ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
![](https://samagrasuddi.co.in/wp-content/uploads/2024/07/IMG-20240728-WA0002-300x138.jpg)
*ಶೀಘ್ರ 8 ಕೆರೆಗಳಿಗೆ ಭದ್ರಾ ನೀರು; ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ
*ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನವಿ
* ವಿಶ್ವೇಶ್ವರಯ್ಯ ಜಲ ನಿಗಮದ ಸಭೆ
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ತಾಲ್ಲೂಕಿನಲ್ಲಿ ಹೆಚ್ಚುವರಿಯಾಗಿ 8 ಕೆರೆಗಳಿಗೆ ನೀರು ತುಂಬಿಸಲು ಆದೇಶ ನೀಡಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಈಚೆಗೆ ನಡೆದ ವಿಶ್ವೇಶ್ವರಯ್ಯ ಜಲ ನಿಗಮದ ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ‘ಸರ್ಕಾರದ ಯಾವುದೇ ಯೋಜನೆ ಬಂದರು ಚಿತ್ರದುರ್ಗದ ಹೆಸರು ಕೇಳಿ ಬರುತ್ತಿದೆ. ಆದರೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಹೆಚ್ಚಿನ ಪ್ರಯೋಜನ ಆಗುತ್ತಿಲ್ಲ. ಇದೀಗ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಇದನ್ನು ಮೊದಲು ಸರಿಪಡಿಸಬೇಕು’ ಎಂದರು.
![](https://samagrasuddi.co.in/wp-content/uploads/2024/07/IMG-20240728-WA0006-300x138.jpg)
‘ಈ ಹಿಂದೆ ಕ್ಷೇತ್ರ ವ್ಯಾಪ್ತಿಯ 5 ಕೆರೆಗಳಿಗೆ ನೀರು ತುಂಬಿಸಲು ಆದೇಶವಾಗಿದೆ. ಆದರೆ ಉಳಿದ 8 ಕೆರೆಗಳಿಗೆ ನೀರು ತುಂಬಿಸದಿದ್ದರೆ ಜನರು ಸಮಸ್ಯೆಗೆ ಸಿಲುಕುತ್ತಾರೆ. ಕೂಡಲೇ 8 ಕೆರೆಗಳಿಗೆ ನೀರು ತುಂಬಿಸಿದರೆ ಈ ವ್ಯಾಪ್ತಿ ಯಲ್ಲಿ ಬರುವ ಸಾವಿರಾರು ರೈತರಿಗೆ ಅನ್ನ ನೀಡಿದಂತಾಗುವುದು ಆದಕಾರಣ 8 ಕೆರೆಗಳಿಗೆ ನೀರು ತುಂಬಿಸುವಂತೆ ಆದೇಶಿಸಬೇಕು’ ಎಂದು ಒತ್ತಾಯಿಸಿದರು.
ಶಾಸಕರ ಮಾತು ಆಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 8 ಕೆರೆಗಳಿಗೆ ನೀರು ತುಂಬಿಸಲು ಡಿಪಿಆರ್ ಸಿದ್ಧಗೊಳಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿ, ಶೀಘ್ರ ನೀರು ತುಂಬಿಸಲು ಆದೇಶ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು. ಸಭೆಯಲ್ಲಿ ವಿಶ್ವೇಶ್ವರಯ್ಯ ಜಲನಿಗಮ ವ್ಯಾಪ್ತಿಗೆ ಬರುವ ಶಾಸಕರು, ಅಧಿಕಾರಿಗಳು ಇದ್ದರು.