![](https://samagrasuddi.co.in/wp-content/uploads/2025/02/PHOTO-1-300x143.jpg)
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 01 : ಹನ್ನೆರಡನೆ ಶತಮಾನದಲ್ಲಿಯೇ ಕಾಯಕಕ್ಕೆ ಒತ್ತು ಕೊಟ್ಟಿದ್ದ ಮಡಿವಾಳ ಮಾಚಿದೇವ ಮನಸ್ಸಿನ ಕಲ್ಮಶ ತೊಳೆದು ಶುಭ್ರತೆ ಮೂಲಕ ಕಾಯಕವನ್ನು ಪ್ರತಿಪಾದಿಸಿದ್ದರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ
ಸಭಾಂಗಣದಲ್ಲಿ ಶನಿವಾರ ನಡೆದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಮಾಚಿದೇವ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ
ಮಾತನಾಡಿದರು.
ವಚನಗಳ ಸಂರಕ್ಷಕ ಮಡಿವಾಳ ಮಾಚಿದೇವ ಕಂದಾಚಾರ, ಮೂಢನಂಬಿಕೆಗಳ ನಿರ್ಮೂಲನೆಗೆ ಶ್ರಮಿಸಿದವರು
ಹನ್ನೆರಡನೆ ಶತಮಾನದಲ್ಲಿಯೇ ಕಾಯಕಕ್ಕೆ ಒತ್ತು ಕೊಟ್ಟಿದ್ದ ಮಡಿವಾಳ ಮಾಚಿದೇವ ಮನಸ್ಸಿನ ಕಲ್ಮಶ ತೊಳೆದು ಶುಭ್ರತೆ ಮೂಲಕ
ಕಾಯಕವನ್ನು ಪ್ರತಿಪಾದಿಸಿದ್ದರು. ಸರ್ಕಾರ ಸಾಕಷ್ಟು ಮೀಸಲಾತಿಯನ್ನು ಕೊಟ್ಟಿದೆ. ಎಲ್ಲವನ್ನು ಬಳಸಿಕೊಂಡು ಮಕ್ಕಳನ್ನು
ಶಿಕ್ಷಣವಂತರನ್ನಾಗಿ ಮಾಡಿ ಎಂದು ಮಡಿವಾಳ ಜನಾಂಗಕ್ಕೆ ಕರೆ ನೀಡಿ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಮಾತ್ರ ಜೀವನದಲ್ಲಿ
ಬದಲಾವಣೆ ಕಂಡುಕೊಳ್ಳಲು ಸಾಧ್ಯ. ಶಿಕ್ಷಣದ ಜೊತೆ ಮಕ್ಕಳಿಗೆ ಸಂಸ್ಕಾರ ಕಲಿಸುವ ಹೊಣೆಗಾರಿಕೆ ಪೋಷಕರುಗಳ ಮೇಲಿದೆ ಎಂದು
ಹೇಳಿದರು.
ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಿ.ರಾಮಜ್ಜ ಮಾತನಾಡಿ ಹದಿನೆಂಟು ರಾಜ್ಯಗಳಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ
ಸೇರಿಸಲಾಗಿದೆ. ಕರ್ನಾಟಕದಲ್ಲಿಯೂ ನಮ್ಮ ಜನಾಂಗವನ್ನು ಎಸ್ಸಿ.ಗೆ ಸೇರಿಸಬೇಕೆಂಬುದು ನಮ್ಮ ಬಹುದಿನಗಳ ಬೇಡಿಕೆ.
ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರ ಆಸ್ಥಾನದಲ್ಲಿ ಮಡಿವಾಳ ಮಾಚಿದೇವರಿಗೆ ವಿಶೇಷ ಸ್ಥಾನಮಾನವಿತ್ತು. ಬಸವಾದಿಶರಣರ
ಬಟ್ಟೆಗಳನ್ನಷ್ಟೆ ಅಲ್ಲ ಮನಸ್ಸುಗಳನ್ನು ಶುಭ್ರಗೊಳಿಸುತ್ತಿದ್ದರು. ವಚನಗಳ ಸಂರಕ್ಷಕ ಮಡಿವಾಳ ಮಾಚಿದೇವರ ಇತಿಹಾಸವನ್ನು ನಮ್ಮ
ಸಮಾಜ ತಿಳಿದುಕೊಂಡು ಸಂಘಟಿತರಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಮಕ್ಕಳನ್ನು
ಶಿಕ್ಷಣವಂತರನ್ನಾಗಿಸಿ ಎಂದು ಮನವಿ ಮಾಡಿದರು.
