ ಸ್ಪೋಟಕ ವಸ್ತುಗಳು, 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೈಡ್​​ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.

ತನಿಖೆ ತೀವ್ರ: ಮಡಿವಾಳ ಟೆಕ್ನಿಕಲ್ ಸೆಲ್​​ನಲ್ಲಿ ಶಂಕಿತರ ತೀವ್ರ ವಿಚಾರಣೆ ನಡೆಯುತ್ತಿದೆ. ಸಿಸಿಬಿ ಅಧಿಕಾರಿಗಳು ಶಂಕಿತರ ಮೊಬೈಲ್ ಫೋನ್​ಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನಿಬ್ಬರು ಇವರ ಜೊತೆ ನಂಟು ಹೊಂದಿರುವ ಮಾಹಿತಿ ಇದೆ. ಆ ಇಬ್ಬರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಮತ್ತೊಂದು ಪೊಲೀಸ್​ ತಂಡದಿಂದ ತೀವ್ರ ಹುಡುಕಾಟ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ವಿಧ್ವಂಸಕ ಕೃತ್ಯಕ್ಕೆ ಸಂಚು: ತನಿಖಾ ತಂಡಗಳು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ಅವರು ರೂಪಿಸಿದ ಪ್ರಮುಖ ದುಷ್ಕೃತ್ಯಕ್ಕೆ ಕಡಿವಾಣ​ ಹಾಕಿದ್ದಾರೆ. ಆರೋಪಿಗಳು ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಪಿಸ್ತೂಲ್ ಸೇರಿದಂತೆ ಬಾಂಬ್ ರಾ ಮಟೀರಿಯಲ್ ಸಿದ್ಧಪಡಿಸಿಕೊಂಡಿದ್ದರು. ಸುಮಾರು 10ಕ್ಕೂ ಹೆಚ್ಚು ಜನರಿಂದ ಬೃಹತ್ ಸ್ಫೋಟಕ ಮಾಡುವ ಯೋಜನೆ ನಡೆದಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಗುಪ್ತಚರ ಇಲಾಖೆಗೆ ನಿಖರ ಮಾಹಿತಿ ಸಿಕ್ಕಿತ್ತು. ಕೂಡಲೇ ಬೆಂಗಳೂರು ಸಿಸಿಬಿ ತಂಡಕ್ಕೆ ಮಾಹಿತಿ ರವಾನಿಸಲಾಗಿದೆ. ತಕ್ಷಣ ಅಲರ್ಟ್ ಆದ ಸಿಸಿಬಿ ಪೊಲೀಸರು ಶಂಕಿತರ ಲೊಕೇಶನ್ ಟ್ರೇಸ್ ಮಾಡಿ ಬಂಧಿಸಿದ್ದಾರೆ. ಗುಪ್ತಚರ ಇಲಾಖೆ, ಎನ್‌ಐಎ ಹಾಗೂ ಸಿಸಿಬಿ ತಂಡಗಳಿಂದ ಜಂಟಿ ಕಾರ್ಯಾಚರಣೆ ನಡೆದಿದೆ.

ಉಗ್ರರಲ್ಲಿ ನಾಲ್ವರು ರೌಡಿಶೀಟರ್​ಗಳು: ಸಿಸಿಬಿ ವಶದಲ್ಲಿರುವ ಶಂಕಿತರಲ್ಲಿ ನಾಲ್ವರು ಆರ್​ಟಿನಗರ ಪೊಲೀಸ್​ ಠಾಣೆ ವ್ಯಾಪ್ತಿಯ ರೌಡಿಶೀಟರ್​ಗಳಾಗಿದ್ದಾರೆ. ಕೊರೊನಾ ಸಮಯದಲ್ಲಿ ಓರ್ವನನ್ನೂ ಅಪಹರಿಸಿ ಕೊಲೆ ಮಾಡಿದ್ದ ಆರೋಪಿಗಳಾಗಿದ್ದಾರೆ. ಜೈಲಿನಲ್ಲಿಯೇ ಈ ನಾಲ್ವರಿಗೂ ಶಂಕಿತ ಉಗ್ರರ ಪರಿಚಯ ಆಗಿತ್ತು. ಬಳಿಕ ಶಂಕಿತರ ಜೊತೆ ಸಂಪರ್ಕ ಮುಂದುವರೆಸಿಕೊಂಡು ದುಷ್ಕೃತ್ಯ ಎಸಗಲು ತರಬೇತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಜೈಲಿನಿಂದ ಹೊರಬಂದ ಬಳಿಕ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದರು. ಬಾಂಬ್​​ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನೆಲ್ಲ ಸಿದ್ಧಪಡಿಸಿದ್ದರು. ಇವರ ಜೊತೆಗೆ ಇನ್ನೂ ಹಲವರು ಸೇರಿ ಕೃತ್ಯಕ್ಕೆ ಯೋಜನೆ ರೂಪಿಸಿದ್ದ ಮಾಹಿತಿ ಇದೆ. ಇವರಿಗೆ ಲಿಂಕ್ ಇರುವ ಮತ್ತಷ್ಟು ಜನರ ಹುಡುಕಾಟ ನಡೆಯುತ್ತಿದೆ ಎಂದು ಸಿಸಿಬಿ ಮೂಲಗಳಿಂದ ತಿಳಿದುಬಂದಿದೆ.

Source : https://m.dailyhunt.in/news/india/kannada/etvbhar9348944527258-epaper-etvbhkn/bengalurinalli+bhaari+sfotakke+sanchu+aivaru+shankita+ugrara+bandhana+tanikhe+tivra-newsid-n519839622?listname=newspaperLanding&topic=homenews&index=2&topicIndex=0&mode=pwa&action=click

Leave a Reply

Your email address will not be published. Required fields are marked *