ಗೂಗಲ್​ನೊಂದಿಗೆ ಅಂಧ ವ್ಯಕ್ತಿಯ ಉತ್ತಮ ಒಡನಾಟ: ‘ಲುಕ್‌ಔಟ್ ಅಸಿಸ್ಟೆಡ್ ವಿಷನ್’ ಆಪ್ ಅಂಧ ಕನ್ನಡಿಗರಿಗೆ ತುಂಬಾ ಅನುಕೂಲ..

Blind man who is best companion with Google: ಗೂಗಲ್​ನೊಂದಿಗೆ ಬೈಲಹೊಂಗಲ‌ನ ಅಂಧ ಸರ್ಕಾರಿ ನೌಕರನೊಬ್ಬ ಉತ್ತಮ ಒಡನಾಟ ಹೊಂದಿದ್ದಾರೆ. ಇವರು ಗೂಗಲ್ ಆಯಪ್​​ ​ಯೊಂದರಲ್ಲಿ ಕನ್ನಡ ಭಾಷೆ ಸೇರಿಸುವ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ.

ಬೆಳಗಾವಿ: ಅಂಧರಿಗೆ ಅನುಕೂಲ‌ ಆಗಲಿ ಎಂದು ಗೂಗಲ್ ಒಂದು ತಂತ್ರಾಂಶವನ್ನು ಕಂಡು ಹಿಡಿದಿತ್ತು. ಆದರೆ, ಅದು ಕನ್ನಡದಲ್ಲಿ ಇರಲಿಲ್ಲ. ಇದರಿಂದ ಕನ್ನಡವಷ್ಟೇ ಬಲ್ಲ ಅಂಧರು ಈ ತಂತ್ರಾಂಶವನ್ನು ಬಳಸಲು ಪರದಾಡಬೇಕಿತ್ತು. ಮನಗಂಡ ಬೈಲಹೊಂಗಲ‌ದ ಅಂಧ ಸರ್ಕಾರಿ ನೌಕರನೊಬ್ಬ ನಿರಂತರವಾಗಿ ಎರಡು ವರ್ಷ ಶ್ರಮವಹಿಸಿ ಕೊನೆಗೂ ಆ ಆಯಪ್​​ನಲ್ಲಿ ಕನ್ನಡ ಭಾಷೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಪ್ಪು ಕನ್ನಡಕ ಹಾಕಿಕೊಂಡಿರುವ ಬೈಲಹೊಂಗಲ ಪಟ್ಟಣದ ಸಿದ್ದಲಿಂಗೇಶ್ವರ ಮಹಾಂತೇಶ ಇಂಗಳಗಿ ಅವರೇ ಅಂಧರ ಪರವಾಗಿ‌ ಕಾರ್ಯನಿರ್ವಹಿಸಿ ಯಶಸ್ವಿಯಾಗಿದ್ದಾರೆ. ಬೈಲಹೊಂಗಲ ತಾಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ ನಿವೃತ್ತ ಉಪನ್ಯಾಸಕ, ತಾಯಿ ಪ್ರೌಢಶಾಲಾ ಶಿಕ್ಷಕಿ. ಈ ಸಿದ್ದಲಿಂಗೇಶ್ವರ ದೃಷ್ಟಿದೋಷ ಹೊಂದಿದ್ದರೂ, ಅವರು ಯಾವುದರಲ್ಲೂ ಕಮ್ಮಿ ಇಲ್ಲ.

ಲುಕ್‌ಔಟ್ ಅಸಿಸ್ಟೆಡ್ ವಿಷನ್: ಅಂಧರಿಗೆ ತಮ್ಮ ಸುತ್ತಮುತ್ತಲಿರುವ ವಸ್ತುಗಳನ್ನು ತಿಳಿದುಕೊಳ್ಳಲು ಅನುಕೂಲ ಆಗಲಿ ಎಂದು ಗೂಗಲ್ “ಲುಕ್‌ಔಟ್ ಅಸಿಸ್ಟೆಡ್ ವಿಷನ್” ಎಂಬ ತಂತ್ರಾಂಶವನ್ನು ಕಂಡು ಹಿಡಿದಿದೆ. ಆದರೆ, ಇದು ಕನ್ನಡದಲ್ಲಿ ಇರಲಿಲ್ಲ. ಗೂಗಲ್ ಸಂಸ್ಥೆಯ ಡಿಸೆಬಿಲಿಟಿ ಹೆಲ್ಪ್​ಡೆಸ್ಕ್‌ಗೆ 2021ರಲ್ಲಿ ಇ-ಮೇಲ್ ಹಾಗೂ ಟ್ವಿಟರ್ ಮೂಲಕ ಸಿದ್ದಲಿಂಗೇಶ್ವರ ಅಭಿಯಾನ ನಡೆಸಿದ್ದರು. ಸತತ ಎರಡು ವರ್ಷಗಳ ಅವರ ಪ್ರಯತ್ನದ ಫಲವಾಗಿ ಇದೇ ವರ್ಷ ಆಗಸ್ಟ್ 17ರಂದು ಈ ತಂತ್ರಾಂಶಕ್ಕೆ ಕನ್ನಡ ಸೇರ್ಪಡೆ ಆಗಿದ್ದು, ರಾಜ್ಯದ ದೃಷ್ಟಿದೋಷ ಉಳ್ಳವರ ಪಾಲಿಗೆ ಬೆಳಕಾಗಿ‌ ಪರಿಣಮಿಸಿದೆ.

