ಅಡಿಲೇಡ್: ಭಾರತ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವ ಒತ್ತಡದಲ್ಲಿರುವ ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಎದುರಿನ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಕೊನೆಗೂ ಲಯ ಕಂಡುಕೊಂಡರು. ಆದರೆ ಅವರ ಆಟದ ಬಲದಿಂದ ಜಯಸಾಧಿಸುವಲ್ಲಿ ತಂಡವು ಸಫಲವಾಗಲಿಲ್ಲ.
ಗುರುವಾರ ಇಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 2 ವಿಕೆಟ್‌ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯನ್ನು 2-0ಯಿಂದ ಕೈವಶ ಮಾಡಿಕೊಂಡಿತು. ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ನಾಯಕ ಶುಭಮನ್ ಗಿಲ್ (9 ರನ್) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು.
ವಿರಾಟ್ ಕೊಹ್ಲಿ ಸತತ ಎರಡನೇ ಪಂದ್ಯದಲ್ಲಿಯೂ ಖಾತೆ ತೆರೆಯಲಿಲ್ಲ. ಮೊದಲ ಪಂದ್ಯದಲ್ಲಿ ಆಫ್‌ಸ್ಟಂಪ್ ಹೊರಗಿನ ಎಸೆತ ಕೆಣಕಿ ದಂಡ ಕಟ್ಟಿದ್ದರು. ಈ ಪಂದ್ಯದಲ್ಲಿ ಝೇವಿಯರ್ ಬಾರ್ಟಲೆಟ್ ಬೀಸಿದ ಎಲ್‌ಬಿಡಬ್ಲ್ಯು ಬಲೆಯಲ್ಲಿ ಬಿದ್ದರು. 17 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ತಂಡ ಆತಂಕಕ್ಕೀಡಾಯಿತು.
ಆದರೆ ಇನ್ನೊಂದು ಬದಿಯಲ್ಲಿದ್ದ ಆರಂಭಿಕ ಬ್ಯಾಟರ್ ರೋಹಿತ್ 97 ಎಸೆತಗಳಲ್ಲಿ ಗಳಿಸಿದ 73 ರನ್‌ಗಳ ನೆರವಿನಿಂದ ತಂಡವು ಚೇತರಿಸಿಕೊಂಡಿತು. ತಮ್ಮ ಎಂದಿನ ಬೀಸಾಟಕ್ಕೆ ಕಡಿವಾಣ ಹಾಕಿದ ರೋಹಿತ್ ಏಕಾಗ್ರತೆ ಮತ್ತು ತಾಳ್ಮೆಯುತ ಬ್ಯಾಟಿಂಗ್ ಮಾಡಿದರು. ಏಳು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿದರು.
ಅವರಿಗೆ ಶ್ರೇಯಸ್ ಅಯ್ಯರ್ (61; 77ಎಸೆತ) ಬೆಂಬಲವಾಗಿ ನಿಂತರು. ಇವರು ಮೂರನೇ ವಿಕೆಟ್ ಜೊತೆಯಾಟದಲ್ಲಿ ಗಳಿಸಿದ 118 ರನ್ ಗಳ ಬಲದಿಂದ ತಂಡವು 9 ವಿಕೆಟ್‌ಗಳಿಗೆ 264 ರನ್ ಗಳಿಸಿತು. ಅಕ್ಷರ್ ಪಟೇಲ್ (44; 41ಎ), ಹರ್ಷಿತ್ ರಾಣಾ (24; 18ಎ) ಮತ್ತು ಅರ್ಷದೀಪ್ ಸಿಂಗ್ (13; 14ಎ) ಅವರೂ ಮಹತ್ವದ ಕಾಣಿಕೆ ನೀಡಿದರು. ಆದರೆ ಆಯಡಂ ಜಂಪಾ (60ಕ್ಕೆ4) ಅವರ ಉತ್ತಮ ದಾಳಿಯ ಮುಂದೆ ಭಾರತ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.
ಗುರಿ ಬೆನ್ನಟ್ಟಿದ ಆತಿಥೇಯರು ಭಾರತದ ಸ್ಪಿನ್ನರ್‌ಗಳ ಮುಂದೆ ಪರದಾಡಿದರು. ಅದರೆ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಗೈರು ಎದ್ದುಕಂಡಿತು.
