
ಏಷ್ಯಾಕಪ್ (Asia Cup 2023) ಆಯೋಜನೆಯ ವಿಚಾರವಾಗಿ ಭಾರತ-ಪಾಕಿಸ್ತಾನ (India-Pakistan) ನಡುವಿನ ಹಗ್ಗಜಗ್ಗಾಟ ಸದ್ಯಕ್ಕೆ ಅಂತಿಮಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಈ ವರ್ಷದ ಏಷ್ಯಾಕಪ್ ಆಯೋಜನೆಯ ಹಕ್ಕು ಪಡೆದುಕೊಂಡಿರುವ ಪಾಕಿಸ್ತಾನ ಹೈಬ್ರಿಡ್ ಮಾದರಿಯನ್ನು (ಟೀಂ ಇಂಡಿಯಾದ ಪಂದ್ಯಗಳು ಸೇರಿದಂತೆ ಕೆಲವು ಪಂದ್ಯಗಳನ್ನು ಯುಎಇಯಂತಹ ತಟಸ್ಥ ಸ್ಥಳದಲ್ಲಿ ನಡೆಸಬೇಕು ಮತ್ತು ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಬೇಕು) ಪ್ರಸ್ತಾಪಿಸುವ ಮೂಲಕ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ತನ್ನಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ, ಬಿಸಿಸಿಐ (BCCI) ಈ ತೀರ್ಮಾನಕ್ಕೂ ಒಪ್ಪಿಗೆ ನೀಡಿರಲಿಲ್ಲ. ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಪಾಕಿಸ್ತಾನವಿಲ್ಲದೆ 2023 ರ ಏಷ್ಯಾಕಪ್‌ಗೆ ಸಜ್ಜಾಗಿದೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಟೂರ್ನಿಯ ಅಧಿಕೃತ ಆತಿಥೇಯ ಪಾಕಿಸ್ತಾನವನ್ನು ಹೊರತುಪಡಿಸಿ ಎಸಿಸಿಯ ಎಲ್ಲಾ ಸದಸ್ಯರು ಕಾಂಟಿನೆಂಟಲ್ ಪಂದ್ಯಾವಳಿಯನ್ನು ಆಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಂದರೆ ಪಾಕಿಸ್ತಾನವನ್ನು ಬಿಟ್ಟು ಬೇರೆ ದೇಶದಲ್ಲಿ ಏಷ್ಯಾಕಪ್ ಆಯೋಜನೆಗೆ ಒಪ್ಪಿಕೊಂಡಿವೆ ಎಂದು ವರದಿಯಾಗಿದೆ. ಆದರೆ ಪಾಕಿಸ್ತಾನ ಮಾತ್ರ ಹೈಬ್ರಿಡ್ ಮಾದರಿಗೆ (Hybrid Model) ಹೆಚ್ಚಿನ ಆದ್ಯತೆ ನೀಡುತ್ತಿದೆ. ಹೀಗಾಗಿ ಪಾಕ್ ತನ್ನ ನಿರ್ಧಾರವನ್ನು ಸಡಿಲಗೊಳಿಸದಿದ್ದರೆ, ಪಾಕ್ ತಂಡವಿಲ್ಲದೆ ಈ ಬಾರಿಯ ಏಷ್ಯಾಕಪ್ ನಡೆಯಲಿದೆ.
ಹವಾಮಾನಕ್ಕೆ ಹೊಂದಿಕೊಳ್ಳುವುದು ಕಷ್ಟ
ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಎಸಿಸಿಯ ಅಧ್ಯಕ್ಷರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಏಷ್ಯನ್ ಕೌನ್ಸಿಲ್‌ನ ಇತರ ಸದಸ್ಯರನ್ನು ಏಷ್ಯಾಕಪ್ ಅನ್ನು ಶ್ರೀಲಂಕಾದಲ್ಲಿ ಆಡಲು ಮನವೊಲಿಸಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. ಇದಕ್ಕೆ ಸೂಕ್ತ ಕಾರಣವನ್ನು ನೀಡಿದ್ದು, ಏಷ್ಯಾಕಪ್ ಆಯೋಜನೆಯ ಸಮಯದಲ್ಲಿ ದುಬೈನಲ್ಲಿ ಅಧಿಕ ಉಷ್ಣಾಂಶವಿರಲಿದೆ. ಹೀಗಾಗಿ ಅಲ್ಲಿನ ಹವಾಮಾನಕ್ಕೆ ಹೊಂದಿಕೊಂಡು ಆಡುವುದು ಕಷ್ಟ. ಹೀಗಾಗಿ ಪಾಕಿಸ್ತಾನ ಪ್ರಸ್ತಾಪಿಸಿರುವ ಹೈಬ್ರಿಡ್ ಮಾದರಿಯನ್ನು ಬಿಸಿಸಿಐ ನಿರಾಕರಿಸಿದೆ ಎಂದು ಹೇಳಿಕೊಂಡಿದೆ.
