ಏಷ್ಯಾ ಕಪ್ ಟಿ20 ಕ್ರಿಕೆಟ್ ಇಂದು ಆರಂಭ: ಸೂರ್ಯಕುಮಾರ್ ನೇತೃತ್ವದ ಭಾರತವೇ ಫೇವರಿಟ್


ಅಬುಧಾಬಿ/ದುಬೈ: ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಇಂದು ಮರಳುಗಾಡಿನಲ್ಲಿ ಆರಂಭವಾಗುತ್ತಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಫೇವರಿಟ್ ಎನ್ನುವ ಅಭಿಪ್ರಾಯ ಕ್ರಿಕೆಟ್ ಲೋಕದಲ್ಲಿ ಹೆಚ್ಚಾಗಿದೆ. ಪಾಕಿಸ್ತಾನ ಸೇರಿದಂತೆ ಇತರ ಏಳು ತಂಡಗಳಿಗಿಂತ ಭಾರತವು ಸಮತೋಲನ, ಅನುಭವ ಹಾಗೂ ಪ್ರತಿಭೆಗಳಿಂದ ತುಂಬಿದ ತಂಡವೆಂದು ತಜ್ಞರು ಶ್ಲಾಘಿಸಿದ್ದಾರೆ.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಫ್ಗಾನಿಸ್ತಾನವು ಹಾಂಗ್‌ಕಾಂಗ್ ವಿರುದ್ಧ ಅಬುಧಾಬಿಯಲ್ಲಿ ಮೈದಾನಕ್ಕಿಳಿಯಲಿದೆ. ಆದರೆ ಎಲ್ಲಾ ಕಣ್ಣುಗಳು ದುಬೈ ಕಡೆ ನೆಟ್ಟಿವೆ, ಅಲ್ಲಿ ಬುಧವಾರ ಭಾರತ ತಂಡವು ಆತಿಥೇಯ ಯುಎಇ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದ್ದು, ದೊಡ್ಡ ಗೆಲುವಿನ ಗುರಿಯಲ್ಲಿದೆ.

ಈಗಾಗಲೇ ಭಾರತವು ಎಂಟು ಬಾರಿ ಏಷ್ಯಾ ಕಪ್ ಜಯಿಸಿದೆ. ಈ ಬಾರಿ ಟ್ರೋಫಿ ಗೆದ್ದರೂ ಅದನ್ನು ಸೂರ್ಯಕುಮಾರ್ ಅಥವಾ ಕೋಚ್ ಗೌತಮ್ ಗಂಭೀರ್ ಅವರ ವೈಯಕ್ತಿಕ ಯಶಸ್ಸು ಎಂದು ಮಾತ್ರ ಪರಿಗಣಿಸಲಾಗುವುದಿಲ್ಲ. ಬದಲಿಗೆ, 2026ರ ಟಿ20 ವಿಶ್ವಕಪ್‌ಗೆ ತಯಾರಿ ನಡೆಸುವ ದೃಷ್ಟಿಯಿಂದ ಭಾರತಕ್ಕೆ ಇದು ಮಹತ್ವದ್ದಾಗಿದೆ. ಫೈನಲ್ ವರೆಗೆ ತಲುಪಿದಲ್ಲಿ ತಂಡವು ವಿಶ್ವಕಪ್‌ಗೂ ಮುನ್ನ ಸುಮಾರು 20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ತೊಡಗಲಿದೆ.

ಭಾರತದ ನಾಯಕ ಸೂರ್ಯಕುಮಾರ್‌ 80 ಶೇಕಡಾ ಜಯಗಳಿಸಿದ ದಾಖಲೆ ಹೊಂದಿದ್ದಾರೆ. ಉಪನಾಯಕ ಶುಭಮನ್ ಗಿಲ್ ಭವಿಷ್ಯದಲ್ಲಿ ನಾಯಕತ್ವದ ಹೊಣೆ ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕ್ರಿಕೆಟ್ ವಲಯ ನಂಬಿದೆ.

ಸವಾಲು ಎವರು?
ಪಾಕಿಸ್ತಾನ ತಂಡವು ಬಾಬರ್ ಆಜಂ ಮತ್ತು ರಿಜ್ವಾನ್ ಅವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಿದೆ. ಶಹೀನ್ ಅಫ್ರೀದಿ, ಹ್ಯಾರಿಸ್ ರವೂಫ್, ಹಸನ್ ಅಲಿ ಅವರ ಬೌಲಿಂಗ್ ಪಾಕ್‌ಗೆ ಶಕ್ತಿ ನೀಡಲಿದೆ. ಇತ್ತೀಚೆಗೆ ಅಫ್ಗಾನಿಸ್ತಾನವನ್ನು ಸೋಲಿಸಿರುವುದರಿಂದ ಪಾಕ್ ಉತ್ಸಾಹದಲ್ಲಿ ಇದೆ.

ಶ್ರೀಲಂಕಾ ಪರಿವರ್ತನೆಯ ಹಂತದಲ್ಲಿದ್ದು, ಅನುಭವಿಗಳ ಕೊರತೆಯಿದ್ದರೂ ಚರಿತ್ ಅಸಲಂಕಾ ನೇತೃತ್ವದಲ್ಲಿ ಹೋರಾಡಬಲ್ಲ ತಂಡವಾಗಿದೆ. ಬಾಂಗ್ಲಾದೇಶ ಅನುಭವಿಗಳನ್ನು ಕಳೆದುಕೊಂಡಿದ್ದರಿಂದ ಸ್ಥಿರತೆ ತೋರಲಾರದು ಎನ್ನಲಾಗಿದೆ.

ಅಫ್ಗಾನಿಸ್ತಾನದ ರಶೀದ್ ಖಾನ್, ನೂರ್ ಅಹ್ಮದ್, ಘಜನ್‌ಫರ್ ಅವರ ಸ್ಪಿನ್ ದಾಳಿ ಎದುರಾಳಿಗಳಿಗೆ ಕಠಿಣ ಸವಾಲಾಗಬಲ್ಲದು. ಅವರ ಬ್ಯಾಟಿಂಗ್ ವಿಭಾಗವೂ ಬಲವಾಗಿದೆ.

ಆತಿಥೇಯ ಯುಎಇ, ಹಾಂಗ್‌ಕಾಂಗ್ ಮತ್ತು ಒಮಾನ್ ತಂಡಗಳಿಗೆ ಈ ಟೂರ್ನಿಯಲ್ಲಿ ಅನುಭವ ಸಂಪಾದಿಸುವ ಅವಕಾಶ ದೊರೆಯಲಿದೆ.

ಒಟ್ಟಾರೆ, ಮರಳುಗಾಡಿನ ಕ್ರಿಕೆಟ್ ಹಬ್ಬದಲ್ಲಿ ಭಾರತವೇ ಮುಖ್ಯ ಆಕರ್ಷಣೆ. ಸೂರ್ಯಕುಮಾರ್‌ ಪಡೆ ತಮ್ಮ ನೆಚ್ಚಿನ ತಂಡದ ಹೆಗ್ಗಳಿಕೆಗೆ ತಕ್ಕಂತೆ ಪ್ರದರ್ಶನ ನೀಡುತ್ತದೆಯೇ ಎಂಬುದನ್ನು ನೋಡಬೇಕಿದೆ.

Views: 14

Leave a Reply

Your email address will not be published. Required fields are marked *