ಸಿದ್ದಲಿಂಗೇಶ್ವರ ಮಾತು: ಇನ್ನು ಈ ತಂತ್ರಾಂಶ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಿದ್ದಲಿಂಗೇಶ್ವರ ಅವರು ಸ್ವತಃ ಈಟಿವಿ ಭಾರತ ಜೊತೆಗೆ ವಿವರಿಸಿದ್ದಾರೆ.‌ ”ಸ್ಮಾರ್ಟ್‌ಫೋನ್‌ನಲ್ಲಿನ ಪ್ಲೇ ಸ್ಟೋರ್ ಆಯಪ್‌ಗೆ ಹೋಗಿ, ಲುಕ್‌ಔಟ್ ಅಸಿಸ್ಟೆಡ್ ವಿಷನ್ (lookout assisted vision) ತಂತ್ರಾಂಶ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದರಲ್ಲಿ ಟೆಕ್ಸ್ಟ್, ಡಾಕ್ಯುಮೆಂಟ್ಸ್, ಎಕ್ಸ್‌ಪ್ಲೋರ್, ಕರೆನ್ಸಿ, ಫುಡ್ ಲೇಬಲ್ಸ್, ಇಮೇಜಸ್ ಎಂಬ 6 ವಿಧಾನಗಳು ಬರುತ್ತವೆ. ಕನ್ನಡ ಭಾಷೆ ಆಯ್ಕೆ ಮಾಡಿಕೊಂಡು, ಫೋನ್‌ನ ಹಿಂಭಾಗದ ಕ್ಯಾಮೆರಾ ಬಳಸಿಕೊಂಡು ವಿವಿಧ ವಿಷಯಗಳನ್ನು ಅರಿಯಬಹುದಾಗಿದೆ” ಎಂದು ತಿಳಿಸಿದರು.

”ಟೆಕ್ಸ್ಟ್ ವಿಧಾನವು ಕನ್ನಡ ಭಾಷೆಯಲ್ಲಿರುವ ಪಠ್ಯ ಗುರುತಿಸಿ, ಜೋರಾದ ಧ್ವನಿಯಲ್ಲಿ ಓದಿ ಹೇಳುತ್ತದೆ. ಇದರಿಂದ ವಿವಿಧ ಪುಸ್ತಕ, ದಾಖಲೆಗಳು ಮತ್ತು ದಿನಪತ್ರಿಕೆಗಳಲ್ಲಿನ ಮಾಹಿತಿಯನ್ನೂ ತಿಳಿಯಬಹುದು. ಇನ್ನು ಡಾಕ್ಯುಮೆಂಟ್ಸ್ ವಿಧಾನದಲ್ಲಿ ಪುಸ್ತಕ ಅಥವಾ ಕಡತವೊಂದರ ಇಡೀ ಪುಟದಲ್ಲಿರುವ ವಿಷಯವಸ್ತು ಸ್ಕ್ಯಾನ್ ಆಗಿ, ಟೆಕ್ಸ್ಟ್ ಮಾದರಿಯಲ್ಲಿ ಅದು ಪರಿವರ್ತನೆಯಾಗುತ್ತದೆ. ನಂತರ ಆ ಎಲ್ಲ ವಿಷಯವನ್ನು ಓದಿ ಹೇಳುತ್ತದೆ” ಎಂದು ಸಿದ್ಧಲಿಂಗೇಶ್ವರ ತಿಳಿಸಿದರು.