IPL 2023: ಯುವ ಕ್ರಿಕೆಟಿಗನಿಗೆ ಸ್ಮರಣೀಯ ಉಡುಗೊರೆ ನೀಡಿದ ರವೀಂದ್ರ ಜಡೇಜಾ..!
ಎಲ್ಲಾ ರಾಷ್ಟ್ರಗಳ ಒಮ್ಮತ
ಮೂಲಗಳ ಪ್ರಕಾರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನ ಮುಂಬರುವ ಕಾರ್ಯಕಾರಿ ಮಂಡಳಿ ಸಭೆಯಲ್ಲಿ, ಶ್ರೀಲಂಕಾದಲ್ಲಿ ಏಷ್ಯಾಕಪ್ ಆಡಲು ಇತರ ಎಲ್ಲಾ ಭಾಗವಹಿಸುವ ರಾಷ್ಟ್ರಗಳು ಸರ್ವಾನುಮತದಿಂದ ಒಪ್ಪಿಕೊಂಡಿವೆ ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಗೆ ರವಾನಿಸಲಾಗುತ್ತದೆ ಎಂದು ದಿ ಟೆಲಿಗ್ರಾಫ್ ಬರೆದುಕೊಂಡಿದೆ. ಅಲ್ಲದೆ ಏಷ್ಯಾಕಪ್ ಅನ್ನು ಶ್ರೀಲಂಕಾದಲ್ಲಿ ಆಯೋಜಿಸಲು ಪಾಕ್ ಹೊರತುಪಡಿಸಿ ಉಳಿದ ದೇಶಗಳಿಂದ ಬಹುಮತ ಸಿಕ್ಕಿದ್ದು, ಇದೀಗ ಪಾಕಿಸ್ತಾನಕ್ಕೆ ಎಸಿಸಿ ತೀರ್ಮಾನವನ್ನು ಪುರಸ್ಕರಿಸುವುದು ಅಥವಾ ಅದರ ಆತಿಥ್ಯದಿಂದ ಸಂಪೂರ್ಣವಾಗಿ ಹಿಂದೆ ಸರಿಯುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ.
ವಿಶ್ವಕಪ್ಗೆ ಪಾಕ್ ಗೈರು?
ಒಂದು ವೇಳೆ, ಪಾಕಿಸ್ತಾನ ಕ್ರಿಕೆಟ್ ತಂಡವು ಈ ಈವೆಂಟ್‌ನಲ್ಲಿ ಭಾಗವಹಿಸದಿದ್ದರೆ, ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವು ಏಷ್ಯಾಕಪ್ನಲ್ಲಿ ಆಡಲಿವೆ. ಆದರೆ ಈಗ ಭಾರತ, ಪಾಕಿಸ್ತಾನದ ಹೈಬ್ರಿಡ್ ಮಾದರಿಯನ್ನು ತಿರಸ್ಕರಿಸಿದರೆ, ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ನಿಂದ ಪಾಕಿಸ್ತಾನ ಹಿಂದೆ ಸರಿಯುವ ಸಾಧ್ಯತೆಗಳಿವೆ.
ಪಾಕಿಸ್ತಾನ ಈ ಬಾರಿಯ ವಿಶ್ವಕಪ್ನಲ್ಲಿ ಆಡುವ ಬಗ್ಗೆ ಖಚಿತತೆ ಪಡೆಯಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತು ಸಿಇಒ ಜಿಯೋಫ್ ಅಲ್ಲಾರ್ಡಿಸ್ ಅವರು ಲಾಹೋರ್‌ಗೆ ಬಂದಿದ್ದರು. ಆದರೆ ಈ ಬಗ್ಗೆ ಸಭೆಯಲ್ಲಿ ಏನು ಚರ್ಚಿಸಲಾಗಿದೆ ಎಂಬುದು ಇನ್ನು ಬಹಿರಂಗಗೊಂಡಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