ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಮೀಸಲು ಹಣವನ್ನು ಆ ಜನಾಂಗದ ಪ್ರಗತಿಗೆ ಬಳಸದಿರುವ ಸರ್ಕಾರಗಳ, ವಿರುದ್ಧ ಬಹುಜನ ಸಮಾಜ ಪಾರ್ಟಿಯಿಂದ  ಜು. 26 ರಂದು ಧರಣಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 23 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಾಂಗಕ್ಕೆ ಲಕ್ಷಾಂತರ ಕೋಟಿ ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಮೀಸಲು ಹಣವನ್ನು ಆ ಜನಾಂಗದ ಪ್ರಗತಿಗೆ ಬಳಸದಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮಹಾನ್ ದ್ರೋಹವನ್ನು ಖಂಡಿಸಿ ಬಹುಜನ ಸಮಾಜ ಪಾರ್ಟಿ ಜು. 26 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿಯನ್ನು ನಡೆಸಲಿದೆ ಎಂದು ಬಹುಜನ ಸಮಾಜ ಪಾರ್ಟಿ- ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್.ಪ್ರಕಾಶ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಧರಣಿಯ ಅಂಗವಾಗಿ ಮಂಗಳವಾರ ನಡೆದ ಪೂರ್ವ ಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್ಸಿ/ಎಸ್ಟಿ ಸಮುದಾಯಗಳ ಅಭಿವೃದ್ಧಿಗೆಂದು ಜಾರಿಗೆ ತಂದ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆ ಅನ್ವಯ  2023-24 ಮತ್ತು 2024-25ನೇ ಸಾಲಿನ 2 ವರ್ಷಗಳಲ್ಲಿ ರೂ. 25 ಸಾವಿರದ 39 ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ನೇರವಾಗಿ ಎಸ್ ಸಿ /ಎಸ್ಟಿಗಳ ಕುತ್ತಿಗೆ ಕುಯ್ಯುವ ಕೆಲಸ ಮಾಡಿದೆ. 2014ರಿಂದ ಇದುವರೆಗೆ ಕಾಂಗ್ರೆಸ್,ಬಿಜೆಪಿ ಮತ್ತು ಜೆಡಿಎಸ್ ನ ಈ ಮೂರು ಸರ್ಕಾರಗಳು ಒಟ್ಟು ಸುಮಾರು 70ಸಾವಿರ ಕೋಟಿ ರೂಪಾಯಿಗಳ ದುರ್ಬಳಕೆ ಮಾಡಿಕೊಂಡು ಮಹಾನ್ ದ್ರೋಹ ಬಗೆದಿವೆ.  ಎಸ್.ಸಿ. /ಎಸ್ಟಿ ಮೀಸಲು ಹಣವನ್ನು ದುರ್ಬಳಕೆ ಮಾಡಲು ನಾಂದಿ ಹಾಡಿದ್ದು ಇದೇ ಕಾಂಗ್ರೆಸ್ ಸರ್ಕಾರ. ಮುಂದೆ ಬಂದ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳೂ ಕೂಡ ಇದೇ ದಾರಿಯನ್ನು ಹಿಡಿದು ಎಸ್ ಸಿ /ಎಸ್ಟಿ ಮೀಸಲು ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಹಿಂಜರಿಯಲಿಲ್ಲ ಎಂದು ದೂರಿದರು.

