ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್.​ಗವಾಯಿ ಪ್ರಮಾಣ ವಚನ ಸ್ವೀಕಾರ.

B R GAVAI 52ND CHIEF JUSTICE : ರಾಷ್ಟ್ರಪತಿ ಭವನದಲ್ಲಿ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಇಂದು ಭಾರತದ 52ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.

ನವದೆಹಲಿ: ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದರು.

ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ, ಸುಪ್ರೀಂ ಕೋರ್ಟ್ ಮಾಜಿ​​ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಬಳಿಕ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ನೇಮಕಗೊಂಡ ನ್ಯಾಯಮೂರ್ತಿ ಗವಾಯಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.

ಪ್ರಮಾಣ ವಚನ ಸ್ವೀಕರಿಸಿರುವ ಗವಾಯಿ ಅವರು ಇನ್ನೂ 6 ತಿಂಗಳ ಕಾಲ ಸುಪ್ರೀಂ ಕೋರ್ಟ್​​ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರದಲ್ಲಿರಲಿದ್ದರೆ. ನವೆಂಬರ್ 23, 2025 ರಂದು ಅವರು ನಿವೃತ್ತಿ ಹೊಂದಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪಾಧ್ಯಕ್ಷ ಜಗದೀಪ್ ಧನಕರ್, ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ನ್ಯಾಯಮೂರ್ತಿ ಗವಾಯಿ ಅವರ ಕುಟುಂಬ ಸದಸ್ಯರು, ಮಾಜಿ ಸಿಜೆಐ ಸಂಜೀವ್ ಖನ್ನಾ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಭಾಗವಹಿಸಿದ್ದರು.

ಗವಾಯಿ ಅವರ ಹಿನ್ನೆಲೆ: ನ್ಯಾಯಮೂರ್ತಿ ಗವಾಯಿ ಅವರು ಬಿಹಾರ, ಕೇರಳ ಮತ್ತು ಸಿಕ್ಕಿಂನ ಮಾಜಿ ರಾಜ್ಯಪಾಲರು ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ (ಗವಾಯಿ ಬಣ) ಹಿರಿಯ ನಾಯಕ ದಿವಂಗತ ಆರ್.ಎಸ್. ಗವಾಯಿ ಅವರ ಪುತ್ರ. ಅವರು ನವೆಂಬರ್ 24, 1960ರಂದು ಅಮರಾವತಿಯಲ್ಲಿ ಜನಿಸಿದರು. ಮಾರ್ಚ್ 16, 1985ರಂದು ವಕೀಲ ವೃತ್ತಿ ಆರಂಭಿಸಿದ ಅವರು 1987ರಿಂದ 1990ರ ವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ, 1990ರ ನಂತರ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದೆದುರು ವೃತ್ತಿ ಅಭ್ಯಾಸ ಮಾಡಿದರು.

ನಾಗ್ಪುರ ಪುರಸಭೆ, ಅಮರಾವತಿ ಪುರಸಭೆ ಮತ್ತು ಅಮರಾವತಿ ವಿಶ್ವವಿದ್ಯಾಲಯದ ಸ್ಥಾಯಿ ಸಲಹೆಗಾರರೂ ಆಗಿದ್ದರು. ಜತೆಗೆ SICOM, DCVL, ಇತ್ಯಾದಿ ವಿವಿಧ ಸ್ವಾಯತ್ತ ಸಂಸ್ಥೆಗಳು ಮತ್ತು ನಿಗಮಗಳು ಮತ್ತು ವಿದರ್ಭ ಪ್ರದೇಶದ ವಿವಿಧ ಪುರಸಭೆಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದರು.

ಆಗಸ್ಟ್ 1992ರಿಂದ ಜುಲೈ 1993ರ ವರೆಗೆ ಬಾಂಬೆಯ ನಾಗ್ಪುರ ಪೀಠದಲ್ಲಿರುವ ಹೈಕೋರ್ಟ್ ಆಫ್ ಜ್ಯುಡಿಕೇಚರ್‌ನಲ್ಲಿ ಸಹಾಯಕ ಸರ್ಕಾರಿ ವಕೀಲ ಮತ್ತು ಹೆಚ್ಚುವರಿ ಸಾರ್ವಜನಿಕ ಅಭಿಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ಜನವರಿ 17, 2000ರಂದು ನಾಗ್ಪುರ ಪೀಠಕ್ಕೆ ಸರ್ಕಾರಿ ವಕೀಲ ಮತ್ತು ಸಾರ್ವಜನಿಕ ಅಭಿಯೋಜಕರಾಗಿ ನೇಮಿಸಲಾಯಿತು. ನ್ಯಾಯಮೂರ್ತಿ ಗವಾಯಿ ಅವರಿಗೆ ನವೆಂಬರ್ 14, 2003ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಯಿತು.

ನವೆಂಬರ್ 12, 2005ರಂದು ಬಾಂಬೆ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳಾದರು. ಕಳೆದ ಆರು ವರ್ಷಗಳಲ್ಲಿ, ಅವರು ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಕಾನೂನು, ನಾಗರಿಕ ಕಾನೂನು, ಕ್ರಿಮಿನಲ್ ಕಾನೂನು, ವಾಣಿಜ್ಯ ವಿವಾದಗಳು, ಮಧ್ಯಸ್ಥಿಕೆ ಕಾನೂನು, ವಿದ್ಯುತ್ ಕಾನೂನು, ಶಿಕ್ಷಣ ವಿಷಯಗಳು, ಪರಿಸರ ಕಾನೂನು ಇತ್ಯಾದಿ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುವ ಸುಮಾರು 700 ಪೀಠಗಳ ಭಾಗವಾಗಿದ್ದರು.

ನ್ಯಾಯಮೂರ್ತಿ ಗವಾಯಿ ಅವರು ಕಾನೂನಿನ ನಿಯಮವನ್ನು ಎತ್ತಿಹಿಡಿಯುವ ಮತ್ತು ನಾಗರಿಕರ ಮೂಲಭೂತ ಹಕ್ಕುಗಳು, ಮಾನವ ಹಕ್ಕುಗಳು ಮತ್ತು ಕಾನೂನು ಹಕ್ಕುಗಳನ್ನು ರಕ್ಷಿಸುವ ವಿವಿಧ ವಿಷಯಗಳ ಕುರಿತು ಸಾಂವಿಧಾನಿಕ ಪೀಠದ ತೀರ್ಪುಗಳನ್ನು ಒಳಗೊಂಡಂತೆ ಸುಮಾರು 300 ತೀರ್ಪುಗಳನ್ನು ನೀಡಿದ್ದಾರೆ.

ಗವಾಯಿ ಅವರು ಉಲಾನ್‌ಬಾತರ್ (ಮಂಗೋಲಿಯಾ), ನ್ಯೂಯಾರ್ಕ್ (ಯುಎಸ್‌ಎ), ಕಾರ್ಡಿಫ್ (ಯುಕೆ) ಮತ್ತು ನೈರೋಬಿ (ಕೀನ್ಯಾ) ಗಳಲ್ಲಿ ನಡೆದ ವಿವಿಧ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದರು.

ETV Bharat

Leave a Reply

Your email address will not be published. Required fields are marked *