
ಚಿತ್ರದುರ್ಗ/ ಜೆ.ಎನ್.ಕೋಟೆ: ಮಾ.28 : ಭಾರತ ಸರ್ಕಾರದ ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯಡಿಯಲ್ಲಿ, ಕರ್ನಾಟಕದ ಆಯುಷ್ ಇಲಾಖೆಯಿಂದ ಆಯ್ಕೆಯಾದ ಹಳ್ಳಿಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಜಂಪಣ್ಣನಾಯಕನಕೋಟೆ (ಜೆ ಎನ್ ಕೋಟೆ)ಯೂ ಒಂದಾಗಿದ್ದು. ಆಯುಷ್ ಔಷಧ ಪದ್ಧತಿಗಳ ಮೂಲಕ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಜೆ ಎನ್ ಕೋಟೆ ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರದ ಆಡಳಿತ ವೈದ್ಯಾಧಿಕಾರಿ ಡಾ|| ವಿಜಯಲಕ್ಷ್ಮಿ ಪಿ. ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತಿ, ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಸಹಯೋಗದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಜೆ ಎನ್ ಕೋಟೆ ವತಿಯಿಂದ ಆಯುಷ್ ಗ್ರಾಮ ಯೋಜನೆಯಡಿಯಲ್ಲಿ ಶುಕ್ರವಾರ ಚಿತ್ರದುರ್ಗ ತಾಲ್ಲೂಕು ಜಂಪಣ್ಣನಾಯಕನ ಕೋಟೆ(ಜೆ ಎನ್ ಕೋಟೆ) ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯುಷ್ ಆರೋಗ್ಯ ಅರಿವು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಾ ಕೀಲು ನೋವು, ಸಂಧಿವಾತ, ನರಗಳ ಸಮಸ್ಯೆಗಳು ಮತ್ತು ಸ್ನಾಯುಗಳ ಸೆಳೆತ ಮುಂತಾದ ವಾತ ಸಂಬಂಧಿ ಕಾಯಿಲೆಗಳಿಗೆ ಆಯುರ್ವೇದವು ಪರಿಣಾಮಕಾರಿಯಾಗಿದ್ದು ವಾತ ಸಂಬಂಧಿಸಿದ ರೋಗಗಳಿಂದ ಬಳತ್ತಿರುವವರಿಗಾಗಿಯೇ ಇಂದಿನ ಆಯುಷ್ಮಾನ್ ಆಯುಷ್ ಗ್ರಾಮದ ವಿಶೇಷ ಶಿಬಿರ ಏರ್ಪಡಿಸಿದ್ದು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೊಂಡೆಕೊಳ ಆಯುಷ್ ಆರೋಗ್ಯ ಮಂದಿರದ ಆಡಳಿತ ವೈದ್ಯಾಧಿಕಾರಿ ಡಾ|| ನಾಗರಾಜ್ ನಾಯಕ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್) ಚಿಕಿತ್ಸಾ ಪದ್ಧತಿಗಳ ಜಾಗೃತಿ ಮೂಡಿಸುವ ಮತ್ತು ಅವುಗಳನ್ನು ಜನರಿಗೆ ತಲುಪಿಸುವ ಗುರಿಯನ್ನು ಹೊಂದಿರುವ ಆಯುಷ್ ಗ್ರಾಮ ಯೋಜನೆಯು ಗ್ರಾಮೀಣ ಜನರಿಗೆ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಗ್ರಾಮೀಣ ಭಾಗದ ಜನರು ಸಣ್ಣಪುಟ್ಟ ಕಾಯಿಲೆಗಳಿಗೆ ದೂರದ ಪಟ್ಟಣಗಳಿಗೆ ಹೋಗುವುದನ್ನು ತಪ್ಪಿಸಲು ಆಯುಷ್ ಗ್ರಾಮ ಆರೋಗ್ಯ ಶಿಬಿರಗಳನ್ನು ಆಯುಷ್ಬಿಲಾಖೆಯಿಂದ ಏರ್ಪಸಲಾಗುತ್ತಿದ್ದು ಇದಕ್ಕೆ ಗ್ರಾಮೀಣ ಜನರ ಸಹಕಾರ ಅವಶ್ಯಕ. ಎಂದು ಹೇಳಿದರು.

ಇಂದಿನ ಆಯುಷ್ ಗ್ರಾಮ ಆರೋಗ್ಯ ಶಿಬಿರದಲ್ಲಿ 50ಕ್ಕೂ ಹೆಚ್ಚು ಫಲಾನುಭವಿಗಳಿಗೆ ಆರೋಗ್ಯ ಪರೀಕ್ಷೆ ಮಾಡಿ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಯೋಗ ಚಿಕಿತ್ಸಕ ರವಿಕೆ.ಅಂಬೇಕರ್, ಜೆ ಎನ್ ಕೋಟೆ ಉಪ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ರಮೇಶ್, ಅಂಗನವಾಡಿ ಶಿಕ್ಷಕಿ ಭಾಗ್ಯಮ್ಮ ಸಹಾಯಕ ಕಾರ್ಯಕರ್ತೆ ಮಂಗಳಮ್ಮ, ಆಯುಷ್ ಸಿಬ್ಬಂದಿ ಮಂಜಮ್ಮ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.