ಬಸವರಾಜ್ ಹೊರಟ್ಟಿ ರಾಜೀನಾಮೆ ಪತ್ರ ವೈರಲ್: ಹಲವು ಗೊಂದಲ

Basavaraj Horatti resigns: ಸದ್ಯ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್​ ಪ್ರಕರಣ ಕೋಲಾಹಲ ಎದ್ದಿದೆ. ತಮ್ಮನ್ನು ಹನಿಟ್ರ್ಯಾಪ್​​ ಬಲೆಗೆ ಬೀಳಿಸುವ ಯತ್ನ ನಡೆದಿತ್ತು ಎಂದು ಸ್ವತಃ ಸಚಿವ ರಾಜಣ್ಣ ಅವರು ಸದನದಲ್ಲಿ ಬಹಿರಂಗವಾಗಿಯೇ ಹೇಳಿದ್ದಾರೆ. ಹೀಗಾಗಿ ಭಾರೀ ಸಂಚಲನ ಮೂಡಿಸಿದೆ. ಈ ಹನಿಟ್ರ್ಯಾಪ್ ಭಾರೀ ಸದ್ದು ಮಾಡುತ್ತಿರುವ ಮಧ್ಯೆಯೇ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು. ಬಸವರಾಜ್‌ ಹೊರಟ್ಟಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರ ಹರಿದಾಡುತ್ತಿದೆ.

ಬೆಂಗಳೂರು/ಹುಬ್ಬಳ್ಳಿ, (ಮಾರ್ಚ್​ 23): ಕರ್ನಾಟಕದಲ್ಲಿ ಹನಿಟ್ರ್ಯಾಪ್​ ಪ್ರಕರಣ ಗದ್ದಲದ ಮಧ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಬಸವರಾಜ್‌ ಹೊರಟ್ಟಿ(basavaraj horatti) ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಪತ್ರ ಹರಿದಾಡುತ್ತಿದೆ. ಬೆಳಗ್ಗೆ ಮಾಧ್ಯಮಗಳ ಮುಂದೆ ರಾಜೀನಾಮೆ ಮಾತುಗಳನ್ನಾಡಿರುವ ಬೆನ್ನಲ್ಲೇ ಇದೀಗ ಹೊರಟ್ಟಿ ಅವರ ರಾಜೀನಾಮೆ ಪತ್ರ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೈರಲ್ ಆಗಿರುವ ರಾಜೀನಾಮೆ ಪತ್ರದಲ್ಲಿ ಮಾರ್ಚ್ 18 ಎನ್ನುವ ದಿನಾಂಕ ನಮೂದಾಗಿದೆ. ಹಾಗೇ ಪತ್ರದಲ್ಲಿ ಹೊರಟ್ಟಿ ಅವರ ಸಹಿ ಸಹ ಇಲ್ಲ. ಹೀಗಾಗಿ ರಾಜೀನಾಮೆ ಪತ್ರ ಹಲವು ಗೊಂದಲಗಳಿಗೆ ಕಾರಣವಾಗಿದೆ.

ರಾಜೀನಾಮೆ ಪತ್ರದಲ್ಲಿ ಏನಿದೆ?

ಇನ್ನು ಬಸವರಾಜ್ ಹೊರಟ್ಟಿ ಅವರು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಇಂದು (ಮಾರ್ಚ್ 23) ಬೆಳಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅವರು ಈಗಾಗಲೇ ತಮ್ಮ ರಾಜೀನಾಮೆಯನ್ನು  ಪರಿಷತ್ ಉಪಸಭಾಪತಿ ಪ್ರಾಣೇಶ್​ ಅವರಿಗೆ  ರವಾನಿಸಿದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು..ಮಾರ್ಚ್​ 18ರಂದೇ ಹೊರಟ್ಟಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರಾಣೇಶ್ ಅವರಿಗೆ ಕಳುಹಿಸಿದ್ದು, ದಿನಾಂಕ 1-4-25ರಂದು ನನ್ನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ವೈಯಕ್ತಿ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದು, ಸದರಿ ರಾಜೀನಾಮೆಯನ್ನು 31-3-25ರೊಳಗೆ ಸ್ವೀಕರಿಸಿ ದಿನಾಂಕ 1-4-2025ರಿಂದ ಅನ್ವಯವಾಗುವಂತೆ ಕ್ರಮಕೈಗೊಂಡು ಹಾಗೂ ನನನ್ನು ಈ ಹುದ್ದೆಯಿಂದ ಮುಕ್ತಿಗೊಳಿಸಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ರಾಜೀನಾಮೆ ಪತ್ರದಲ್ಲಿದೆ. ಅದ್ರೆ, ಪತ್ರದ ಕೊನೆಯಲ್ಲಿ ಮಾತ್ರ ಹೊರಟ್ಟಿ ಅವರ ಸಹಿ ಇಲ್ಲ. ಹೀಗಾಗಿ ಈ ಪತ್ರ ಅನುಮಾನಗಳನ್ನು ಹುಟ್ಟು ಹಾಕಿದೆ.

