ತಮಿಳುನಾಡಿನ ದಿಂಡಿಗಲ್‌ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ: ಕನಿಷ್ಠ 7 ಮಂದಿ ಸಾವು.

ಚೆನ್ನೈ, ಡಿಸೆಂಬರ್ 13: ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಪ್ರಮುಖ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 6 ಮಂದಿ ರೋಗಿಗಳು ಮೃತಪಟ್ಟಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ಗುರುವಾರ ರಾತ್ರಿ ಘಟನೆ ಸಂಭವಿಸಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ ಮೃತರಲ್ಲಿ ಒಂದು ಮಗು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ನೆಲ ಮಹಡಿಯಲ್ಲಿನ ರಿಸೆಪ್ಷನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಕ್ಷಣಮಾತ್ರದಲ್ಲಿ ಅದು ಇಡೀ ಆಸ್ಪತ್ರೆಯನ್ನು ವ್ಯಾಪಿಸಿದೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದೆಂದು ಶಂಕಿಸಲಾಗಿದೆ.

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಕಾರ, ಅಗ್ನಿ ಅವಘಡದಿಂದಾಗಿ ಆಸ್ಪತ್ರೆಯಲ್ಲಿ ಆವರಿಸಿದ ದಟ್ಟವಾದ ಹೊಗೆಯಿಂದ ಹಲವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ರಿಸೆಪ್ಷನ್​ ಹಾಲ್​ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.

ಸರಿಸುಮಾರು 50 ಆಂಬ್ಯುಲೆನ್ಸ್‌ಗಳನ್ನು ಬಳಸಿಕೊಂಡು ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ, ಸಮೀಪದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಕನಿಷ್ಠ 30 ರೋಗಿಗಳನ್ನು ಚಿಕಿತ್ಸೆಗಾಗಿ ದಿಂಡುಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ದಳದ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟರು. ಕೊನೆಗೂ ಬೆಂಕಿ ನಂದಿಸುವಲ್ಲಿ ಅವರು ಯಶಸ್ವಿಯಾಗಿದ್ದು, ಆಸ್ಪತ್ರೆಯ ಒಳಗೆ ಸಿಲುಕಿರುವವರನ್ನು ಪತ್ತೆಹಚ್ಚಿ ರಕ್ಷಿಸುವ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ಮೂವರ ಸ್ಥಿತಿ ಗಂಭೀರ: ಸಾವಿನ ಸಂಖ್ಯೆ ಹೆಚ್ಚಳ ಭೀತಿ

ದುರಂತದಲ್ಲಿ ಮೃತಪಟ್ಟವರನ್ನು ಸುರುಳಿ (50 ವರ್ಷ), ಸುಬ್ಬುಲಕ್ಷ್ಮೀ (45 ವರ್ಷ), ಮರಿಯಮ್ಮಾಳ್ (50 ವರ್ಷ), ಮಣಿಮುರುಗನ್ (28 ವರ್ಷ), ರಾಜಶೇಖರ್ (35 ವರ್ಷ) ಎಂದು ಗುರುತಿಸಲಾಗಿದೆ. ಇವರು ಮಾತ್ರವಲ್ಲದೆ ಒಂದು ಹೆಣ್ಣು ಮಗು ಕೂಡ ಮೃತಪಟ್ಟಿದೆ. ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿ ಇಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

Source : https://tv9kannada.com/national/tamil-nadu-fire-tragedy-many-died-after-massive-fire-erupts-at-private-hospital-in-dindigul-gsp-949174.html

Leave a Reply

Your email address will not be published. Required fields are marked *