ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ (Bengaluru) ಪ್ರತಿದಿನ ಸಾವಿರಾರು ಜನರು ಟ್ರಾಫಿಕ್ ಉಲ್ಲಂಘನೆ (Traffic Rule Break) ಮಾಡುತ್ತಾರೆ. ಇದನ್ನ ತಪ್ಪಿಸಲು ಸಂಚಾರ ಇಲಾಖೆ ಏನೇ ನಿಯಮಗಳನ್ನು ಜಾರಿ ಮಾಡಿದರೂ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ವಾಹನ ಸವಾರರಿಗೆ ಟ್ರಾಫಿಕ್ ಉಲ್ಲಂಘನೆ ಮಾಡುವ ಬಗ್ಗೆ ಪ್ರಜ್ಞೆ ಬೆಳೆಯುವವರೆಗೂ ನಿಯಮ ಉಲ್ಲಂಘನೆ ನಿಯಂತ್ರಣ ಕಡಿಮೆಯಾಗುವುದಿಲ್ಲ.ವಾಹನ ಸವಾರರ ಈ ನಿರ್ಲಕ್ಷ್ಯವನ್ನ ಬಂಡವಾಳ ಮಾಡಿಕೊಂಡ ಕೆಲವು ದಂದೇ ಕೋರರು ಟ್ರಾಫಿಕ್ ಪೊಲೀಸರ (Traffic Police) ಹೆಸರಲ್ಲಿ ವಾಹನ ಸವಾರರಿಂದ ದಂಡ ವಸೂಲಿ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾ ಫೈನ್ ಕಟ್ಟಿಸಿಕೊಳ್ಳುತ್ತಿದ್ದ ನಕಲಿ ಟ್ರಾಫಿಕ್ ಪೊಲೀಸ್ ಜಾಲವನ್ನ ಸೈಬರ್ ಕ್ರೈಮ್ ಪೊಲೀಸರು ಪತ್ತೆ ಹಚ್ಚಿದ್ದಾರೆ.

ವ್ಯಾಟ್ಸಪ್ ಮೂಲಕ ಸಂದೇಶ ಕಳುಹಿಸಿ ದಂಡ ವಸೂಲಿ
ಉದ್ಯೋಗ ಹರಸಿ ಬೆಂಗಳೂರಿಗೆ ಬಂದಿರುವ ಹೊರ ರಾಜ್ಯದ ತಂಡವೊಂದು ಸುಲಭವಅಗಿ ಹಣ ಸಂಪಾದಿಸಲು ನಕಲಿ ಟ್ರಾಫಿಕ್ ಪೊಲೀಸರ ವೇಷ ಧರಿಸಿದ್ದಾರೆ. ವಂಚಕರು ಟ್ರಾಫಿಕ್ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ನಕಲಿ ರಶೀದಿ ಕಳುಹಿಸಿ ವಾಟ್ಸಪ್ ಮೂಲಕ ದಂಡ ವಸೂಲಿ ಮಾಡಿದ್ದಾರೆ.
ಕಳೆದ ವರ್ಷ ಟ್ರಾಫಿಕ್ ಉಲ್ಲಂಘನೆ ಮಾಡಿದವರಿಗೆ 50% ಆಫರ್ ನೀಡಿದಾಗ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ದಂಡ ವಸೂಲಿ ಮಾಡಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿರು ಖದೀಮರು ಬೆಂಗಳೂರು ಪೊಲೀಸರು ವಾಹನ ಸವಾರರ ಅನುಕೂಲಕ್ಕಾಗಿ ಅಭಿವೃದ್ದಿ ಪಡಿಸಿರುವ ಟ್ರಾಫಿಕ್ ಫೈನ್ ಆಯಪ್ ಹಾಗೂ ಕೇಂದ್ರ ಸರ್ಕಾರ ವಾಹನ ನೋಂದಣಿ ಮಾಹಿತಿಗೆ ಲಭ್ಯ ಇರುವ ವೆಬ್ ಸೈಟ್ ದುರಪಯೋಗ ಪಡಿಸಿಕೊಂಡು ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ.
ವಾಟ್ಸಪ್ ಮೂಲಕ ದಂಡ ವಸೂಲಿ
ಪಶ್ಚಿಮ ಬಂಗಾಳದ ಮೂವರು ಆರೋಪಿಗಳು, ಟ್ರಾಫಿಕ್ ಸಿಗ್ನಲ್ ಬಳಿ ನಿಂತು ಟ್ರಾಫಿಕ್ ಉಲ್ಲಂಘನೆ ಮಾಡುವವರ ಫೋಟೋ ತೆಗೆದುಕೊಳ್ಳುತ್ತಿದ್ದರು. ನಂತರ ವಾಹನ ಸವಾರರ ಫೋನ್ ನಂಬರ್ ಹುಡುಕಿ, ಅವರ ಮೊಬೈಲ್ಗೆ ಫೋಟೋ ಕಳುಹಿಸಿ, ಟ್ರಾಫಿಕ್ ಉಲ್ಲಂಘನೆ ದಂಡವನ್ನು ಕಟ್ಟಲು ಹೇಳುತ್ತಿದ್ದರು. ಇದಕ್ಕಾಗಿ ಕ್ಯೂ ಆರ್ ಕೋಡ್ ಹಾಗೂ ಯುಪಿಐ ಐಡಿಗಳನ್ನು ವಾಟ್ಸಪ್ಗೆ ಕಳುಹಿಸಿ ದಂಡದ ಮೊತ್ತವನ್ನು ವಸೂಲಿ ಮಾಡಿದ್ದಾರೆ.
ನಕಲಿ ಕಾನ್ಸ್ಸ್ಟೇಬಲ್ ಐಡಿ ಬಳಕೆ
ವಂಚನೆ ವೇಳೆ ವಾಹನ ಸವಾರನೊಬ್ಬ ನೀವು ಐಡಿ ಕೇಳಿದ್ದಕ್ಕೆ ಆರೋಪಿಗಳು ಕರ್ನಾಟಕ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಎಂಬ ಐಡಿ ತೋರಿಸಿ ವಂಚಿಸಿದ್ದಾರೆ. ಆದರೆ ಇದು ನಕಲಿ ಎಂಬುದನ್ನು ಅರಿತ ವಾಹನಸವಾರರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ, ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ರಂಜನ್ ಕುಮಾರ್ ಪೋರ್ಬಿ, ಇಸ್ಮಾಯಿಲ್ ಅಲಿ, ಸುಭಿರ್ ಮಲ್ಲಿಕ್ ಎಂಬುವವರನ್ನ ಬಂಧಿಸಿದ್ದಾರೆ.