ಭರ್ಜರಿ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ಪ್ಲೇಆಫ್‌ಗೆ ದಾಪುಗಾಲು!

Sports News:ಸ್ಟಾರ್ ಆಟಗಾರ ಆಕಾಶ್‌ ಶಿಂದೆ ಹಾಗೂ ಅಲಿರಾಜ್‌ ಮಿರ್ಜೈನ್‌ ಅವರ ಮನಮೋಹಕ ಆಟದ ನೆರವಿನಿಂದ ಬೆಂಗಳೂರು ಬುಲ್ಸ್‌ 12ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದು, ಟಾಪ್‌ 4 ಸ್ಥಾನವನ್ನು ಖಚಿತ ಪಡಿಸಿಕೊಂಡಿದೆ.

ಈ ಮೂಲಕ ಬೆಂಗಳೂರು ಬುಲ್ಸ್‌ 7ನೇ ಬಾರಿಗೆ ಪ್ಲೇ ಆಫ್‌ಗೆ ಎಂಟ್ರಿ ನೀಡಿದೆ. ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು 54-26 ಅಂಕಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
ಮೊದಲಾವಧಿಯ ಆಟದಲ್ಲಿ ಬೆಂಗಳೂರು ಬುಲ್ಸ್ ಅಬ್ಬರದ ಆಟವನ್ನು ಆಡಿತು.

ಈ ಅವಧಿಯ ಮೊದಲ ನಾಲ್ಕು ನಿಮಿಷದ ಒಳಗೆ ಬುಲ್ಸ್‌ ಎದುರಾಳಿ ತಂಡವನ್ನು ಆಲೌಟ್ ಮಾಡಿತು. ಪರಿಣಾಮ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಇದೇ ಅವಧಿಯಲ್ಲಿ ಬುಲ್ಸ್‌ 13ನೇ ನಿಮಿಷದಲ್ಲಿ ಮತ್ತೊಮ್ಮೆ ಆರ್ಭಟಿಸಿತು. ಪರಿಣಾಮ ಬೆಂಗಳೂರು ಅಂಕಗಳ ಬೇಟೆಗೆ ಚುರುಕು ಮುಟ್ಟಿಸಿತು. ಇನ್ನು ಮೊದಲಾವಧಿಯ ಮುಕ್ತಾಯದ ಮುಂಚೆ ಗುಜರಾತ್ ಜೈಂಟ್ಸ್ ಮತ್ತೊಮ್ಮೆ ಆಲೌಟ್ ಆಯಿತು. ಮೊದಲಾವಧಿಯ ಆಟದಲ್ಲಿ ಬುಲ್ಸ್‌ ತಂಡದ ರಕ್ಷಣಾ ಆಟಗಾರರ ಆಟ ಮನಮೋಹಕವಾಗಿತ್ತು.

ಬುಲ್ಸ್ ತಂಡದ ಪರ ನಾಯಕ ಯೋಗೇಶ್‌, ಸಂಜಯ್‌ ಕ್ಲಾಸ್ ಆಟ ಪ್ರದರ್ಶಿಸಿ ಅಂಕಗಳಿಕೆಗೆ ನೆರವಾದರು. ಮೊದಲಾವಧಿಯಲ್ಲಿ ಬುಲ್ಸ್‌ 36-7 ಅಂಕಗಳಿಂದ ಮುನ್ನಡೆ ಸಾಧಿಸಿ, ಗೆಲುವಿನ ಹೆಬ್ಬಾಗಿಲಿನಲ್ಲಿ ಒಂದು ಹೆಜ್ಜೆ ಇಟ್ಟು ಆಗಿತ್ತು.


ಎರಡನೇ ಆಟದ ಅವಧಿಯಲ್ಲಿ ಬುಲ್ಸ್‌ ತಂಡದ ಯೋಜನೆಯನ್ನು ಅರಿತು ಆಡಿದ ಗುಜರಾತ್‌ ಅಂಕಗಳಿಕೆಗೆ ಕೊಂಚ ಚುರುಕು ಮುಟ್ಟಿಸಿತು. ಈ ಅವಧಿಯಲ್ಲಿ ಬುಲ್ಸ್ ತಂಡಕ್ಕೆ ಸುಲಭವಾಗಿ ಅಂಕಗಳನ್ನು ನೀಡದೆ ಕಾಡಿತು.

ಈ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಬಾರಿ ಆಲೌಟ್ ಆದವು. ಈ ಅವಧಿಯಲ್ಲಿ ಜೈಂಟ್ಸ್‌ 19-18 ರಿಂದ ಮುನ್ನಡೆ ಸಾಧಿಸಿದರೂ, ಮೊದಲಾವಧಿಯಲ್ಲಿ ಸಾಧಿಸಿದ್ದ ಅಂತರವನ್ನು ಮೆಟ್ಟಿನಿಲ್ಲಲು ಸಾಧ್ಯವಾಗಲಿಲ್ಲ. ಪರಿಣಾಮ ಬೆಂಗಳೂರು ಬುಲ್ಸ್‌ ಭರ್ಜರಿ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. 12ನೇ ಆವೃತ್ತಿಯ ಕಬಡ್ಡಿ ಟೂರ್ನಿಯಲ್ಲಿ ಬುಲ್ಸ್‌ ಆಡಿದ 18 ಪಂದ್ಯಗಳಲ್ಲಿ 11 ಜಯ ಸಾಧಿಸಿ 22 ಅಂಕವನ್ನು ಕಲೆ ಹಾಕಿತು.


ಯು.ಪಿ, ಪಾಟ್ನಾಗೆ ಜಯ
ಗುರುವಾರ ನಡೆದ ಎರಡನೇ ಪಂದ್ಯದಲ್ಲಿ ಯುಪಿ ಯೋಧಾಸ್ 35-32 ರಿಂದ ಯು ಮುಂಬಾ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ 9ನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಈ ಪಂದ್ಯದಲ್ಲಿ ಸೋಲು ಕಂಡಿರುವ ಮುಂಬಾ ಅಂಕಪಟ್ಟಿಯಲ್ಲಿ 6ನೇ ಸ್ಥಾನವನ್ನು ಪಡೆದಿದ್ದು, ಪ್ಲೇ ಆಫ್‌ಗೆ ಎಂಟ್ರಿ ಪಡೆದಿದೆ. ವಿಜೇತ ತಂಡದ ಪರ ಸುರೀಂದ್ರ ಗಿಲ್ 7 ಅಂಕ ಕಲೆ ಹಾಕಿದರು. ಇನ್ನೊಂದು ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ 33-18 ರಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಈ ಗೆಲುವಿನ ಮೂಲಕ ಪಾಟ್ನಾ 16 ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಪಡೆದಿದೆ. ಇನ್ನು ಜೈಪುರ್ ಪಿಂಕ್ ಪ್ಯಾಂಥರ್ಸ್‌ ಈ ಪಂದ್ಯದಲ್ಲಿ ಸೋತರೂ ಮುಂದಿನ ಹಂತದಲ್ಲಿ ಆಡುವ ಅವಕಾಶವನ್ನು ಪಡೆದಿದೆ.

Views: 7

Leave a Reply

Your email address will not be published. Required fields are marked *