ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಜನಸಂಖ್ಯಾ ಸ್ಪೋಟ ದೇಶ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ. ಹೇಳಿದರು. ಚಿತ್ರದುರ್ಗ ನಗರದ ರೋಟರಿ ಕ್ಲಬ್ ಸಂಸ್ಥೆಯವರು ಬುಧವಾರದಂದು ಆಯೋಜಿಸಿದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ: ವಿಶ್ವದ ಜನಸಂಖ್ಯೆ 500 ಕೋಟಿ ತಲುಪಿದ ದಿನವನ್ನು ಪ್ರತಿವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸುತ್ತಾ ಸಾರ್ವಜನಿಕರಿಗೆ ಜನಸಂಖ್ಯಾ ಸ್ಪೋಟದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ದೇಶದಲ್ಲಿ ಪ್ರತಿ ನಿಮಿಷಕ್ಕೆ 46 ಮಕ್ಕಳ ಜನನವಾಗುತ್ತಿದ್ದು ಭೂಮಿಯ ಗಾತ್ರ ಇದ್ದಷ್ಟೇ ಇದೆ ಆದರೆ ಜನಸಂಖ್ಯಾ ಹೆಚ್ಚಳದಿಂದ ತುಂಡುಭೂಮಿಗಳಾಗಿ ಹೊಲವೆಲ್ಲ ಬದುವಾಗಿ, ಬೆಳೆಗಳು ಕುಂಟಿತವಾಗಿ, ಬೆಲೆ ಏರಿಕೆ ಹೆಚ್ಚಾಗಿ, ಕೊಳ್ಳುವವರ ಸಂಖ್ಯೆ ಕಡಿಮೆಯಾಗಿ ಆರೋಗ್ಯ ಹದಗೆಡುತ್ತವೆ, ಹಳ್ಳಿಯಿಂದ ಜನರೆಲ್ಲ ಪಟ್ಟಣಕ್ಕೆ ಸೇರಿ ಪಟ್ಟಣವೆಲ್ಲ ಕಲ್ಮಶವಾಗಿ ಆರೋಗ್ಯ ಹದಗೆಡುತ್ತಿವೆ.
ಜನಸಂಖ್ಯಾ ಸ್ಫೋಟದಿಂದ ಬಡತನ, ನಿರುದ್ಯೋಗ ಸಮಸ್ಯೆ, ಶಿಕ್ಷಣದ ಕೊರತೆ, ಒತ್ತಡದ ಜೀವನ,ಸಾಂಕ್ರಾಮಿಕ ರೋಗಗಳ ಹೆಚ್ಚಳ, ಸಂಪನ್ಮೂಲಗಳ ಕೊರತೆ, ಅರಣ್ಯ ನಾಶ, ವಾಯು, ಜಲ,ಶಬ್ದ ಮಾಲಿನ್ಯವಾಗಿ ಪರಿಸರ ವಿಷಪೂರಿತವಾಗುತ್ತಿದೆ. ಅದಕ್ಕಾಗಿ ಸಾರ್ವಜನಿಕರು ಚಿಕ್ಕ ಕುಟುಂಬದ ಆದರ್ಶ ಪಾಲಿಸಿ “ಮನೆಗೊಂದು ಮಗುವಿರಲಿ ಮನೆ ತುಂಬಾ ನಗುವಿರಲಿ” ಎಂಬಂತೆ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಕುಟುಂಬ ಕಲ್ಯಾಣ ಆಧುನಿಕ ತಾತ್ಕಾಲಿಕ ವಿಧಾನಗಳು ಮತ್ತು ಶಾಶ್ವತ ವಿಧಾನಗಳು ಲಭ್ಯವಿದ್ದು ಪ್ರತಿ ದಂಪತಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಜನಸಂಖ್ಯಾ ನಿಯಂತ್ರಣಕ್ಕೆ ಕೈಜೋಡಿಸಿ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕೆಂದರು.
ಲಾಹೋತ್ಸೇ ತತ್ವಜ್ಞಾನಿ ಹೇಳಿರುವ ಪ್ರಕಾರ ಭೂಮಿ ಸ್ವರ್ಗವಾಗಬೇಕಾದರೆ ಭೂಮಿ ವಿಶಾಲವಾಗಿರಬೇಕು, ಜನಸಂಖ್ಯೆ ಕಡಿಮೆ ಇರಬೇಕು, ಪ್ರತಿ ಕುಟುಂಬದಲ್ಲಿ ಆರೋಗ್ಯ ಸಮೃದ್ಧಿ, ಸಂತಸ, ನೆಮ್ಮದಿಯಿಂದ ಕೂಡಿದ್ದರೆ ಸುಖೀ ಜೀವನ ನಡೆಸಬಹುದು ಹೆಚ್ಚಿನ ಮಾಹಿತಿಗಾಗಿ ಉಚಿತ ದೂರವಾಣಿ ಕರೆ 104 ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದರು.
ಮಳೆಗಾಲವಾದ್ದರಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಪ್ರಯುಕ್ತ ಮನೆಯಲ್ಲಿನ ನೀರಿನ ತಾಣಗಳ ಸ್ವಚ್ಛತೆ ಮನೆಯ ಹೊರಗಡೆ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ, ತುಂಬು ತೋಳಿನ ಬಟ್ಟೆಗಳ ಧರಿಸುವುದು, ಮಲಗುವಾಗ ಸೊಳ್ಳೆ ಪರದೆ ಬಳಕೆ ಮಾಡಿ ಸೊಳ್ಳೆ ಕಚ್ಚಿಸಿಕೊಳ್ಳದಂತೆ ನಿಗಾ ವಹಿಸಿ ಡೆಂಗ್ಯೂ ಜ್ವರಕ್ಕೆ ಕಡಿವಾಣ ಹಾಕಬೇಕೆಂದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಜಿ.ಎನ್. ವೀರಣ್ಣ. ಉಪಾಧ್ಯಕ್ಷರಾದ ಜಿ.ಎಸ್.ಶಿವಣ್ಣ,ಮಾಜಿ ಅಧ್ಯಕ್ಷರಾದ ಕನಕರಾಜು,ಡಾ.ತಿಪ್ಪೇಸ್ವಾಮಿ, ವಿಶ್ವನಾಥ, ಬಾಬು,ಮೂರ್ತಿ,ಲಕ್ಷ್ಮಣ್ಜ,ಜಯಶ್ರೀ, ಷಾ ಸೇರಿದಂತೆ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.