ಆತಿಥೇಯ ಬಳದ ಮ್ಯಾಥ್ಯೂ ಶಾರ್ಟ್ (74; 78ಎ, 4X4, 6X2) ಬಿಟ್ಟರೆ ಉಳಿದ ಅಗ್ರಕ್ರಮಾಂಕದ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಆಡಲಿಲ್ಲ.
ಇದರಿಂದಾಗಿ ಆಸ್ಟ್ರೇಲಿಯಾ 132 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಎಡಗೈ ವೇಗಿ ಅರ್ಷದೀಪ್ ಸಿಂಗ್ ಮತ್ತು ರಾಣಾ ಪರಿಣಾಮಕಾರಿ ದಾಳಿ ಮಾಡಿದರು. ಆದರೆ ಈ ಹಂತದಿಂದ ಬಿಗಿಹಿಡಿತ ಸಾಧಿಸಿ ಗೆಲುವಿನತ್ತ ಸಾಗುವಲ್ಲಿ ನಾಯಕ ಶುಭಮನ್ ಗಿಲ್ ತಂತ್ರಗಳು ಫಲಿಸಲಿಲ್ಲ.
ಮಧ್ಯಮ ಕ್ರಮಾಂಕದ ಬ್ಯಾಟರ್, 22 ವರ್ಷದ ಕೂಪರ್ ಕೊನೊಲಿ (ಅಜೇಯ 61; 53ಎ, 4X5, 6X1) ಮತ್ತು ಮಿಚೆಲ್ ಒವೆನ್ (36; 23ಎ) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. 46.2 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿದ ಆಸ್ಟ್ರೇಲಿಯಾ ಸರಣಿಯನ್ನು ತನ್ನದಾಗಿಸಿಕೊಂಡಿತು. ಕೊನೆಯ ಪಂದ್ಯವು ಸಿಡ್ನಿಯಲ್ಲಿ ಶನಿವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರು:
ಭಾರತ: 50 ಓವರ್‌ಗಳಲ್ಲಿ 9ಕ್ಕೆ264 (ರೋಹಿತ್ ಶರ್ಮಾ 73, ಶ್ರೇಯಸ್ ಅಯ್ಯರ್ 61, ಅಕ್ಷರ್ ಪಟೇಲ್ 44, ಹರ್ಷಿತ್ ರಾಣಾ ಔಟಾಗದೆ 24, ಅರ್ಷದೀಪ್ ಸಿಂಗ್ 13, ಮಿಚೆಲ್ ಸ್ಟಾರ್ಕ್ 62ಕ್ಕೆ2, ಝೇವಿಯರ್ ಬಾರ್ಟಲೆಟ್ 39ಕ್ಕೆ3, ಆಯಡಂ ಜಂಪಾ 60ಕ್ಕೆ4)
ಆಸ್ಟ್ರೇಲಿಯಾ: 46.2 ಓವರ್‌ಗಳಲ್ಲಿ 8ಕ್ಕೆ265 (ಟ್ರಾವಿಸ್ ಹೆಡ್ 28, ಮ್ಯಾಥ್ಯೂ ಶಾರ್ಟ್ 74, ಮ್ಯಾಟ್ ರೆನ್ಷಾ 30, ಕೂಪರ್ ಕೊನೊಲಿ ಔಟಾಗದೇ 61, ಮಿಚೆಲ್ ಒವೆನ್ 36, ಅರ್ಷದೀಪ್ ಸಿಂಗ್ 41ಕ್ಕೆ2, ಹರ್ಷಿತ್ ರಾಣಾ 59ಕ್ಕೆ2, ವಾಷಿಂಗ್ಟನ್ ಸುಂದರ್ 37ಕ್ಕೆ2) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 2 ವಿಕೆಟ್‌ಗಳ ಜಯ ಮತ್ತು ಸರಣಿಯಲ್ಲಿ 2-0 ಮುನ್ನಡೆ. ಪಂದ್ಯಶ್ರೇಷ್ಠ: ಆಯಡಂ ಜಂಪಾ.
Views: 2