ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಮ್ಯಾರಥಾನ್‌ಗೆ ಅರ್ಹತೆ ಪಡೆದ ಕರ್ನಾಟಕದ ಬೆಳ್ಳಿಯಪ್ಪ

New Delhi Marathon Three Indian marathoners qualify for Asian Games Marathon along with belliappa from karnataka

ದೆಹಲಿಯಲ್ಲಿ ನಡೆದ ಅಪೋಲೋ ಟೈಯರ್ಸ್‌ ನವದೆಹಲಿ ಮ್ಯಾರಥಾನ್‌ನಲ್ಲಿ (New Delhi Marathon) ಕನ್ನಡಿಗ ಎ.ಬಿ.ಬೆಳ್ಳಿಯಪ್ಪ ಸೇರಿದಂತೆ ಭಾರತದ ಅಗ್ರ ಮೂರು ಓಟಗಾರರು ಪೋಡಿಯಂ ಫಿನಿಶ್ ಮಾಡಿದ್ದಲ್ಲದೇ 2023ರ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೂ (Asian Games) ಅರ್ಹತೆ ಪಡೆದಿದ್ದಾರೆ. ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಬೆಳ್ಳಿಯಪ್ಪ, ಮಾನ್ ಸಿಂಗ್ ಹಾಗೂ ಕಾರ್ತಿಕ್ ಕುಮಾರ್ ಮೂವರೂ 2 ಗಂಟೆ 15 ನಿಮಿಷಗಳೊಳಗೆ ಓಟ ಪೂರೈಸಿ ಏಷ್ಯನ್ ಗೇಮ್ಸ್ ಮ್ಯಾರಥಾನ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಕೇವಲ 2 ಸೆಕೆಂಡ್‌ಗಳಿಂದ ಮೊದಲ ಸ್ಥಾನ ಮಿಸ್

ಕಳೆದ ತಿಂಗಳಷ್ಟೇ 2 ಗಂಟೆ 16.58 ನಿಮಿಷಗಳಲ್ಲಿ ಗುರಿ ಸಾಧಿಸಿ ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದ ಮಾನ್ ಸಿಂಗ್, ಭಾನುವಾರ 2 ಗಂಟೆ 14.13 ನಿಮಿಷಗಳಲ್ಲಿ ಓಟ ಪೂರೈಸಿ ಚಿನ್ನದ ಪದಕ ಗೆಲ್ಲುವುದರ ಜೊತೆ 1.5 ಲಕ್ಷ ರೂ ಬಹುಮಾನದ ಮೊತ್ತವನ್ನೂ ಬಾಚಿಕೊಂಡರು. ಇನ್ನು 2 ಗಂಟೆ 14.15 ನಿಮಿಷಗಳಲ್ಲಿ ಓಟ ಮುಕ್ತಾಯಗೊಳಿಸಿದ ಕರ್ನಾಟಕದ ಬೆಳ್ಳಿಯಪ್ಪ ಕೇವಲ 2 ಸೆಕೆಂಡ್‌ಗಳ ಅಂತರದಲ್ಲಿ ಮೊದಲ ಸ್ಥಾನದಿಂದ ವಂಚಿತರಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

ಕೇವಲ 6 ಸೆಕೆಂಡ್‌ಗಳ ಅಂತರ

ಮತ್ತೊಬ್ಬ ಓಟಗಾರ ಕಾರ್ತಿಕ್ ಕುಮಾರ್ 2 ಗಂಟೆ 14.19 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ ಕಂಚಿನ ಪದಕ ಗೆದ್ದರು. ಮೊದಲ ಸ್ಥಾನಕ್ಕೂ ಮೂರನೇ ಸ್ಥಾನಕ್ಕೂ ಕೇವಲ 6 ಸೆಕೆಂಡ್‌ಗಳ ಅಂತರವಿದ್ದಿದ್ದು ಸ್ಪರ್ಧೆ ಎಷ್ಟು ತೀವ್ರವಾಗಿತ್ತು ಎನ್ನುವುದಕ್ಕೆ ಉದಾಹರಣೆಯಾಗಿದೆ.

ಇದೇ ವೇಳೆ ಮಹಿಳೆಯರ ವಿಭಾಗದಲ್ಲಿ ಜ್ಯೋತಿ ಗಾವಟೆ ಚಿನ್ನದ ಪದಕ ಗೆದ್ದರೂ, ಏಷ್ಯನ್ ಗೇಮ್ಸ್‌ಗೆ ಟಿಕೆಟ್ ಗಳಿಸಲು ಸಾಧ್ಯವಾಗಲಿಲ್ಲ. 2 ಗಂಟೆ 53.04 ನಿಮಿಷಗಳಲ್ಲಿ ಜ್ಯೋತಿ ಗಾವಟೆ ಸ್ಪರ್ಧೆ ಮುಗಿಸಿದರು. ಆದರೆ ಏಷ್ಯಾಡ್‌ಗೆ ಅರ್ಹತೆ ಪಡೆಯಲು 2 ಗಂಟೆ 47 ನಿಮಿಷಗಳ ಗುರಿ ನಿಗದಿ ಮಾಡಲಾಗಿತ್ತು. ಇನ್ನು ಅಶ್ವಿನಿ ಜಾಧವ್ (2 ಗಂಟೆ 53.06 ನಿಮಿಷ) ಹಾಗೂ ಜಿಗ್ಮೆತ್ ಡೊಲ್ಮಾ(2 ಗಂಟೆ 56.41 ನಿಮಿಷ) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.

16000ಕ್ಕೂ ಅಧಿಕ ಓಟಗಾರರು ಭಾಗಿ

16000ಕ್ಕೂ ಅಧಿಕ ಓಟಗಾರರು ನಾಲ್ಕು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಇದರೊಂದಿಗೆ ನವದೆಹಲಿ ಮ್ಯಾರಥಾನ್ ದೇಶದಲ್ಲಿ ಅತಿಹೆಚ್ಚು ಓಟಗಾರರನ್ನು ಆಕರ್ಷಿಸಿದ ಮ್ಯಾರಥಾನ್‌ಗಳಲ್ಲಿ ಒಂದೆನಿಸಿತು. ಎಲೈಟ್ ಓಟಗಾರರು ಬೆಳಗ್ಗೆ 5 ಗಂಟೆಗೆ ಸ್ಪರ್ಧೆ ಆರಂಭಿಸಿದರು. ಡೇವಿಡ್ ರುಧಿಶಾ ಹಾಗೂ ಇತರ ಗಣ್ಯರು ಓಟಕ್ಕೆ ಚಾಲನೆ ನೀಡಿದರು.

source https://tv9kannada.com/sports/new-delhi-marathon-three-indian-marathoners-qualify-for-asian-games-marathon-along-with-belliappa-from-karnataka-psr34-au14-527634.html

Leave a Reply

Your email address will not be published. Required fields are marked *