ಎಸ್ ಸಿ ಎಸ್ ಪಿ /ಟಿ ಎಸ್ ಪಿ ಕಾನೂನು ಜಾರಿಯಾದಾಗಿನಿಂದ ಇದುವರೆಗೆ ಹತ್ತು ವರ್ಷಗಳಲ್ಲಿ 2ಲಕ್ಷದ 56 ಸಾವಿರ ಕೋಟಿಗಳನ್ನು ಈ ಯೋಜನೆಗೆ ಮೀಸಲಿರಿಸಲಾಗಿದೆ. ಇಷ್ಟು ಹಣದಿಂದ ಕರ್ನಾಟಕದ ಎಸ್ಸಿ /ಎಸ್ಟಿ  ಜನಾಂಗದ ಅಭಿವೃದ್ಧಿಗೆ ಮಾಡಬಹುದಾಗಿತ್ತು ಆದರೆ ಈ ಮೂರೂ ಪಕ್ಷದ ಸರ್ಕಾರಗಳು ಈ ಯೋಜನೆಯ ಶೇ. 10% ರಷ್ಟನ್ನೂ ಕೂಡ ಎಸ್ಸಿ/ಎಸ್ಟಿಗಳಿಗೆ ನೇರವಾಗಿ ತಲುಪಿಸದೆ ಮಹಾ ದ್ರೋಹ ಮಾಡಿವೆ. ಬದಲಾಗಿ ಅಧಿಕಾರಿಗಳು ಮತ್ತು ಮಂತ್ರಿ, ಶಾಸಕರು ನುಂಗಿ ನೀರು ಕುಡಿಯುವುದರಲ್ಲಿ 2014 ರಿಂದ 2024 ರವರೆಗೆ ರಾಜ್ಯವನ್ನಾಳಿದ ಕಾಂಗ್ರೆಸ್,ಬಿಜೆಪಿ ಜೆಡಿಎಸ್ ಮೂರೂ ಎಸ್ ಸಿ /ಎಸ್ಟಿ ವಿರೋಧಿ ಪಕ್ಷಗಳು ಇದಕ್ಕೆ ಹೊರತಲ್ಲ. ಕಳೆದ ಸಾರಿ ಬಿಜೆಪಿ ಸರ್ಕಾರವೂ ಸಹ ಎಸ್ ಸಿ ಎಸ್ ಪಿ /ಟಿ ಎಸ್ ಪಿ ಹಣದಲ್ಲಿ 19,000 ಕೋಟಿಯನ್ನು ಅನ್ಯಕಾರ್ಯಗಳಿಗೆ  ದುರ್ಬಳಕೆ ಮಾಡಿತ್ತು ಎಂದು ಆರೋಪಿಸಿದರು.

ಆರಂಭದಿಂದ ಇಲ್ಲಿಯವರೆಗೂ 7ಡಿ ಕಲಂ ನೆಪದಲ್ಲಿ ಎಸ್ ಸಿ /ಎಸ್ಟಿಗಳ ಕೋಟ್ಯಂತರ ರೂಪಾಯಿಗಳನ್ನು ಲಪಟಾಯಿಸಿದ್ದಾರೆ. ಜೊತೆಗೆ ಈ  ಸರ್ಕಾರಗಳು ಎಸ್.ಸಿ/ಎಸ್ಟಿಗಳ ಎಲ್ಲಾ ನಿಗಮಗಳಲ್ಲೂ ನಿರಂತರವಾಗಿ ಲೂಟಿಮಾಡಿವೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬಿಜೆಪಿ ಆಡಳಿತದಲ್ಲಿ ಭೋವಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಅಲ್ಲದೆ ಅನೇಕ ಇಲಾಖೆಗಳಲ್ಲಿ ನಡೆದಿರುವ ಹಗರಣಗಳನ್ನು ಬಿಚ್ಚಿಟ್ಟಿದ್ದಾರೆ. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 189 ಕೋಟಿಗಳ ಹಗರಣವೂ ಇದಕ್ಕೇ ಸಾಕ್ಷಿಯಾಗಿದೆ.2023ರ ವಿಧಾನಸಭೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತದೆ ಮತ್ತು ಮೀಸಲಾತಿಯನ್ನು ರದ್ದು ಮಾಡುತ್ತದೆ. ಎಂದು ಭಾವನಾತ್ಮಕವಾಗಿ ಎಸ್ಸಿ/ಎಸ್ಟಿ/ಓಬಿಸಿ/ಧಾರ್ಮಿಕ ಅಲ್ಪಸಂಖ್ಯಾತರನ್ನು ಮರಳುಮಾಡಿ ಈ ವರ್ಗಗಳ ಶೇ. 90 ರಷ್ಟು ವೋಟುಗಳನ್ನು ಕಸಿದುಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಎಸ್ ಸಿ/ಎಸ್ ಟಿಗಳನ್ನು ಮುಖ್ಯಮಂತ್ರಿ ಮಾಡುವುದಿರಲಿ, ಒಬ್ಬ ಉಪಮುಖ್ಯಮಂತ್ರಿಯನ್ನೂ ಮಾಡಲಿಲ್ಲ. ಸಂವಿಧಾನ ಉಳಿಸುತ್ತೇವೆಂದ ಕಾಂಗ್ರೇಸ್ ಸರ್ಕಾರ ನಮಗೆ ಸಂವಿಧಾನಾತ್ಮಕವಾಗಿ ನೀಡಿರುವ ಎಲ್ಲಾ ಹಕ್ಕುಗಳನ್ನು ಮತ್ತು ಯೋಜನೆಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರದ್ದುಮಾಡುತ್ತಿದೆ ಎಂದು ದೂರಿದರು.

ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ಮೆರಿಟ್ ವಿದ್ಯಾರ್ಥಿವೇತನ ಪ್ರೋತ್ಸಾಹ ಧನ ರದ್ದುಪಡಿಸಿದೆ.  ವಿದೇಶದಲ್ಲಿ ಓದಲು ರೂಪಿಸಿದ್ದ ಪ್ರಬುದ್ದ ಯೋಜನೆಯಲ್ಲಿ ಪಿಎಚ್ ಡಿ ಪ್ರವೇಶ ನಿಲ್ಲಿಸಲಾಗಿದೆ.  ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳ, ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಪ್ರಾರಂಭದಲ್ಲೇ   ಪೂರ್ಣ ಶುಲ್ಕ ಪಾವತಿ ಸುವಂತೆ ಮಾಡಲಾಗಿದೆ.  ಎರಡು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಎಸ್ ಸಿ/ಎಸ್ಟಿ ಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಚುನಾವಣೆಯಲ್ಲಿ ಭರವಸೆ ನೀಡಿದ್ದಂತೆ ಲಕ್ಷಾಂತರ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಖಾಸಗಿ ವಲಯದಲ್ಲಿ ಮೀಸಲಾತಿಗೆ ಕಾಯ್ದೆ ತಂದಿಲ್ಲ  ಸಮಾಜಕ್ಕೆ ಇಷ್ಟೆಲ್ಲಾ ಅನ್ಯಾಯವಾ ಗುತ್ತಿದ್ದರೂ ಎಸ್ ಸಿ ಮತ್ತು ಎಸ್ ಟಿ ಮೀಸಲು ಕ್ಷೇತ್ರಗಳಿಂದ ಗೆದ್ದಿರುವ ಮೂರೂ ಪಕ್ಷಗಳ ಒಬ್ಬ ಶಾಸಕನೂ, ಮಂತ್ರಿ, ಸಂಸದರಾಗಲಿ ಬಾಯಿ ಬಿಡುತ್ತಿಲ್ಲ. ಕಾಂಗ್ರೆಸ್ ಸರ್ಕಾರವು ಇಂದು ಎಸ್ ಸಿ/ ಎಸ್ ಟಿ ಗಳಿಗೆ ಅನ್ಯಾಯ ಮಾಡಿದಾಗ ಸುಮ್ಮನಿದ್ದರೆ ನಾಳೆ ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಅನ್ಯಾಯ ಮಾಡಲು ಮುಂದಾಗುತ್ತದೆ.ಬಿಜೆಪಿ, ಜೆಡಿಎಸ್ ಇದೇ ಚಾಳಿಯನ್ನು ಮುಂದುವರೆಸುತ್ತವೆ. ಕಾಂಗ್ರೆಸ್,ಬಿಜೆಪಿ, ಜೆಡಿಎಸ್ ನಂತಹ ಮನುವಾದಿ ಪಕ್ಷಗಳಿಂದ ಖಂಡಿತಾ ನಮ್ಮ ಉದ್ಧಾರ ಸಾಧ್ಯವಿಲ್ಲ.  ಜ್ಯಾತ್ಯಾತೀತ ಮನುವಾದಿ ಕಾಂಗ್ರೆಸ್ ಮತ್ತು ಜಾತಿವಾದಿ ಮನುವಾದಿ ಬಿಜೆಪಿ ಮತ್ತು ಜೆಡಿಎಸ್ ಒಂದೇ ದೇಹದ ಎರಡು ಕೈಗಳಿದ್ದಂತೆ. ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇವರಿಂದ ಬಹುಜನರ ಉದ್ಧಾರ ಸಾದ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕರಾದ ಕೆ.ಎನ್.ದೊಡ್ಡೆಟ್ಟಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ .ಓ, ಜಿಲ್ಲಾ ಉಪಾಧ್ಯಕ ರಾಮಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಜಗಧೀಶ್,ಶ್ರೀನಿವಾಸ ಹೆಚ್.ಆರ್. ತಾಲ್ಲೂಕು ಅಧ್ಯಕ್ಷರು, ಹಿರಿಯೂರು ಮಹಾಲಿಂಗಪ್ಪ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷೆ ಲಕ್ಷ್ಮಕ್ಕ, ಮೊಳಕಾಲ್ಮೂರು ಅಧ್ಯಕ್ಷ ಮರಿಸ್ವಾಮಿ, ತಾಲ್ಲೂಕು ಖಂಜಾಚಿ ಪ್ರಸನ್ನ ಕುಮಾರ್, ಚಳ್ಳಕೆರೆ ತಾ.ಸಂಯೋಜಕರಾದ ನರಸಿಂಹ ಮೂರ್ತಿ, ತಾಲ್ಲೂಕು ಖಜಾಂಚಿ ಗೋವಿಂದಪ್ಪ, ಹೊಸದುರ್ಗ ಅಧ್ಯಕ್ಷ ಕರಿಬಸಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *