Ashes 2023: ಟೆಸ್ಟ್ ನಿವೃತ್ತಿ ಹಿಂಪಡೆದ ಇಂಗ್ಲೆಂಡ್​ನ ಸ್ಟಾರ್ ಆಲ್​ರೌಂಡರ್! ಆಶಸ್ ಸರಣಿಗೆ ಆಯ್ಕೆ

2021ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಇಂಗ್ಲೆಂಡ್‌ನ ಆಲ್‌ರೌಂಡರ್ ಮೊಯಿನ್ ಅಲಿ ತಮ್ಮ ಟೆಸ್ಟ್ ನಿವೃತ್ತಿಯನ್ನು ಹಿಂಪಡೆದಿದ್ದಾರೆ. ಇದೀಗ ಮೊಯಿನ್ ಅಲಿ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ಆಯ್ಕೆ ಮಾಡಲಾಗಿದೆ.ಇಂಗ್ಲೆಂಡ್​ನ ಮತ್ತೊಬ್ಬ ಸ್ಪಿನ್ನರ್ ಜಾಕ್ ಲೀಚ್ ಇಂಜುರಿಗೊಂಡಿರುವುದರಿಂದ ಅವರ ಸ್ಥಾನಕ್ಕೆ ಮೊಯಿನ್ ಅಲಿ ಅವರನ್ನು ಆಶಸ್ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗೆ ಇಂಗ್ಲಿಷ್ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ನಾಯಕ ಬೆನ್ ಸ್ಟೋಕ್ಸ್ ಮತ್ತು ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಮೊಯಿನ್ ಅಲಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಅಲಿ ತಮ್ಮ ಟೆಸ್ಟ್ ನಿವೃತ್ತಿಯ ನಿರ್ಧಾರವನ್ನು ಹಿಂಪಡೆದುಕೊಂಡಿದ್ದಾರೆ. ಐರ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಜ್ಯಾಕ್ ಲೀಚ್ ಗಾಯಗೊಂಡಿದ್ದರು. ಹೀಗಾಗಿ ಅವರ ಬದಲಿಯಾಗಿ ನೋಡುತ್ತಿದ್ದ ಇಂಗ್ಲೆಂಡ್​ಗೆ ಮೊಯಿನ್ ಅಲಿ ಅತ್ಯುತ್ತಮ ಆಯ್ಕೆಯಾಗಿದ್ದಾರೆ. ಅಂದಹಾಗೆ, ಕಳೆದ ಎರಡು ವರ್ಷಗಳಲ್ಲಿ ಮೊಯಿನ್ ಅಲಿ ಯಾವುದೇ ಪ್ರಥಮ ದರ್ಜೆ ಪಂದ್ಯವನ್ನು ಆಡಿಲ್ಲ ಎಂಬುದು ಅಚ್ಚರಿಯ ಸಂಗತಿ. ಇಂಗ್ಲೆಂಡ್ ಪರ 64 ಟೆಸ್ಟ್ ಪಂದ್ಯಗಳನ್ನಾಡಿರುವ ಮೊಯಿನ್ ಅಲಿ 195 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ಅವರ ಬ್ಯಾಟ್‌ನಿಂದ 2914 ರನ್ ಕೂಡ ಹೊರಬಿದ್ದಿವೆ. ಆಶಸ್ ಸರಣಿಯು ಜೂನ್ 16 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಪಂದ್ಯ ಜೂನ್ 28 ರಿಂದ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಜುಲೈ 6 ರಿಂದ ಲೀಡ್ಸ್‌ನಲ್ಲಿ, ನಾಲ್ಕನೇ ಟೆಸ್ಟ್ ಜುಲೈ 19 ರಿಂದ ಮ್ಯಾಂಚೆಸ್ಟರ್‌ನಲ್ಲಿ ಮತ್ತು ಐದನೇ ಟೆಸ್ಟ್ ಜುಲೈ 27 ರಿಂದ ಓವಲ್‌ನಲ್ಲಿ ನಡೆಯಲಿದೆ.

source https://tv9kannada.com/photo-gallery/cricket-photos/ashes-2023-moeen-ali-reverses-test-retirement-included-in-england-ashes-squad-psr-596154.html

Leave a Reply

Your email address will not be published. Required fields are marked *