ರಾಜ್ಯದಲ್ಲಿ ಹೆಚ್ಚಾದ ಮಂಕಿಪಾಕ್ಸ್ ಆತಂಕ: ಶಂಕಿತರ ಚಿಕಿತ್ಸೆಗೆ ಬೆಂಗಳೂರು, ಮಂಗಳೂರು ಆಸ್ಪತ್ರೆ ಗುರುತಿಸಿದ ಸರ್ಕಾರ.

ಬೆಂಗಳೂರು, ಆಗಸ್ಟ್​.28: ಪಾಕಿಸ್ತಾನ್​ ಸೇರಿ ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್ (Mpox) ಪತ್ತೆ ಹಿನ್ನೆಲೆ ರಾಜ್ಯದಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕ ಆರೋಗ್ಯ ಇಲಾಖೆ (Karnataka Health Department) ಅಲರ್ಟ್ ಆಗಿದ್ದು ಏರ್​ಪೋರ್ಟ್​​ಗಳಲ್ಲಿ ಕಟ್ಟೆಚ್ಚರ ವಹಿಸಲು ಸುತ್ತೋಲೆ ಹೊರಡಿಸಿದೆ. ಜೊತೆಗೆ ಮಂಕಿಪಾಕ್ಸ್ ಶಂಕಿತರ ಚಿಕಿತ್ಸೆಗೆಂದು ಬೆಂಗಳೂರಿನ ಇಂದಿರಾನಗರದ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಗುರುತಿಸಲಾಗಿದೆ. ಮಂಕಿಪಾಕ್ಸ್ ಕಂಡು ಬಂದ್ರೆ 21 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ.

ಆರೋಗ್ಯ ಇಲಾಖೆ ನಿನ್ನೆ ಹೊರಡಿಸಿದ ಸುತ್ತೋಲೆಯಲ್ಲಿ, ರಾಜ್ಯ ಆರೋಗ್ಯ ಆಯುಕ್ತ ಡಿ ರಂದೀಪ್ ಅವರು ಮಂಗನ ಕಾಯಿಲೆಯ ಶಂಕಿತ ಪ್ರಕರಣಗಳ ಬಗ್ಗೆ ನಿಗಾ ಇಡಲು ಸೂಚಿಸಿದ್ದಾರೆ. ವಿಮಾನ ನಿಲ್ದಾಣಗಳು, ಬಂದರು ಮತ್ತು ರಾಜ್ಯದ ಎಲ್ಲಾ ಕಡೆಗಳ ಪ್ರವೇಶ ಕೇಂದ್ರಗಳ ವ್ಯವಸ್ಥಾಪಕ ಅಧಿಕಾರಿಗಳಿಗೆ ಎಚ್ಚರ ವಹಿಸಲು ನಿರ್ದೇಶನ ನೀಡಿದ್ದಾರೆ. ಶಂಕಿತರನ್ನ ಗುರುತಿಸಿ ಸ್ಕ್ರೀನಿಂಗ್ ಮಾಡುವಂತೆ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ.

ಹೈರಿಸ್ಕ್ ದೇಶಗಳಿಂದ ಬರುವವರ ಮೇಲೆ ಎಚ್ಚರವಹಿಸಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಯಾವುದೇ ಶಂಕಿತ ಪ್ರಕರಣಗಳು ಕಂಡು ಬಂದರೆ ಅವರನ್ನು ಐಸೋಲೇಟ್ ಮಾಡುವುದು, ಚಿಕಿತ್ಸೆ ನೀಡುವುದರ ಬಗ್ಗೆ ರಾಜ್ಯದ ಆರೋಗ್ಯ ಸಿಬ್ಬಂದಿ ಗಮನಹರಿಸುವಂತೆ ಸೂಚಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಮಂಕಿಪಾಕ್ಸ್ ಅನ್ನು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಿಸಿದ ನಂತರ ಹಾಗೂ ಸ್ವೀಡನ್ ಮತ್ತು ಪಾಕಿಸ್ತಾನದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ನಂತರ, ಶಂಕಿತ ಪ್ರಕರಣಗಳಿಗೆ ಸಿದ್ಧರಾಗುವಂತೆ ಕೇಂದ್ರವು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಭಾರತದಲ್ಲಿ ಪ್ರಸ್ತುತ ಯಾವುದೇ ಸಕ್ರಿಯ ಪ್ರಕರಣಗಳಿಲ್ಲ.

ಶಂಕಿತ ಪ್ರಕರಣದ ಎಲ್ಲಾ ಕ್ಲಿನಿಕಲ್ ಮಾದರಿಗಳನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರಿನಲ್ಲಿರುವ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಕ್ಕೆ ಸಾಗಿಸಲಾಗುತ್ತೆ. ಬಳಿಕ ಮಂಕಿಪಾಕ್ಸ್ ದೃಢಪಟ್ಟರೆ ಅವರನ್ನು ಕನಿಷ್ಠ 21 ದಿನಗಳವರೆಗೆ ಅಥವಾ ಸಂಪೂರ್ಣವಾಗಿ ಗುಣವಾಗುವವರೆಗೆ ಪ್ರತ್ಯೇಕವಾಗಿ ಐಸೋಲೇಟ್ ಮಾಡಲಾಗುತ್ತದೆ.

ಮಂಕಿಪಾಕ್ಸ್ ರೋಗಲಕ್ಷಣಗಳು

  • ಮೊದಲ ಐದು ದಿನ ಜ್ವರ, ಶೀತ ಮತ್ತು ಬೆವರು, ತಲೆನೋವು, ಸ್ನಾಯು ನೋವು, ಗಂಟಲು ನೋವು, ಕೆಮ್ಮು
  • ಜ್ವರ ಪ್ರಾರಂಭವಾದ ಮೂರು ದಿನಗಳ ನಂತರ ರ‍್ಯಾಶಸ್ ಕಂಡುಬರುತ್ತದೆ
  • ಸಾಮಾನ್ಯವಾಗಿ ಮುಖ, ಅಂಗೈ ಮತ್ತು ಅಡಿಭಾಗದ ಮೇಲೆ ರ‍್ಯಾಶಸ್​ಗಳಾಗಿ ನೋವು ಕಾಣಿಸಿಕೊಳ್ಳುತ್ತದೆ.

Source : https://tv9kannada.com/karnataka/bengaluru/karnataka-government-identifies-bangalore-mangalore-hospital-to-isolate-manage-suspected-mpox-cases-kannada-news-ayb-891345.html

 

Leave a Reply

Your email address will not be published. Required fields are marked *