Bengaluru crime: ವಿಳಾಸ ಕೇಳುವ ನೆಪದಲ್ಲಿ ವಕೀಲನನ್ನೇ ಅಪಹರಿಸಿದ ಗ್ಯಾಂಗ್: 20 ಸಾವಿರ ರೂ. ಸುಲಿಗೆ ಮಾಡಿದ ಅಪಹರಣಕಾರರು

ವಿಳಾಸ ಕೇಳುವ ನೆಪದಲ್ಲಿ ವಕೀಲನನ್ನೇ ಗ್ಯಾಂಗ್​ವೊಂದು ಅಪಹರಿಸಿದೆ. ರಾತ್ರಿಯೆಲ್ಲಾ‌ ಸುತ್ತಾಡಿಸಿ 20 ಸಾವಿರ ರೂಪಾಯಿ ಅನ್ನು ಅಪಹರಣಕಾರರು ಸುಲಿಗೆ ಮಾಡಿದ್ದಾರೆ.

ಬೆಂಗಳೂರು: ”ವಿಳಾಸ ಕೇಳುವ ನೆಪದಲ್ಲಿ ವಕೀಲರೊಬ್ಬರನ್ನು ಅಡ್ಡಗಟ್ಟಿ ಅಪಹರಿಸಿ, ಹಣ ಸುಲಿಗೆ ಮಾಡಿದ್ದ ಐವರ ಪೈಕಿ ಇಬ್ಬರು ಅಪಹರಣಕಾರರನ್ನು ಗಿರಿನಗರ ಪೊಲೀಸರು ಸೆರೆಹಿಡಿದ್ದಾರೆ.

ಹಣವಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಆಕ್ಸಿಡೆಂಟ್ ಆಗಿದೆ ಎಂದು ವಕೀಲನ‌ ಸ್ನೇಹಿತರಿಗೆ ಕರೆ ಮಾಡಿಸಿ, 20 ಸಾವಿರ ಹಣವನ್ನು ಸುಲಿಗೆ ಮಾಡಿದ್ದಾರೆ. ಮೂಲತಃ ಹಾಸನದ ಶಾಂತಿ ಗ್ರಾಮದ ನಿವಾಸಿಯಾಗಿರುವ ವಕೀಲ ಅಶೋಕ್ ಅವರನ್ನು ಅಪಹರಿಸಿದ ಆರೋಪಿಗಳಾದ ಯಶವಂತ್ ಹಾಗೂ ನಂದೀಶ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ‌. ನಾಗೇಂದ್ರ ಬ್ಲಾಕ್​ನಲ್ಲಿ ವಾಸವಾಗಿದ್ದ ಅಶೋಕ್, ಜೂನ್​ 19 ರಂದು ಊರಿಗೆ ಹೋಗಿ ಹನುಮಂತ ನಗರದ ಪಿಎಸ್‌ಐ ಕಾಲೇಜು ಬಳಿ‌ ಮನೆಗೆ ನಡೆದುಕೊಂಡು ಬರುತ್ತಿದ್ದರು.‌ ಈ ವೇಳೆ‌ ಅಪಹರಣಕಾರರ ಗುಂಪು ಆಟೋದಲ್ಲಿ ಬಂದಿದೆ. ಅಶೋಕ್‌ ಅವರನ್ನು ತಡೆದು ಕತ್ತರಿಗುಪ್ಪೆಗೆ ಹೇಗೆ ಹೋಗಬೇಕು ಎಂದು ಗ್ಯಾಂಗ್​ನ‌ ಓರ್ವ ಆರೋಪಿ ವಿಳಾಸ ಕೇಳಿದ್ದಾನೆ.‌ ಈ ಮಧ್ಯೆ ಸಮಯ ನೋಡಿಕೊಂಡು ಅವರನ್ನು ಆಟೋದಲ್ಲಿ ಕೂರಿಸಿ ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದಾರೆ. ನೈಸ್ ರಸ್ತೆ ಪೂರ್ತಿ ತಿರುಗಾಡಿಸಿದ್ದಾರೆ. ಹಣ ನೀಡುವಂತೆ‌ ಧಮ್ಕಿ ಹಾಕಿ ಹಲ್ಲೆ ಮಾಡಿದ್ದರು.‌ ಅಶೋಕ್ ಬಳಿ ಹಣವಿಲ್ಲದಿರುವುದನ್ನು ಗಮನಿಸಿದ ಆರೋಪಿಗಳು ಸಹದ್ಯೋಗಿಗಳಿಗೆ ಕರೆ ಮಾಡಿಸಿ ತಮಗೆ ಆಕ್ಸಿಡೆಂಟ್ ಆಗಿದ್ದು, ತುರ್ತು ಹಣದ ಅಗತ್ಯವಿದೆ ಎಂದು ಹೇಳಿಸಿ ಆನ್​ಲೈನ್ ಮೂಲಕ 20 ಸಾವಿರ ಹಣ ಹಾಕಿಸಿಕೊಂಡಿದ್ದಾರೆ. ಬಳಿಕ ಎಟಿಎಂ ಮೂಲಕ ಹಣ ಬಿಡಿಸಿಕೊಂಡು ಪೊಲೀಸರಿಗೆ ಹೇಳಿದರೆ ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿ ಕನಕಪುರದ ‌ರವಿಶಂಕರ್ ಗುರೂಜಿ ಆಶ್ರಮದ ಬಳಿ ಬಿಟ್ಟು ಐವರು ಆರೋಪಿಗಳು‌ ಪರಾರಿಯಾಗಿದ್ದರು. ಅಪಹರಣ ಸಂಬಂಧ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಇಬ್ಬರು‌ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

Source : https://m.dailyhunt.in/news/india/kannada/etvbhar9348944527258-epaper-etvbhkn/bengaluru+crime+vilaasa+keluva+nepadalli+vakilananne+apaharisidha+gyaang+20+saavira+ru+sulige+maadidha+apaharanakaararu-newsid-n513351872?listname=newspaperLanding&topic=crime&index=1&topicIndex=2&mode=pwa&action=click

Leave a Reply

Your email address will not be published. Required fields are marked *