ಆ.27ರ KPSC ಪರೀಕ್ಷೆ, ಅಭ್ಯರ್ಥಿಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ.

ಸುಮಾರು 2,10,910 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಕುರಿತು ಪುಷ್ಪ ವಿ. ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ, ಸಾರಿಗೆ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಕರ್ನಾಟಕ ಲೋಕಸೇವಾ ಆಯೋಗ ಆಯೋಜಿಸಿರುವ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಸಾರಿಗೆ ಸೌಲಭ್ಯ ಒದಗಿಸುವ ಕುರಿತು ಎಂಬ ವಿಷಯ ಒಳಗೊಂಡಿದ್ದು, ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳ ಪತ್ರವನ್ನು ಉಲ್ಲೇಖಿಸಲಾಗಿದೆ.

ಹೆಚ್ಚುವರಿ ಬಸ್ ಓಡಿಸುವ ಕುರಿತು ಕ್ರಮ ಕೈಗೊಳ್ಳಲು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು. ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ. ವ್ಯವಸ್ಥಾಪಕ ನಿರ್ದೇಶಕರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ ಇವರಿಗೆ ಸೂಚನೆ ನೀಡಲಾಗಿದೆ.

ಆದೇಶದ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಆಯೋಜಿಸಿರುವ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್‌ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಪೂರ್ವಭಾವಿ ಪರೀಕ್ಷೆಯನ್ನು ದಿನಾಂಕ 27.08.2024ರಂದು ನಡೆಸಲಾಗುತ್ತಿದೆ.

ಸದರಿ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳಿಗೆ ಹಾಜರಾಗಲು ಅನುವಾಗುವಂತೆ ಬಸ್‌ ಸೌಲಭ್ಯ ಒದಗಿಸುವ ಕುರಿತು ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಅವರು ಕೋರಿರುತ್ತಾರೆ. ಈ ಬಗ್ಗೆ ಕೂಡಲೇ ಪರಿಶೀಲಿಸಿ, ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳು ತಲುಪಲು ಅನುವಾಗುವಂತೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಲು ಜರೂರಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪೂರ್ವಭಾವಿ ಪರೀಕ್ಷೆ ನಡೆಯುವ ಕೇಂದ್ರಗಳು ಬೇರೆ-ಬೇರೆ ಜಿಲ್ಲೆಗಳಲ್ಲಿ ಇವೆ. ಆದ್ದರಿಂದ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅನುಕೂಲವಾಗುವಂತೆ ಹೆಚ್ಚುವರಿ ಬಸ್, ರೈಲಿನ ವ್ಯವಸ್ಥೆ ಮಾಡಬೇಕು ಎಂದು ಅಭ್ಯರ್ಥಿಗಳು ಸರ್ಕಾರವನ್ನು ಒತ್ತಾಯಿಸಿದ್ದರು. 384 ಕೆಎಎಸ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಮುಂದೂಡಬೇಕು ಎಂಬ ಒತ್ತಾಯವನ್ನು ಮಾಡಲಾಗುತ್ತಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರೀಕ್ಷೆಯನ್ನು ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸೋಮವಾರ ಬೆಳಗ್ಗೆ ಕೆಪಿಎಸ್‌ಸಿ ಪರೀಕ್ಷೆ ವೇಳಾಪಟ್ಟಿಯಲ್ಲಿಯೂ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿಂದೆ ಕೆಪಿಎಸ್‌ಸಿ ಪ್ರಕಟಿಸಿದ ವೇಳಾಪಟ್ಟಿಯಂತೆ ಮಂಗಳವಾರ ಬೆಳಗ್ಗೆ ಪತ್ರಿಕೆ 1 ಮತ್ತು ಮಧ್ಯಾಹ್ನ ಪತ್ರಿಕೆ-2ರ ಪರೀಕ್ಷೆಗಳು ನಡೆಯಲಿವೆ. ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜೊತೆ ವಸ್ತ್ರ ಸಂಹಿತೆ ಪಾಲನೆ ಮಾಡಿಕೊಂಡು ಪರೀಕ್ಷೆಗೆ ತೆರೆಳಬೇಕಿದೆ.

ಮಂಗಳವಾರ ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ಪತ್ರಿಕೆ-1, ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಪತ್ರಿಕೆ-2ರ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ನಡೆಯುವ 214 ಸರ್ಕಾರಿ, 189 ಅನುದಾನಿತ ಮತ್ತು 161 ಶಾಸಗಿ ಶಾಲಾ-ಕಾಲೇಜುಗಳು ಸೇರಿದಂತೆ, ಒಟ್ಟಾರೆ 564 ಪರೀಕ್ಷಾ ಉಪ ಕೇಂದ್ರಗಳಿಗೆ, ಅನ್ವಯಿಸಿದಂತೆ ಒಂದು ದಿನದ ವಿಶೇಷ/ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ಬರೆಯುವ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಸಾಂದರ್ಭಿಕ ರಜೆಯನ್ನು ಸಹ ನೀಡಲಾಗಿದೆ.

Leave a Reply

Your email address will not be published. Required fields are marked *