Akash Madhwal: 5 ರನ್​ಗೆ 5 ವಿಕೆಟ್: ಆಕಾಶ್ ಮಧ್ವಾಲ್ ಬೌಲಿಂಗ್ ಕಂಡು ಥ್ರಿಲ್ ಆದ ಬುಮ್ರಾ, ಕುಂಬ್ಳೆ

Akash Madhwal: 5 ರನ್​ಗೆ 5 ವಿಕೆಟ್: ಆಕಾಶ್ ಮಧ್ವಾಲ್ ಬೌಲಿಂಗ್ ಕಂಡು ಥ್ರಿಲ್ ಆದ ಬುಮ್ರಾ, ಕುಂಬ್ಳೆ

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023ರ (IPL 2023) ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ (LSG vs MI) ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ 2ನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದರೆ, ಲಖನೌ ಟೂರ್ನಿಯಿಂದ ಹೊರಬಿದ್ದಿದೆ. ಮೇ 26 ರಂದು ನಡೆಯಲಿರುವ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ (GT vs MI) ತಂಡಗಳು ಮುಖಾಮುಖಿಯಾಗಲಿದೆ. ಇದರಲ್ಲಿ ಗೆಲ್ಲುವ ತಂಡ ಮೇ 28 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ.

ಎಲ್​ಎಸ್​ಜಿ ವಿರುದ್ಧ ರೋಹಿತ್ ಪಡೆ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿ ಬರೋಬ್ಬರಿ 81 ರನ್​ಗಳ ಜಯ ಸಾಧಿಸಿತು. ಅದರಲ್ಲೂ ಮುಂಬೈ ಬೌಲರ್ 29 ವರ್ಷ ಪ್ರಾಯದ ಅಕಾಶ್ ಮಧ್ವಾಲ್ 5 ರನ್​ಗೆ 5 ವಿಕೆಟ್ ಪಡೆದು ಮಿಂಚಿದರು. ಪ್ರೇರಕ್‌ ಮಂಕಡ್‌, ನಿಕೋಲಸ್‌ ಪೂರನ್‌, ಆಯುಷ್‌ ಬದೋನಿ, ರವಿ ಬಿಷ್ಣೋಯ್‌ ಹಾಗೂ ಮೊಹ್ಸೀನ್‌ ಖಾನ್‌ ಸೇರಿ 5 ವಿಕೆಟ್‌ಗಳನ್ನು ಕಬಳಿಸಿ ಸಾಧನೆ ಗೈದರು. ಈ ಮೂಲಕ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ಒಳಗೊಂಡ ಎಲೈಟ್‌ ಕ್ಲಬ್‌ಗೆ ಸೇರಿದರು.

IPL 2023: ಔಟಾ ಅಥವಾ ನಾಟೌಟಾ? ಹೊಸ ಚರ್ಚೆಗೆ ಕಾರಣವಾದ ಅಂಪೈರ್ ತೀರ್ಪು

ಇದೀಗ 5 ವಿಕೆಟ್‌ ಸಾಧನೆ ಮಾಡಿದ ಬೆನ್ನಲ್ಲೆ ಆಕಾಶ್‌ ಮಧ್ವಾಲ್ ಅವರನ್ನು ಹಾಲಿ ಕ್ರಿಕೆಟಿಗರು ಹಾಗೂ ಮಾಜಿ ಕ್ರಿಕೆಟಿಗರು ಹಾಡಿಹೊಗಳಿದ್ದಾರೆ. “ಹೊಸಬರು ಈರೀತಿಯ ಉತ್ತಮ ಪ್ರದರ್ಶನ ತೋರುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ. ಅನುಭವಿಗಳ ಪಾಲಿಗೆ ಈ ಆವೃತ್ತಿಯು ಅದ್ಬುತವಾಗಿದ್ದು, ಹೊಸಬರು ಕೂಡ ದೊಡ್ಡ ಮೈಲುಗಲ್ಲು ಸ್ಥಾಪಿಸಿದ್ದಾರೆ,” ಎಂದು ವಿರೇಂದ್ರ ಸೆಹ್ವಾಗ್ ತಮ್ಮ ಟ್ವಿಟ್ಟರ್​ನಲ್ಲಿ ಬರೆದಿದ್ದಾರೆ. ಅಂತೆಯೆ, “ಆಕಾಶ್‌ ಮಧ್ವಾಲ್‌ ಅವರಿಂದ ಎಂಥಾ ಸ್ಪೆಲ್‌. ಅದ್ಭುತ ಗೆಲುವಿಗಾಗಿ ಮುಂಬೈ ಇಂಡಿಯನ್ಸ್‌ಗೆ ಅಭಿನಂದನೆ,” ಎಂದು ಜಸ್‌ಪ್ರೀತ್‌ ಬುಮ್ರಾ ಟ್ವೀಟ್‌ ಮಾಡಿದ್ದಾರೆ. ಅನಿಲ್‌ ಕುಂಬ್ಳೆ ಅವರು 5 ರನ್​ಗೆ 5 ವಿಕೆಟ್ ಪಡೆದವರ ಕ್ಲಬ್​ಗೆ ಸ್ವಾಗತ ಎಂದು ಹೇಳಿದ್ದಾರೆ.

ಇನ್ನು ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ಕೂಡ ಮಧ್ವಾಲ್ ಆಟವನ್ನು ಕೊಂಡಾಡಿದ್ದಾರೆ. “ಆಕಾಶ್ 2022ರಲ್ಲಿ ನಮ್ಮ ತಂಡದಲ್ಲಿ ಸಹಾಯಕ ಬೌಲರ್ ಆಗಿದ್ದರು. ಆದರೆ, ಪ್ಲೇಯಿಂಗ್ XIನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಸಿಕ್ಕ ಅವಕಾಶವನ್ನು ಉಪಯೋಗಿಸಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಅನುಭವಿ ವೇಗಿ ಜೋಫ್ರ ಆರ್ಚರ್ ತಂಡ ತೊರೆದ ಮೇಲೆ, ಮಧ್ವಾಲ್ ಅವರು ತಂಡಕ್ಕೆ ಆಸರೆಯಾಗಲಿದ್ದಾರೆ. ಬ್ಯಾಂಕೆಡ್‌ನಲ್ಲಿ ಬೌಲ್‌ ಮಾಡಲು ಒಬ್ಬ ಬೌಲರ್ ಅವಶ್ಯಕತೆ ಇತ್ತು. ಈ ಕಾರ್ಯವನ್ನು ಮಧ್ವಾಲ್ ನಿಭಾಯಿಸಿದ್ದಾರೆ,” ರೋಹಿತ್ ಶರ್ಮಾ ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/jasprit-bumrah-anil-kumble-and-virender-sehwag-were-thrilled-with-the-performance-of-akash-madhwal-in-lsg-vs-mi-match-vb-586523.html

Leave a Reply

Your email address will not be published. Required fields are marked *