ಪೋಷಕರಿಗೆ ಕರೆ ಮಾಡಿದ್ದಕ್ಕೆ, ಸಂಸ್ಕೃತ ಶಿಕ್ಷಕನಿಂದ ಬಾಲಕನ ಮೇಲೆ ಹಲ್ಲೆ!

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ವೇದಾಧ್ಯಯನ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬರು ಅಜ್ಜಿ ಕರೆ ಮಾಡಿದ್ದಕ್ಕೆ ಶಿಕ್ಷಕರೊಬ್ಬರು ಮನಸ್ಸೋಇಚ್ಛೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಚಳ್ಳಕೆರೆಯ ನಾಯಕನಹಟ್ಟಿ ಸಂಸ್ಕೃತ ವೇಧಾಧ್ಯಯನ ಶಾಲೆಯಲ್ಲಿ ವಿದ್ಯಾರ್ಥಿಯೋರ್ವ ಅಜ್ಜಿಗೆ ಕರೆ ಮಾಡಿದ್ದಾನೆ ಎಂದು ಆರೋಪಿಸಿ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ್ ಎಂಬುವವರು ಮಾರಣಾಂತಿಕ ಹಲ್ಲೆ ನಡೆಸಿದ್ದು, ವಿದ್ಯಾರ್ಥಿಯನ್ನ ಕಾಲಿಂದ ತುಳಿದು ಜಾಡಿಸಿ ಹೊಡೆದು ಹಲ್ಲೆ ನಡೆಸಲಾಗಿದೆ.

ತಪ್ಪಾಯಿತು ಬಿಟ್ಟು ಬಿಡಿ ಎಂದು ಕೈ ಮುಗಿದರೂ ಕೂಡ ಬಿಡದ ಶಿಕ್ಷಕ ಕಾಲಿನಿಂದ ಒದ್ದು ಅವಾಚ್ಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ನಾಯಕನಹಟ್ಟಿ ಗುರು ತಿಪ್ಪೇರುದ್ರ ಸ್ವಾಮಿ ದೇವಾಲಯದ ಸುಪರ್ಧಿಯ ಶಾಲೆಯಲ್ಲಿ ಇಂತಹ ಘಟನೆ ನಡೆದಿರುವ ವಿರುದ್ದ ವಿದ್ಯಾರ್ಥಿಯ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.


ಸದ್ಯ ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆದ ದೃಶ್ಯ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಲಾಗಿದ್ದು, ವಿದ್ಯಾರ್ಥಿಯ ಮೇಲಿನ ಹಲ್ಲೆಗೆ ಸಾರ್ವಜನಿಕ ವಲಯದಲ್ಲಿ ಅಸಮಧಾನ ವ್ಯಕ್ತವಾಗಿದ್ದು, ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ್ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ.


ಉತ್ತರ ಕರ್ನಾಟಕ ಮೂಲದ ವಿದ್ಯಾರ್ಥಿಯ ಮೇಲೆ ಶಿಕ್ಷಕ ದೌರ್ಜನ್ಯ ಎಸಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕ ವೀರೇಶ್ ನಾಪತ್ತೆಯಾಗಿದ್ದಾನೆ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Views: 69

Leave a Reply

Your email address will not be published. Required fields are marked *