ಬೆಳಗ್ಗೆ ಅಷ್ಟೇ ರಾಜೀನಾಮೆ ಬಗ್ಗೆ ಮಾತನಾಡಿದ್ದ ಹೊರಟ್ಟಿ

ಇನ್ನು ರಾಜೀನಾಮೆ ಪತ್ರ ವೈರಲ್ ಆಗುವ ಮುನ್ನ ಅಂದ್ರೆ ಮಾ. 23ರಂದು ಬೆಳಗ್ಗೆ ಅಷ್ಟೇ ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾಡಿರುವ ಹೊರಟ್ಟ, ಇವತ್ತಿನ ರಾಜಕಾರಣಿಗಳನ್ನು ಸದನದಲ್ಲಿ ಸಂಭಾಳಿಸಲು ಸಾಧ್ಯವಿಲ್ಲ ಹಾಗೂ ನಾನು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಇಂದಿನ ದಿನಗಳಲ್ಲಿ ಸದನಗಳನ್ನು ನಿರ್ವಹಿಸುವುದು ಕಷ್ಟ ಎಂಬುದು ಅರ್ಥವಾಗಿದೆ. ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.

ಸದನದಲ್ಲಿ ನಡೆಯುತ್ತಿರುವ ಘಟನೆಗಳಿಂದ ನನಗೆ ಬೇಜಾರಾಗಿದೆ. ಸಭಪತಿಗೆ ಹೇಳೋದಿಲ್ಲ ಕೇಳೋದಿಲ್ಲ. ಸದನದೊಳಗೆ ಪ್ರತಿಭಟನೆ ನಡೆಸುತ್ತಾರೆ. ಪರಿಷತ್​ಗೆ ಪ್ಲೇ ಕಾರ್ಡ್‌ಗಳನ್ನು ತೆಗೆದುಕೊಂಡು ಬರುತ್ತಾರೆ. ಸದನ ನಡೆಸುವುದಕ್ಕೆ ನನಗೆ ಯೋಗ್ಯತೆ ಇಲ್ಲ. ಮೊನ್ನೆ ನಾನು 17 ನಿಮಿಷ ಸುಮ್ಮನೆ ಕುತ್ತಿದ್ದೆ. ಇದರಿಂದ ನಾನು ಸದನದಲ್ಲಿ ಇರಬಾರದು ಎಂದು ತೀರ್ಮಾನ ಮಾಡಿದ್ದೇನೆ. 45 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಸದನದಲ್ಲಿ ಯಾರೂ ಗೌರವ ಕೊಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.

ಈ ಹಿಂದೆಯೂ ರಾಜೀನಾಮೆ ಬಗ್ಗೆ ಮಾತನಾಡಿದ್ದ ಹೊರಟ್ಟಿ

ಬಸವರಾಜ್ ಹೊರಟ್ಟಿ ಅವರು ಹಿಂದೆಯೇ ರಾಜೀನಾಮೆ ಮಾತನಾಡಿದ್ದರು. ಇತ್ತೀಚೆಗೆ ಮೇಲ್ಮನೆಯಲ್ಲಿ ಸಭಾಪತಿ ಹೊರಟ್ಟಿಯವರ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸಲು ಕಾಂಗ್ರೆಸ್ ಸಜ್ಜಾಗಿತ್ತು. ಆಗಲೇ ಈ ಬಗ್ಗೆ ಎದ್ದಿದ್ದ ಊಹಾಪೋಹಗಳ ಬಗ್ಗೆ ಮಾತನಾಡಿದ್ದ ಹೊರಟ್ಟಿಯವರು, ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದರೆ, ಅದಕ್ಕೂ ಮುನ್ನವೇ ನಾನೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ನಾನು ಹಿಂದೆ ಮೇಷ್ಟ್ರು ಆಗಿದ್ದವನು. ಅಲ್ಲಿಂದ ಇಲ್ಲಿಯವರೆಗೆ ಸಾಗಿ ಬಂದಿದ್ದೇನೆ. ನನ್ನ ಈ ಸಾಧನೆಯ ಬಗ್ಗೆ ತೃಪ್ತಿಯಿದೆ. ಹಾಗಾಗಿ, ಯಾವುದೇ ಕ್ಷಣದಲ್ಲಿ ಸಭಾಪತಿ ಸ್ಥಾನ ತ್ಯಜಿಸುವ ಸಂದರ್ಭ ಬಂದರೆ ಖಂಡಿತವಾಗಿಯೂ ಆ ಸ್ಥಾನ ತ್ಯಜಿಸಿ ಮತ್ತೆ ನನ್ನ ಶಿಕ್ಷಕ ವೃತ್ತಿಗೆ ಹೋಗುತ್ತೇನೆ ಎಂದಿದ್ದರು.

Source: TV9

Leave a Reply

Your email address will not be published. Required fields are marked *