ಇತಿಹಾಸ ಸಂಶೋಧಕ ಎನ್.ಎಸ್.ಮಹಂತೇಶ್ ಉಪನ್ಯಾಸ ನೀಡಿ 21 ನೇ ಶತಮಾನದಲ್ಲಿ ವಚನಗಳು ಇನ್ನು ಉಳಿದಿದೆಯೆಂದರೆ
ಅದಕ್ಕೆ ಮಡಿವಾಳ ಮಾಚಿದೇವರು ಕಾರಣ. ಕ್ರಾಂತಿಕಾರಿ ಬಸವಣ್ಣನವರ ಮೂಲಕ ವಚನ ಸಾಹಿತ್ಯ ಪ್ರಬುದ್ದಕ್ಕೆ ಬಂದಿದೆ. ಹನ್ನೆರಡನೆ
ಶತಮಾನದಲ್ಲಿ ಮಾಚಿದೇವರ ವ್ಯಕ್ತಿತ್ವ ದೊಡ್ಡದು. ಬದುಕಿನ ಕೆಲವೊಂದು ಆಯಾಮಗಳನ್ನು ನೋಡಿ ಮಡಿವಾಳ ಮಾಚಿದೇವನನ್ನು
ವೀರಭದ್ರ ಅವತಾರಿ ಅಂತಲೂ ಕರೆಯಲಾಗುತ್ತದೆ. ಬಸವಣ್ಣನೊಡನೆ ಅನ್ಯೋನ್ಯವಾದ ಸಂಬಂಧವಿಟ್ಟುಕೊಂಡಿದ್ದ ಮಡಿವಾಳ
ಮಾಚಿದೇವರು ಬಸವಣ್ಣನವರಿಗಿಂತ ಹತ್ತು ಹನ್ನೆರಡು ವರ್ಷ ದೊಡ್ಡವರಾಗಿದ್ದ ಕಾರಣ ಗೌರವದಿಂದ ಕಾಣಲಾಗುತ್ತಿತ್ತು ಎಂದರು.
ನಗರಸಭೆ ಪೌರಾಯುಕ್ತೆ ರೇಣುಕ ಮಾತನಾಡುತ್ತ ಮತ್ತೊಬ್ಬರಿಂದ ನೆರವನ್ನು ನಿರೀಕ್ಷಿಸುವ ಬದಲು ಶಿಕ್ಷಣ ಮತ್ತು ಕಠಿಣ
ಪರಿಶ್ರಮದಿಂದ ನಿಮ್ಮ ಭವಿಷ್ಯವನ್ನು ನೀವುಗಳೆ ರೂಪಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಮಾತ್ರ ಉನ್ನತ
ಹುದ್ದೆಗಳನ್ನು ಅಲಂಕರಿಸಬಹುದು. ಮಡಿವಾಳ ಮಾಚಿದೇವರ ಕಾಯಕ ಪ್ರಜ್ಞೆ, ವಿಚಾರಗಳನ್ನು ತಿಳಿದುಕೊಂಡು ಅವರು ಹಾಕಿಕೊಟ್ಟ
ಮಾರ್ಗದರ್ಶನದಲ್ಲಿ ಮಡಿವಾಳ ಜನಾಂಗ ಸಾಗಬೇಕಿದೆ. ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿವೆ. ಎಲ್ಲವನ್ನು ಬಳಸಿಕೊಂಡು
ಮಕ್ಕಳಿಗೆ ಶಿಕ್ಷಣ ಕೊಡಿಸಿ. ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಶಿಕ್ಷಣಕ್ಕೆ ಒತ್ತು
ಕೊಡಿ ಎಂದು ವಿನಂತಿಸಿದರು.
ಶಿವಲಿಂಗಪ್ಪ, ಪರಶುರಾಮ್, ರಂಗಮ್ಮ, ವಿನೋದಮ್ಮ, ಬಿ.ಲಕ್ಷ್ಮಣ್, ರುದ್ರೇಶ್, ನಗರಸಭೆ ಮಾಜಿ ಸದಸ್ಯ ಸಿ.ಟಿ.ರಾಜೇಶ್, ಕನ್ನಡ
ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ್ ಸೇರಿದಂತೆ ಮಡಿವಾಳ ಸಮಾಜದ ಅನೇಕ ಮುಖಂಡರುಗಳು
ಜಯಂತಿಯಲ್ಲಿ ಭಾಗವಹಿಸಿದ್ದರು.