ಎಕ್ಸ್‌ಪ್ಲೋರ್ ವಿಧಾನದಲ್ಲಿ ನಾವು ಕುಳಿತಿರುವ ಸ್ಥಳದ ಅಕ್ಕಪಕ್ಕದಲ್ಲಿರುವ ವಸ್ತುಗಳನ್ನು ಉದಾಹರಣೆಗೆ ಕಿಟಕಿ, ಬಾಗಿಲು, ಕಂಪ್ಯೂಟರ್, ಕುರ್ಚಿ, ಪರದೆ ಸೇರಿ ಇನ್ನಿತರ ವಸ್ತುಗಳನ್ನು ಗುರುತಿಸುತ್ತದೆ. ಅಲ್ಲದೇ ವ್ಯಕ್ತಿಗಳ ಮುಂದಿದ್ದರೆ ಪುರುಷ, ಮಹಿಳೆ ಎಂದು ಕೂಗಿ ಹೇಳುತ್ತದೆ. ಇನ್ನೂ ಕರೆನ್ಸಿ ವಿಧಾನದಿಂದ ಭಾರತದಲ್ಲಿ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯವನ್ನು ತಿಳಿಯಬಹುದಾಗಿದೆ. ನಮ್ಮ ಕೈಯಲ್ಲಿ ಎಷ್ಟು ರೂ. ನೋಟು ಇದೆ ಎಂಬುದನ್ನು ನಿಖರವಾಗಿ ಈ ತಂತ್ರಾಂಶ ತಿಳಿಸುತ್ತದೆ. ತಂತ್ರಾಂಶವು ವಿಶ್ವದ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದ್ದು, ಅಂಧರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಸಿದ್ದಲಿಂಗೇಶ್ವರ ಸಲಹೆ ನೀಡಿದರು.

ಸಿದ್ದಲಿಂಗೇಶ್ವರ್​​​ಗೆ ಬೆನ್ನು ತಟ್ಟಿದ ತಂದೆ- ತಾಯಿ: ಸಿದ್ದಲಿಂಗೇಶ್ವರ ತಾಯಿ ಸುವರ್ಣ ಇಂಗಳಗಿ ಮಾತನಾಡಿ, ”ದೃಷ್ಟಿ ದೋಷ ಇರುವ ಎಲ್ಲರೂ ಈ ಆಯಪ್​​ ಬಳಸಿಕೊಂಡು ತಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಗಳನ್ನು ಯಾರ ಸಹಾಯ ಇಲ್ಲದೇ ಸ್ವತಂತ್ರವಾಗಿ‌ ಮಾಡಬಹುದು. ಇನ್ನು ಈ ಆಪ್​ನಲ್ಲಿ ಕನ್ನಡ ಭಾಷೆ ಸೇರಿಸಲು ನಮ್ಮ ಮಗ ಸಾಕಷ್ಟು ಶ್ರಮವಹಿಸಿದ್ದಾರೆ. ಅದರಲ್ಲಿ ಆತ ಯಶಸ್ವಿಯಾಗಿದ್ದು ನಮಗೆ ಬಹಳಷ್ಟು ಖುಷಿ ತಂದಿದೆ” ಎಂದರು.

ತಂದೆ ಮಹಾಂತೇಶ ಇಂಗಳಗಿ ಪ್ರತಿಕ್ರಿಯಿಸಿ, ”ಬಾಲ್ಯದಿಂದಲೂ ನಮ್ಮ ಮಗ ಪ್ರತಿಭಾವಂತ. ಹೊಸ ವಿಷಯವನ್ನು ಕಲಿಯುವ ತುಡಿತ ಅವನಲ್ಲಿತ್ತು. ಈಗ ಅಂಧರಿಗೆ ಅನುಕೂಲ ಆಗುವ “ಲುಕ್‌ಔಟ್ ಅಸಿಸ್ಟೆಡ್ ವಿಷನ್” ತಂತ್ರಾಂಶದಲ್ಲಿ ಕನ್ನಡ ಭಾಷೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾನೆ. ಈ ಆಪ್ ಬಳಸಿಕೊಂಡು ಅಂಧರು ಮುನ್ನಡೆಯಬೇಕು ಎಂದು ಹಾರೈಸಿದರು. “ಲುಕ್‌ಔಟ್ ಅಸಿಸ್ಟೆಡ್ ವಿಷನ್” ಆಪ್ ದಿನನಿತ್ಯದ ತಮ್ಮ ಕಾರ್ಯಗಳಿಗೆ ಅಂಧರಿಗೆ ತುಂಬಾ ಸಹಕಾರಿ ಆಗಲಿದ್ದು, ಹೆಚ್ಚಿನ ಮಾಹಿತಿಗೆ ಸಿದ್ದಲಿಂಗೇಶ್ವರ ಇಂಗಳಗಿ ಅವರ ದೂರವಾಣಿ ಸಂಖ್ಯೆ- 8792639989 ಸಂಪರ್ಕಿಸಬಹುದು.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://m.dailyhunt.in/news/india/kannada/etvbhar9348944527258-epaper-etvbhkn/gugal+nondige+andha+vyaktiya+uttama+odanaata+lukout+asisted+vishan+aap+andha+kannadigarige+tumba+anukula+-newsid-n537683346?listname=newspaperLanding&topic=homenews&index=13&topicIndex=0&mode=pwa&action=click

Leave a Reply

Your email address will not be published. Required fields are marked *