ನೈಸ್ ರಸ್ತೆಯಲ್ಲಿ ಬೊಲೆರೋ ಪಲ್ಟಿಯಾಗಿ 16 ಮೇಕೆ ಬಲಿ.

ಬೆಂಗಳೂರು: ನೈಸ್ ರಸ್ತೆಯಲ್ಲಿ ಮೇಕೆ ತುಂಬಿದ್ದ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪರಿಣಾಮ 16 ಮೇಕೆಗಳು ಮೃತಪಟ್ಟಿವೆ.

ವಿಜಯಪುರ ಮೂಲದ ಚಾಲಕ ಶಿವಾನಂದ್‌ಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ವಿಜಯಪುರದಿಂದ 40 ಮೇಕೆ ತುಂಬಿಕೊಂಡು ಬೊಲೆರೋ ವಾಹನದಲ್ಲಿ ಚಾಲಕ ಶಿವಾನಂದ್, ತಮಿಳುನಾಡಿನ ಸೇಲಂಗೆ ಹೋಗುತ್ತಿದ್ದರು. ಮಧ್ಯಾಹ್ನ 1 ಗಂಟೆಯಲ್ಲಿ ಕೆಂಗೇರಿ ಸಮೀಪದ ನೈಸ್ ರಸ್ತೆ ಗಾಯತ್ರಿ ಕ್ರಷರ್ ಸಮೀಪದಲ್ಲಿ ಚಾಲಕ, ಏಕಾಏಕಿ ಬಲಕ್ಕೆ ವಾಹನವನ್ನು ತಿರುಗಿಸಿದಾಗ ಒಳಗಿದ್ದ ಮೇಕೆಗಳು ಒಂದೇ ಕಡೆ ಬಿದ್ದಿವೆ. ಇದರಿಂದ ಬೊಲೆರೋ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿ ಹುರುಳಿ ಬಿದ್ದಿದೆ.

ಪರಿಣಾಮ ಒಂದರ ಮೇಲೆ ಒಂದು ಮೇಕೆ ಬಿದ್ದು 16 ಸಾವನ್ನಪ್ಪಿವೆ. ವಿಷಯ ತಿಳಿದ ಕೆಂಗೇರಿ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಚಾಲಕನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಚಾಲಕನ ವಿರುದ್ಧ ಕೇಸ್ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Source: https://www.vijayavani.net/bolero-overturns-on-nice-road-killing-16-goats#:~:text=

 

Leave a Reply

Your email address will not be published. Required fields are marked *