4000 ರೂ.ವರೆಗೆ ತಲುಪಿದ ಟಿಕೆಟ್‌ ದರ; ಯುಗಾದಿ, ರಂಜಾನ್‌ಗೆ ಊರಿಗೆ ಹೊರಟವರಿಗೆ ಬಸ್‌ ದರ ಏರಿಕೆ ಶಾಕ್‌!

ಯುಗಾದಿ, ರಂಜಾನ್‌ ಹಬ್ಬದ ರಜೆ, ಬೇಸಿಗೆ ರಜೆ ಕಾರಣ ಜನರು ಬೆಂಗಳೂರಿನಿಂದ ಊರಿನತ್ತ ಪ್ರಯಾಣಿಸುತ್ತಿದ್ದಾರೆ. ಇದನ್ನು ಬಳಸಿಕೊಂಡು ಖಾಸಗಿ ಬಸ್‌ಗಳು ದರ ಹೆಚ್ಚಿಸಿ ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿವೆ. ಸರ್ಕಾರಿ ದ್ವಿಚಕ್ರ ವಾಹನ ದರ ಹೆಚ್ಚಳವನ್ನು ಖಾಸಗಿ ಬಸ್‌ ಮಾಲೀಕರು ಸಮರ್ಥನೆ ಮಾಡುತ್ತಿದ್ದಾರೆ. ಕೆಲವು ಊರುಗಳಿಗೆ 4,000 ರೂ.ವರೆಗೆ ಟಿಕೆಟ್‌ ದರ ಏರಿಕೆಯಾಗಿದ್ದು, ಸರಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು: ವಾರಾಂತ್ಯದ ಜತೆಗೆ, ಯುಗಾದಿ, ರಂಜಾನ್‌ ಹಬ್ಬದ ರಜೆಗಾಗಿ ಬೆಂಗಳೂರಿನಿಂದ ಊರಿನತ್ತ ಹೊರಟವರ ಸಂಖ್ಯೆ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ಗಳು ಟಿಕೆಟ್‌ ದರವನ್ನು ಶೇ. 50-60ರಷ್ಟು ಹೆಚ್ಚಿಸಿ, ಪ್ರಯಾಣಿಕರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿವೆ.

ಹಬ್ಬದ ಜತೆಗೆ, ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಆರಂಭವಾಗಿದೆ. ಹೀಗಾಗಿ, ಬೆಂಗಳೂರಿನಿಂದ ತಮ್ಮ ಊರಿಗೆ ಪ್ರಯಾಣ, ಪ್ರವಾಸಕ್ಕೆ ಹೋಗುವ ಪ್ರಯಾಣಿಕರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಶನಿವಾರ (ಮಾರ್ಚ್ 29) ಯುಗಾದಿ ಹಬ್ಬದ ಅಮಾವಾಸ್ಯೆ, ಭಾನುವಾರ ಚಾಂದ್ರಮಾನ ಯುಗಾದಿ, ಸೋಮವಾರ ರಂಜಾನ್‌. ಹೀಗೆ ಒಟ್ಟು ಮೂರು ದಿನಗಳ ಕಾಲ ಸಾಲು ರಜೆಗಳಿವೆ. ಮಾರ್ಚ್ 28ರ ಶುಕ್ರವಾರ ರಾತ್ರಿ ಊರಿಗೆ ತೆರಳಲು ಯೋಜನೆ ಹಾಕಿಕೊಂಡವರು ರೈಲು, ಸರಕಾರಿ ಬಸ್‌ಗಳಲ್ಲಿ ಹೋಗಲು ಸಾಧ್ಯವಾಗದವರು ಖಾಸಗಿ ಬಸ್‌ಗಳಲ್ಲಿ ದುಪ್ಪಟ್ಟು ದರ ಕೊಟ್ಟು ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ 500-650 ರೂ.ನಷ್ಟಿದ್ದ ಖಾಸಗಿ ಬಸ್‌ಗಳ ದರವೀಗ 1000 ರೂ.ನಿಂದ 2000 ರೂ.ವರೆಗೆ ಏರಿಕೆಯಾಗಿದೆ. ಮಂಗಳೂರಿಗೆ 650 ರೂ.ನಿಂದ 1000 ರೂ.ವರೆಗೆ ಇದ್ದ ದರ 2200 ವರೆಗೆ ತಲುಪಿದೆ. ಬೆಂಗಳೂರಿನಿಂದ ಬೆಳಗಾವಿಗೆ ಸಾಮಾನ್ಯ ದಿನಗಳಲ್ಲಿ 920 ರೂ.ನಿಂದ 1500 ರೂ.ವರೆಗಿದ್ದ ದರವೀಗ 4000 ರೂ.ವರೆಗೆ ಏರಿಕೆ ಮಾಡಲಾಗಿದೆ.

