CCL 2025: ತೆಲುಗು ವಾರಿಯರ್ಸ್​ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್​ಗೆ ಬೃಹತ್ ಜಯ

Celebrity Cricket League 2025: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ತೆಲುಗು ವಾರಿಯರ್ಸ್ ವಿರುದ್ಧ ಸುಲಭ ಜಯ ಸಾಧಿಸಿತು. ಡಾರ್ಲಿಂಗ್ ಕೃಷ್ಣ ಅವರ ಸ್ಫೋಟಕ 80 ರನ್‌ಗಳು ಮತ್ತು ಚಂದನ್ ಹಾಗೂ ಅನೂಪ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಕರ್ನಾಟಕ ತಂಡಕ್ಕೆ ಸುಲಭ ಜಯ ಒಲಿಯಿತು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ ಮೊದಲ ದಿನದ ಎರಡನೇ ಪಂದ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್​ ಹಾಗೂ ಅಖೀಲ್ ಅಕ್ಕಿನೇನಿ ನಾಯಕತ್ವದ ತೆಲುಗು ವಾರಿಯರ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆಲ್​ರೌಂಡರ್ ಪ್ರದರ್ಶನ ನೀಡಿದ ಕರ್ನಾಟಕ ಬುಲ್ಡೋಜರ್ಸ್ ತಂಡ 46 ರನ್​ಗಳ ಅಮೋಘ ಜಯ ಸಾಧಿಸಿತು. ಬ್ಯಾಟಿಂಗ್​ನಲ್ಲಿ ಡಾರ್ಲಿಂಗ್ ಕೃಷ್ಣ ಸ್ಫೋಟಕ 80 ರನ್​ಗಳ ಇನ್ನಿಂಗ್ಸ್ ಆಡಿದರೆ. ಬೌಲಿಂಗ್‌ನಲ್ಲಿ ಚಂದನ್ ಹಾಗೂ ಅನೂಪ್ ಸಿಳೀನ್ ಅಮೋಘ ಪ್ರದರ್ಶನ ನೀಡಿದರು.

ಕೃಷ್ಣ ಸ್ಫೋಟಕ ಬ್ಯಾಟಿಂಗ್

ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ ಮೊದಲ 10 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿತು. ತಂಡದ ಒರ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಆರಂಭಿಕ ಆಟಗಾರ ಡಾರ್ಲಿಂಗ್ ಕೃಷ್ಣ ಕೇವಲ 38 ಎಸೆತಗಳಲ್ಲಿ ಸ್ಫೋಟಕ 80 ರನ್ ಕಲೆಹಾಕಿದರು. ಈ ಇನ್ನಿಂಗ್ಸ್​ನಲ್ಲಿ ಕೃಷ್ಣರನ್ನು ಬಿಟ್ಟರೆ ತಂಡದ ಉಳಿದ ಆಟಗಾರರಿಂದ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಕಂಡುಬರಲಿಲ್ಲ. ಆದರೆ ಕೃಷ್ಣನಿಗೆ ಸಾಥ್ ನೀಡಿದ ಕರಣ್ ಕೂಡ ಅಜೇಯ 11 ರನ್​ಗಳ ಇನ್ನಿಂಗ್ಸ್ ಆಡಿದರು.

ಅಖಿಲ್ ಅರ್ಧಶತಕ

ಕರ್ನಾಟಕ ತಂಡವನ್ನು 113 ರನ್​ಗಳಿಗೆ ನಿಯಂತ್ರಿಸಿ ಬ್ಯಾಟಿಂಗ್‌ ಆರಂಭಿಸಿದ ತೆಲುಗು ವಾರಿಯರ್ಸ್​ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್​ಗೆ ಆರಂಭಿಕರಿಬ್ಬರು 4 ಓವರ್​ಗಳಲ್ಲಿ 38 ರನ್ ಕಲೆಹಾಕಿದರು. ಆದಾಗ್ಯೂ ಕರ್ನಾಟಕ ತಂಡದ ಬೌಲರ್​ಗಳು ಹೆಚ್ಚು ರನ್ ಬಿಟ್ಟುಕೊಡದೆ ಎದುರಾಳಿ ತಂಡಕ್ಕೆ ಒತ್ತಡ ಹೇರಿದರು. ಆದರೆ ತೆಲುಗು ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಅಖಿಲ್ ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡವನ್ನು 10 ಓವರ್​ಗಳಲ್ಲಿ 99 ರನ್​ಗಳಿಗೆ ಕೊಂಡೊಯ್ದರು.

ರಾಜೀವ್- ಕರಣ್ ಜೊತೆಯಾಟ

14 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ನಿಗದಿತ 10 ಓವರ್​ಗಳಲ್ಲಿ 123 ರನ್ ಕಲೆಹಾಕಿ ತೆಲುಗು ವಾರಿಯರ್ಸ್​ ತಂಡಕ್ಕೆ 137 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು. ಎರಡನೇ ಇನ್ನಿಂಗ್ಸ್​ನಲ್ಲಿ ತಂಡದ ಪರ ರಾಜೀವ್ 25 ರನ್​ಗಳ ಇನ್ನಿಂಗ್ಸ್ ಆಡಿದರೆ, ಕರಣ್ ಕೂಡ ಸ್ಫೋಟಕ 34 ರನ್​ಗಳ ಕಾಣಿಕೆ ನೀಡಿದರು. ಈ ಇಬ್ಬರು ಆಟಗಾರರು ತಮ್ಮ ಹೊಡಿಬಡಿ ಆಟದ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ನೆರವಾದರು.

ಚಂದನ್- ಅನೂಪ್ ಸ್ಪಿನ್ ಮ್ಯಾಜಿಕ್

137 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ತೆಲುಗು ವಾರಿಯರ್ಸ್​ ತಂಡಕ್ಕೆ ಆರಂಭಿಕ ತಮನ್ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ರಾಜೀವ್ ಅವರ ಒಂದೇ ಓವರ್​ನಲ್ಲಿ 1 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 19 ರನ್ ಕಲೆಹಾಕಿದರು. ಆದರೆ 37 ರನ್ ಗಳಿಸಿ ತಮನ್ ಔಟಾದ ಬಳಿಕ ತೆಲುಗು ತಂಡದ ಇನ್ನಿಂಗ್ಸ್ ಹಳಿತಪ್ಪಿತು. ಇದರ ಜೊತೆಗೆ ನಾಯಕ ಅಕಿಲ್ ಕೂಡ 9 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಯಾವ ಬ್ಯಾಟ್ಸ್‌ಮನ್​ಗೂ ಕ್ರೀಸ್​ನಲ್ಲಿ ನಿಂತು ರನ್ ಕಲೆಹಾಕಲು ಕರ್ನಾಟಕ ತಂಡದ ಬೌಲರ್​ಗಳು ಅವಕಾಶ ಮಾಡಿಕೊಡಲಿಲ್ಲ.

Source: https://tv9kannada.com/sports/cricket-news/ccl-2025-karnatakas-dominant-victory-over-telugu-warriors-psr-975958.html

Leave a Reply

Your email address will not be published. Required fields are marked *