UPI ATM: ಕ್ಯೂರ್​ ಕೋಡ್​ ಸ್ಕ್ಯಾನ್​ ಮಾಡಿದ್ರೆ ಸಾಕು.. ಕಾರ್ಡ್​ ಇಲ್ಲದೇ ಎಟಿಎಂನಿಂದ ಹಣ ಪಡೆಯಬಹುದು!

ಮುಂದಿನ ದಿನಗಳಲ್ಲಿ ಯುಪಿಐ ಆಧಾರಿತ ಸೇವೆ ಗ್ರಾಹಕರಿಗೆ ಸಿಗಲಿದೆ. UPI ಯೊಂದಿಗೆ ನೀವು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಅಗತ್ಯವಿಲ್ಲದೇ ಎಟಿಎಂಗಳಿಂದ ತಕ್ಷಣವೇ ಹಣವನ್ನು ತೆಗೆದುಕೊಳ್ಳಬಹುದು.

ಮುಂಬೈ(ಮಹಾರಾಷ್ಟ್ರ): ದೇಶದ ಎಟಿಎಂಗಳಲ್ಲಿನ ಕಾರ್ಡ್‌ಗಳ ಗೊಂದಲಕ್ಕೆ ಬ್ರೇಕ್​ ಬೀಳಲಿದೆ.

ಕಾರ್ಡ್ ಇಲ್ಲದೆಯೂ ಕೇವಲ ಫೋನ್ ಮೂಲಕ ಹಣ ತೆಗೆಯುವ ದಿನಗಳು ಹತ್ತಿರವಾಗಲಿವೆ. ಮುಂಬೈನಲ್ಲಿ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಾಗಿದೆ. ಜಪಾನ್‌ನ ಹಿಟಾಚಿ ಪಾವತಿ ಸೇವೆಗಳು ದೇಶದಲ್ಲಿ ಮೊದಲ UPI-ATM ಅನ್ನು ಪರಿಚಯಿಸಿದೆ. ‘ಹಿಟಾಚಿ ಮನಿಸ್ಪಾಟ್ ಎಟಿಎಂ’ ಹೆಸರಿನಲ್ಲಿ ಸ್ಥಾಪಿಸಲಾಗಿದೆ.

ಸೆಪ್ಟೆಂಬರ್ 5 ರಂದು ಮುಂಬೈನಲ್ಲಿ ನಡೆದ ‘ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2023’ ನಲ್ಲಿ ಅನಾವರಣಗೊಳಿಸಲಾಯಿತು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಕ್ರಮೇಣ ಇವುಗಳನ್ನು ಇತರ ಪ್ರದೇಶಗಳಿಗೂ ವಿಸ್ತರಿಸುವುದಾಗಿ ಕಂಪನಿ ತಿಳಿಸಿದೆ. ಇನ್ಮುಂದೆ, ನಿಮ್ಮ ಫೋನ್‌ನಲ್ಲಿರುವ UPI ಅಪ್ಲಿಕೇಶನ್‌ಗಳ ಸಹಾಯದಿಂದ ನೀವು ಎಟಿಎಂಗಳಿಂದ ಹಣವನ್ನು ಪಡೆದುಕೊಳ್ಳಬಹುದಾಗಿದೆ.

UPI-ATM ನಿಂದ ವಿತ್​ಡ್ರಾ ಹೇಗೆ?: UPI-ATM ಬಳಸುವುದು ತುಂಬಾ ಸುಲಭ. ಇದು ಹೆಚ್ಚು ಸುರಕ್ಷಿತವಾಗಿದೆ ಎಂದು ಹಿಟಾಚಿ ಪೇಮೆಂಟ್ ಸರ್ವಿಸಸ್ ಸಿಇಒ ಸುಮಿಲ್ ವಿಕುಮ್ಸೆ ಹೇಳಿದ್ದಾರೆ. ಈ ಯುಪಿಐ ಮೂಲಕ ಎಟಿಎಂನಿಂದ ಹಣ ಡ್ರಾ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ..

* ATM ಸ್ಕ್ರೀನ್​ ಮೇಲೆ ‘UPI ಕಾರ್ಡ್‌ಲೆಸ್ ಕ್ಯಾಶ್’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ..

* ನೀವು ವಿತ್​ಡ್ರಾ ಮಾಡಿಕೊಳ್ಳಬೇಕಾಗಿರುವ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಿ..

* ಆಗ ಎಟಿಎಂ ಸ್ಕ್ರೀನ್​ ಮೇಲೆ ತಕ್ಷಣವೇ ನಿಮಗೊಂದು QR ಕೋಡ್ ಕಾಣಿಸುತ್ತದೆ..

* ಫೋನ್‌ನಲ್ಲಿರುವ UPI ಆಧಾರಿತ ಅಪ್ಲಿಕೇಶನ್‌ನೊಂದಿಗೆ ಅದನ್ನು ಸ್ಕ್ಯಾನ್ ಮಾಡಬೇಕು..

* ನಿಮ್ಮ ವಹಿವಾಟನ್ನು ಖಚಿತಪಡಿಸಲು ಅಪ್ಲಿಕೇಶನ್‌ನಲ್ಲಿ UPI ಪಿನ್ ನಮೂದಿಸಬೇಕು..

* ಪರಿಶೀಲನೆ ಮುಗಿದ ತಕ್ಷಣ ಎಟಿಎಂ ಯಂತ್ರದಿಂದ ಹಣ ಹೊರಬರುತ್ತದೆ..

* ಬಳಿಕ ನಿಮ್ಮ ವಹಿವಾಟು ಯಶಸ್ವಿಯಾಗಿದೆ ಎಂಬ ಸಂದೇಶವೂ ಆಯಪ್‌ನಲ್ಲಿ ಕಂಡು ಬರುತ್ತದೆ..

ಈಗಾಗಲೇ ಕಾರ್ಡ್‌ಲೆಸ್ ವಿತ್​ಡ್ರಾ ಇಲ್ಲವೇ?: ಈಗಾಗಲೇ ಕೆಲವು ಬ್ಯಾಂಕ್​ಗಳು ಎಟಿಎಂಗಳಲ್ಲಿ ಕಾರ್ಡ್ ಇಲ್ಲದೇ ಹಣ ಡ್ರಾ ಮಾಡುವ ಸೌಲಭ್ಯ ಒದಗಿಸುತ್ತಿವೆ. ಯುಪಿಐ-ಎಟಿಎಂ ಕೂಡ ಕಾರ್ಡ್​​​ಲೆಸ್ ಹಣ ವಿತ್​ಡ್ರಾ ಮಾಡುವ ಮಾರ್ಗವಾಗಿದೆ. ಆದರೆ, ಸಾಮಾನ್ಯ ಕಾರ್ಡ್ ರಹಿತ ವಹಿವಾಟಿನಲ್ಲಿ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿಯನ್ನು ನಮೂದಿಸಿ ವಹಿವಾಟನ್ನು ದೃಢೀಕರಿಸಬೇಕು. ಈ ಹಿನ್ನೆಲೆ ಕೆಲ ಪ್ರಕರಣಗಳಲ್ಲಿ ವಂಚನೆ ನಡೆಯುವ ಸಾಧ್ಯತೆ ಇದೆ. ಆದರೆ, ಯುಪಿಐ ಎಟಿಎಂ ಹಾಗಲ್ಲ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನಿಮ್ಮ ಪಿನ್ ನಂಬರ್ ನಮೂದಿಸಿದರೆ ಮಾತ್ರ ಹಣ ಹೊರಬರುತ್ತದೆ. ತಮ್ಮ ಫೋನ್‌ನಲ್ಲಿ UPI ಅಪ್ಲಿಕೇಶನ್ ಹೊಂದಿರುವ ಯಾರಾದರೂ ಈ ಸೌಲಭ್ಯವನ್ನು ಬಳಸಬಹುದು. ಹಿಟಾಚಿ ಮನಿಸ್ಪಾಟ್ ಎಟಿಎಂವೊಂದು ವೈಟ್​ ಲೇಬಲ್ ಎಟಿಎಂ ಆಗಿದೆ. ಅಂದರೆ ಬ್ಯಾಂಕಿಂಗ್​ಯೇತರ ಸಂಸ್ಥೆಗಳು ನಿರ್ವಹಿಸುತ್ತವೆ.

ಇದು ಬ್ಯಾಂಕಿಂಗ್ ಸೇವೆಗಳಲ್ಲಿ ಮತ್ತೊಂದು ಮೈಲಿಗಲ್ಲು ಗುರುತಿಸುತ್ತದೆ. ಕಾರ್ಡ್‌ನ ಅಗತ್ಯವಿಲ್ಲದೆಯೇ ದೇಶದ ದೂರದ ಪ್ರದೇಶಗಳಲ್ಲಿಯೂ ನಗದು ಪಡೆಯಲು ಈ ಹೊಸ ವ್ಯವಸ್ಥೆ ಅನುಕೂಲವಾಗಲಿದೆ ಎಂದು ಎನ್‌ಪಿಸಿಐ ಹೇಳಿದೆ.

ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಯುಪಿಐ ಆಧಾರಿತ ವಹಿವಾಟುಗಳು ನಡೆಯುತ್ತಿವೆ. ಇವು ಡಿಜಿಟಲ್ ಪಾವತಿಯ ಅರ್ಧಕ್ಕಿಂತ ಹೆಚ್ಚು ಖಾತೆಯನ್ನು ಹೊಂದಿವೆ. ಒಂದು ರೀತಿಯಲ್ಲಿ, UPI ವ್ಯವಸ್ಥೆಯು ಸಂಪೂರ್ಣ ಪಾವತಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಿದೆ. ಈಗ ಈ ಪಯಣದಲ್ಲಿ ಮತ್ತೊಂದು ಹೆಜ್ಜೆ ಇಡಲಾಗಿದೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://m.dailyhunt.in/news/india/kannada/etvbhar9348944527258-epaper-etvbhkn/upi+atm+kyur+kod+skyaan+maadidre+saaku+kaard+illade+etiemnindha+hana+padeyabahudu+-newsid-n535505074?listname=newspaperLanding&topic=business&index=1&topicIndex=8&mode=pwa&action=click

Leave a Reply

Your email address will not be published. Required fields are marked *