ಪ್ರತಿ ವರ್ಷ ಹಬ್ಬಕ್ಕೆಂದು ಊರಿಗೆ ಮುಖ ಮಾಡುವ ಜನರಿಂದ ಖಾಸಗಿ ಬಸ್‌ಗಳು ಹಣ ಸುಲಿಗೆ ಮಾಡುತ್ತಿವೆ. ಆದರೂ, ತನಗೂ, ದುಪ್ಪಟ್ಟು ದರ ಏರಿಕೆಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಮಾಡಿದಂತೆಯೇ ಈ ಬಾರಿಯೂ ದರ ಏರಿಕೆ ಮಾಡಿದ್ದು, ದುಪ್ಪಟ್ಟಾಗಿಲ್ಲ. ಶೇ. 50ರಿಂದ 60 ರಷ್ಟು ಮಾತ್ರ ಏರಿಕೆ ಮಾಡಿದ್ದೇವೆ. ರಾಜ್ಯ ಸರಕಾರ ಈ ಬಾರಿಯೂ ಬಜೆಟ್‌ನಲ್ಲಿ ಖಾಸಗಿ ಬಸ್‌ನವರಿಗೆ ಒಂದು ರೂಪಾಯಿ ಕೂಡ ಮೀಸಲಿಟ್ಟಿಲ್ಲ. ಶಕ್ತಿ ಯೋಜನೆ ಜಾರಿಯಾದಾಗಿಂದ ಖಾಸಗಿ ಬಸ್‌ ಮಾಲೀಕರು ದೊಡ್ಡ ನಷ್ಟ ಎದುರಿಸುತ್ತಿದ್ದಾರೆ. ರಸ್ತೆ ತೆರಿಗೆ ಶುಲ್ಕ, ವಿಮೆ, ಹೊಸ ಬಸ್‌ಗಳ ಬೆಲೆ, ಬಸ್‌ಗಳ ಬಿಡಿಭಾಗಗಳೂ ಸೇರಿದಂತೆ ಪ್ರತಿಯೊಂದರ ದರವೂ ಹೆಚ್ಚಾಗಿದೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂದು ಇತ್ತೀಚೆಗಷ್ಟೆ ಸರಕಾರಿ ಸಾರಿಗೆ ಬಸ್‌ಗಳ ಟಿಕೆಟ್‌ ಹೆಚ್ಚಿಸಲಾಗಿದೆ. ಹಾಗಿರುವಾಗ ಖಾಸಗಿ ಬಸ್‌ಗಳು ಮಾತ್ರ ದರ ಹೆಚ್ಚಿಸಬಾರದು ಎಂದರೆ ಇದು ಯಾವ ನ್ಯಾಯ? ಆದ್ದರಿಂದಲೇ ನಾವು ಹಬ್ಬದ ಸಮಯದಲ್ಲಿ ದರ ಏರಿಕೆ ಮಾಡಿದ್ದೇವೆ ಎಂದ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್‌ ಶರ್ಮಾ, ದರ ಏರಿಕೆ ಕ್ರಮ ಸಮರ್ಥಿಸಿಕೊಂಡರು.

Source: Vijaya karnataka

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *