ಒಳಮೀಸಲಾತಿ ಜಾರಿಗಾಗಿ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಬಾರದು: ಮಾಜಿ ಸಚಿವ ಎಚ್.ಆಂಜನೇಯ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಜು.2 : ಒಳಮೀಸಲಾತಿ ಜಾರಿಗಾಗಿ ರಾಜ್ಯದಲ್ಲಿ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆ ಕಾರ್ಯ ಮತ್ತೆ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಬಾರದು ಎಂದು ಮಾಜಿ ಸಚಿವ ಎಚ್.ಆಂಜನೇಯ ಕೋರಿದರು.

ಬೆಂಗಳೂರಿನಲ್ಲಿ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಆಯೋಗದ ಕಚೇರಿಗೆ ಬುಧವಾರ ಭೇಟಿ ಮಾಡಿ ಮನವಿ ಮಾಡಿಕೊಂಡ ಅವರು, ಮೂರು ದಶಕಗಳ ಮಾದಿಗ ಸಮುದಾಯದ ಸಮಗ್ರ ಹೋರಾಟದ ಫಲ ಒಳಮೀಸಲಾತಿ ಜಾರಿಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದ್ದು, ಅದನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧರಾಗಿದ್ದಾರೆ. ಆದರೆ, ಎಕೆ, ಎಡಿ, ಆದಿಆಂಧ್ರ ಈ ಮೂರು ಜಾತಿಸೂಚಕಗಳಲ್ಲಿ ಮಾದಿಗ, ಛಲವಾದಿ ಸಮುದಾಯದವರು ಗುರುತಿಸಿಕೊಂಡಿರುವುದೇ ಮೀಸಲಾತಿ ಹಂಚಿಕೆ ಸಮಸ್ಯೆ ಆಗಿದೆ ಎಂದರು.

ಈ ಗೊಂದಲಕ್ಕೆ ತೆರೆ ಎಳೆದು ಅವರರ ಸಂಖ್ಯೆ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಗುರುತಿಸಲು ಪರಿಶಿಷ್ಟರಿಗೆ ಸೀಮಿತಗೊಳಿಸಿ ರಾಜ್ಯದಲ್ಲಿ ಮೇ 5ರಂದು ಜಾತಿಗಣತಿ ಸಮೀಕ್ಷೆ ಆರಂಭಗೊಂಡಿದೆ. ಆರಂಭದಲ್ಲಿ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಆತಂಕ,ಗೊಂದಲಕ್ಕೆ ಕಾರಣವಾಗಿದ್ದು, ಕಾಲಕ್ರಮೇಣ ಸುಗಮವಾಗಿ ಆಗಿದೆ. ಆದರೆ, ಬೆಂಗಳೂರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲವೆಂಬ ಕಾರಣಕ್ಕೆ ಮೂರು ಬಾರಿ ಸಮೀಕ್ಷೆಯನ್ನು ವಿಸ್ತರಣೆ ಮಾಡಲಾಗಿತ್ತು ಎಂದು ಹೇಳಿದರು.

ಈಗ ಮತ್ತೊಮ್ಮೆ ಬೆಂಗಳೂರು ಮಹಾನಗರ ಪಾಲಿಕೆಗೆ ಸೀಮಿತಗೊಳಿಸಿ ಜು.6ರ ವರೆಗೆ ವಿಸ್ತರಣೆ ಮಾಡಲಾಗಿದೆ. ಇದೇ ಅಂತಿಮ ಅವಕಾಶ ಆಗಬೇಕು. ಯಾವುದೇ ಕಾರಣಕ್ಕೂ ಇನ್ನೊಮ್ಮೆ ವಿಸ್ತರಣೆ ಮಾಡಲೇಬಾರದು. ಈ ನಿಟ್ಟಿನಲ್ಲಿ ಆಯೋಗ ಕಠಿಣ ಕ್ರಮಕೈಗೊಳ್ಳಬೇಕು ಎಂದು ಕೋರಿದರು.

ಈಗಾಗಲೇ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳ್ಳುವವರೆಗೂ ಬ್ಯಾಕ್‍ಲಾಗ್ ಸೇರಿ ಎಲ್ಲ ರೀತಿಯ ಸರ್ಕಾರಿ ಹುದ್ದೆಗಳ ನೇಮಕಾತಿಗೆ ತಡೆ ನೀಡಿದೆ. ಹಲವು ತಿಂಗಳುಗಳೇ ಆಗಿರುವುದರಿಂದ ಬಹಳಷ್ಟು ವಿದ್ಯಾವಂತ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಜೊತೆಗೆ ಒಳಮೀಸಲಾತಿ ಜಾರಿ ವಿಷಯದಲ್ಲಿ ಅನಗತ್ಯ ಗೊಂದಲ ಹುಟ್ಟುಹಾಕುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ಏಕಸದಸ್ಯ ಆಯೋಗದ ಅಧ್ಯಕ್ಷರಾದ ತಾವು ಯಾವುದೇ ಕಾರಣಕ್ಕೂ ಸಮೀಕ್ಷೆ ಜು.6ರ ನಂತರ ವಿಸ್ತರಣೆ ಮಾಡಬಾರದು ಎಂದು ತಿಳಿಸಿದರು.

ಜೊತೆಗೆ ಜು.6 ಸಮೀಕ್ಷೆಗೆ ಅಂತಿಮ ದಿನವಾಗಲಿದ್ದು, ತಕ್ಷಣವೇ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಈ ತಿಂಗಳಾಂತ್ಯದಲ್ಲಿಯೇ ಒಳಮೀಸಲಾತಿ ಜಾರಿಗೊಳ್ಳುವ ರೀತಿ ಸಹಕರಿಸಬೇಕು. ಈ ನಿಟ್ಟಿನಲ್ಲಿ ತಾವು ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಮೂಲಕ ನೊಂದ, ಕಾಯುತ್ತಿರುವ ಸಮುದಾಯಗಳಿಗೆ ನ್ಯಾಯ ಒದಗಿಸಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಇದ್ದರು.

Leave a Reply

Your email address will not be published. Required fields are marked *